More

    ಮಾರುಕಟ್ಟೆಗೆ ಮುಗಿಬಿದ್ದ ಜನಸ್ತೋಮ

    ಧಾರವಾಡ: ಕರೊನಾ 2ನೇ ಅಲೆಯ ಹಿನ್ನೆಲೆಯಲ್ಲಿ ಶನಿವಾರ, ಭಾನುವಾರ ಅನುಷ್ಠಾನಗೊಳಿಸಿದ್ದ ವಾರಾಂತ್ಯದ ಕರ್ಫ್ಯೂಗೆ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸಿದ್ದರು. ಆದರೆ, ಸೋಮವಾರದ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿತ್ತು. ಜನ ಮಾರುಕಟ್ಟೆಗೆ ಮುಗಿಬಿದ್ದಿದ್ದರಿಂದ ಪ್ರಮುಖ ಅಂಗಡಿಗಳ ಮುಂದೆ ಜನಸ್ತೋಮ ಕಂಡುಬಂತು.

    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಮಂಗಳವಾರ ರಾತ್ರಿಯಿಂದ ಮುಂದಿನ 14 ದಿನಗಳವರೆಗೆ ರಾಜ್ಯಾದ್ಯಂತ ಜನತಾ ಕರ್ಫ್ಯೂ ಘೋಷಿಸಲಾಯಿತು. ಮಧ್ಯಾಹ್ನದ ನಂತರ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಮಾರುಕಟ್ಟೆಗೆ ಮುಗಿಬಿದ್ದರು.

    ಮತ್ತೊಮ್ಮೆ ಲಾಕ್​ಡೌನ್ ಘೋಷಣೆಯಾದಂತೆ ವರ್ತಿಸಿದ ಸಾರ್ವಜನಿಕರು 2 ವಾರಗಳಿಗಾಗುವಷ್ಟು ದಿನಸಿ ಪದಾರ್ಥ ಹಾಗೂ ಅಗತ್ಯ ವಸ್ತುಗಳನ್ನು ಖರೀದಿಸಿದರು. ಗ್ರಾಮೀಣ ಪ್ರದೇಶಗಳಿಂದ ಸರಕು ಸಾಗಣೆ ವಾಹನಗಳೊಂದಿಗೆ ಬಂದ ವ್ಯಾಪಾರಸ್ಥರು ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದಿದ್ದರು. ಇದರಿಂದ ಸಿಬಿಟಿ ಸುತ್ತಮುತ್ತ, ಅಕ್ಕಿಪೇಟೆ, ಸುಭಾಸ ರಸ್ತೆ, ರೀಗಲ್ ವೃತ್ತ, ವಿಜಯಾ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಕಂಡುಬಂದಿತು.

    ಅಂತರ ಮರೆತ ಜನ

    ಜಿಲ್ಲೆಯಲ್ಲಿ ಪ್ರತಿದಿನ ಕೋವಿಡ್ ಪೀಡಿತರ ಸಂಖ್ಯೆ ದಿನೇದಿನೇ ಏರುತ್ತಲೇ ಇದೆ. ಜಿಲ್ಲಾಡಳಿತ ಮಾಸ್ಕ್ ಧರಿಸುವುದು ಹಾಗೂ ಪರಸ್ಪರ ಅಂತರ ಕಾಪಾಡುವಂತೆ ಜಾಗೃತಿ ಮೂಡಿಸಿದ್ದಲ್ಲದೆ, ದಂಡ ಕೂಡ ವಿಧಿಸುತ್ತಿದೆ. ಆದರೆ, ಇದ್ಯಾವುದರ ಪರಿವೆಯೇ ಇಲ್ಲದಂತೆ ಸಾರ್ವಜನಿಕರು ವರ್ತಿಸಿದರು. ಬಹುತೇಕ ಜನ ಅಗತ್ಯ ವಸ್ತುಗಳ ಖರೀದಿಗಾಗಿ ಮಾಸ್ಕ್ ಧರಿಸದೆ ಅಂತರ ಕಾಪಾಡದೆ ಮುಗಿಬಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts