More

    ಮಾರಕ ಕೃಷಿ ಕಾಯ್ದೆಗಳ ರದ್ದತಿಗಾಗಿ ಆಗ್ರಹ  -ನ.26ರಿಂದ ಬೆಂಗಳೂರಲ್ಲಿ ರೈತರ ಧರಣಿ 

    ದಾವಣಗೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ, ಮಾರಕ ಕೃಷಿ ಕಾಯ್ದೆಗಳ ರದ್ದತಿಗಾಗಿ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಶ್ರಯದಲ್ಲಿ ನ.26ರಿಂದ 28ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಹಮ್ಮಿಕೊಂಡಿದೆ.
    ದಾವಣಗೆರೆ ಜಿಲ್ಲೆಯಿಂದ ಈ ಧರಣಿಯಲ್ಲಿ 400 ಜನ ಭಾಗವಹಿಸಲಿದ್ದಾರೆ ಎಂದುಕರ್ನಾಟಕ ರಾಜ್ಯ ಹಾಗೂ ಹಸಿರುಸೇನೆ ರಾಜ್ಯ ಗೌರವಾಧ್ಯಕ್ಷ ಕುರುವ ಗಣೇಶಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ರಾಜ್ಯದಲ್ಲಿ ಬರಗಾಲವಿದ್ದರೂ ಇದುವರೆಗೆ ಬೆಳೆ ಪರಿಹಾರ ನೀಡಿಲ್ಲ. ವಿಮಾ ಕಂಪನಿಗಳು ಹಣ ಕೊಡುತ್ತಿಲ್ಲ. ವಿಮೆ ನೀಡದ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಮಾರಕ ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
    ಅಲ್ಪಾವಧಿ ಬೆಳೆ ಸಾಲವನ್ನು ಮಧ್ಯಮಾವಧಿ ಸಾಲವಾಗಿ ಪರಿವರ್ತಿಸಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕೆಂದು ಸರ್ಕಾರ ನಿರ್ದೇಶನ ನೀಡಿದೆ. ಆದರೆ ಜಿಲ್ಲಾ ಸಹಕಾರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಇದನ್ನು ತಿದ್ದುಪಡಿ ಮಾಡಿದ್ದಾರೆ. ಸಾಲ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
    ಈಗ ಭತ್ತದ ಆವಕ ಹೆಚ್ಚಾಗಿ ಬರುತ್ತಿದ್ದು, ಕೂಡಲೇ ಖರೀದಿ ಕೇಂದ್ರ ತೆರೆಯಬೇಕು. ಭತ್ತದ ಬೆಳೆಗೆ ವೈಜ್ಞಾನಿಕವಾಗಿ ಬೆಲೆ ನಿಗದಿಪಡಿಸಬೇಕು. ಕಾರ್ಪೋರೇಟ್ ಪರವಾದ ಪಿಎಂ ಫಸಲ್ ಭಿಮಾ ಯೋಜನೆ ರದ್ದುಪಡಿಸಬೇಕು. ವಿದ್ಯುತ್ ತಿದ್ದುಪಡಿ ಮಸೂದೆ 2022 ಅನ್ನು ಹಿಂಪಡೆಯಭೇಕೆಂದು ಒತ್ತಾಯಿಸಿದರು.
    ರಾಜ್ಯ ಸರ್ಕಾರ ಗ್ಯಾರಂಟಿಗಳ ಬಗ್ಗೆ ಚಿಂತಿಸುತ್ತಿದೆಯೇ ಹೊರತು ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ. ಏಳು ತಾಸು ವಿದ್ಯುತ್ ನೀಡುವುದಾಗಿ ಹೇಳುವ ಸಿಎಂ ಈಗ ರೈತರಿಗೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ. ಈ ಸರ್ಕಾರಕ್ಕೆ ಬರುವ ದಿನದಲ್ಲಿ ರೈತರ ಶಾಪ ತಟ್ಟಲಿದೆ. ಬರ ಪರಿಹಾರ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
    ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ಮಾತನಾಡಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕಾಂಗ್ರೆಸ್ ನಡೆದುಕೊಳ್ಳುತ್ತಿಲ್ಲ. ಸ್ವಾಮಿನಾಥನ್ ವರದಿ ಜಾರಿ ಮಾಡಿಲ್ಲ. ಹಗಲುವೇಳೆ ವಿದ್ಯುತ್ ನೀಡಬೇಕು. ಐಪಿ ಸೆಟ್‌ಗಳಿಗೆ ರೈತರೇ ಸ್ವಯಂ ವೆಚ್ಚದಲ್ಲಿ ಕಂಬ, ತಂತಿ ಹಾಗೂ ಟಿ.ಸಿಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಅವೈಜ್ಞಾನಿಕ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
    ಜಿಲ್ಲಾಧ್ಯಕ್ಷ ಟಿ.ಪಿ.ಮರುಳಸಿದ್ದಯ್ಯ ಮಾತನಾಡಿ ಅಡಕೆ ಬೆಳೆಯ ಹನಿ ನೀರಾವರಿಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನವನ್ನು ಕೇವಲ ಮೂರು ತಾಲೂಕುಗಳಿಗೆ ನೀಡಲಾಗುತ್ತಿದೆ. ದಾವಣಗೆರೆ, ಹರಿಹರ, ಜಗಳೂರಿನ ರೈತರಿಗೂ ಈ ಸೌಲಭ್ಯ ವಿಸ್ತರಿಸಬೇಕೆಂದು ಒತ್ತಾಯಿಸಿ ತೋಟಗಾರಿಕೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
    ರೈತ ಮುಖಂಡರಾದ ಸಂತೋಷ್‌ನಾಯ್ಕ, ಎಂ.ಅಭಿಲಾಷ್, ಮಲ್ಲೇನಹಳ್ಳಿ ನಾಗರಾಜ್, ಮಲ್ಲೇನಹಳ್ಳಿ ನಾಗರಾಜ್ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts