More

    ಮಾನವ ಕಳ್ಳ ಸಾಗಣೆ ತಡೆಗೆ ಸಹಕಾರ ಅಗತ್ಯ

    ಚನ್ನರಾಯಪಟ್ಟಣ: ಕಾನೂನಿನಲ್ಲಿ ಪ್ರತಿಯೊಬ್ಬರು ಸಮಾನರು. ಒಬ್ಬರ ಹಕ್ಕನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯ ಸಮವಾಗಿ ಸಿಗಬೇಕು ಎಂಬುದೇ ಕಾನೂನಿನ ಆಶಯ ಎಂದು ಪಟ್ಟಣದ ಎರಡನೇ ಅಧಿಕ ಸಿವಿಲ್ ನ್ಯಾಯಾಧೀಶೆ ಪಿ.ಮಮತಾ ತಿಳಿಸಿದರು.

    ಪಟ್ಟಣದ ನವೋದಯ ಪದವಿ ಪೂರ್ವ ಕಾಲೇಜಿನಲ್ಲಿ ಪೊಲೀಸ್ ಇಲಾಖೆ, ನವೋದಯ ವಿದ್ಯಾಸಂಘ, ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾನವ ಕಳ್ಳ ಸಾಗಾಣೆ ತಡೆ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಪ್ರಪಂಚದಾದ್ಯಂತ ಮಾನವ ಕಳ್ಳ ಸಾಗಾಣಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಈ ಕೃತ್ಯದಿಂದ ಸಾಗಾಣಿಕೆದಾರರಿಗೆ ಆಗುವ ಲಾಭವೇನು? ಒಬ್ಬ ವ್ಯಕ್ತಿಯ ಅಪಹರಣದಿಂದ ಸಮಾಜಕ್ಕೆ ಆಗುವ ನಷ್ಟವೇನು? ಎಂಬುದರ ಜ್ಞಾನ ವಿದ್ಯಾರ್ಥಿಗಳಿಗೆ ಇರಬೇಕು. ಇಂದು ಮಾನವ ಕಳ್ಳ ಸಾಗಾಣಿಕೆ ಹೆಸರಿನಲ್ಲಿ ಮನುಷ್ಯನ ಅಂಗಾಂಗ ತೆಗೆದು ಮಾರಾಟ ಮಾಡುವುದು, ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡುವುದು ಹಾಗೂ ಜೀತಪದ್ಧತಿ ಸೇರಿ ಇನ್ನಿತರ ಕಾನೂನು ಬಾಹಿರ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ವಿದ್ಯಾರ್ಥಿಗಳು ತಮ್ಮ ಅಕ್ಕಪಕ್ಕದ ಏರಿಯಾಗಳಲ್ಲಿ, ಗ್ರಾಮಗಳಲ್ಲಿ ಯಾರೇ ಕಾಣೆಯಾಗಲಿ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವುದನ್ನು ರೂಢಿಸಿಕೊಳ್ಳಬೇಕು. 14 ವರ್ಷದೊಳಗಿನ ಮಕ್ಕಳಿಂದ ದುಡಿಸಿಕೊಳ್ಳುವಂತಿಲ್ಲ ಮತ್ತು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆಗೆ ಫೋಕ್ಸೋ ಬಗ್ಗೆ ತಿಳಿಯಬೇಕು ಎಂದ ಅವರು, ಗ್ರಾಮಗಳಲ್ಲಿ ಜೀತ ಪದ್ಧತಿಯ ಕುರಿತಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂದು ಕರೆ ಕೊಟ್ಟರು.

    ಮಾನವ ಕಳ್ಳ ಸಾಗಾಣಿಕೆ ಹಾಗೂ ಪೋಕ್ಸೋ ಕುರಿತು ವಕೀಲೆ ಸಿ.ಎಲ್.ಭಾಗ್ಯಾ ಉಪನ್ಯಾಸ ನೀಡಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಎ.ವಾಸು, ಕಾರ್ಯದರ್ಶಿ ರಾಘವೇಂದ್ರ ಚಲ್ಯ, ಕಾಲೇಜು ಪ್ರಾಂಶುಪಾಲ ಎಂ.ಎಸ್.ಕಾಂತರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts