More

    ಮಾದರಿ ನಗರ ನಿರ್ಮಾಣವಾಗಲಿ

    ಬಾಗಲಕೋಟೆ: ನಗರದ ಹಳೇ ತಹಸೀಲ್ದಾರ್ ಕಚೇರಿ ಆವರಣದ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಬಾಗಲಕೋಟೆ ನಗರಾಭಿವೃದ್ಧ್ದಿ ಪ್ರಾಧಿಕಾರದ ನೂತನ ಕಚೇರಿ ಉದ್ಘಾಟನೆ ಹಾಗೂ ಪ್ರಾಧಿಕಾರದ ಆಡಳಿತ ಮಂಡಳಿ ಸದಸ್ಯರ ಪದಗ್ರಹಣ ಸಮಾರಂಭ ಬುಧವಾರ ನಡೆಯಿತು.

    ನೂತನ ಕಚೇರಿ ಉದ್ಘಾಟಿಸಿ ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಹೊಸದಾಗಿ ಘೋಷಣೆಯಾದ ಎಲ್ಲ ಜಿಲ್ಲೆಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿತ್ತು. ಆದರೆ, 1998 ರಿಂದಲೂ ಬಾಗಲಕೋಟೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅನುಷ್ಠಾನಗೊಂಡಿರಲಿಲ್ಲ. ಇದೀಗ ಬಿಜೆಪಿ ಸರ್ಕಾರ ಪ್ರಾಧಿಕಾರ ಅಸ್ಥಿತ್ವಕ್ಕೆ ತಂದಿದೆ. ಮುಳುಗಡೆ ನಗರಿ ಬಾಗಲಕೋಟೆ ಚಂಡಿಗಡ ಮಾದರಿಯಲ್ಲಿ ರೂಪುಗೊಳ್ಳಬೇಕು ಎಂದು ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ ಕನಸು ಕಂಡಿದ್ದರು. ಆಡಳಿತ ಮಂಡಳಿ ಸದಸ್ಯರು ಇದನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ಸಮಾಜ, ಸರ್ಕಾರದ ನಡುವಿನ ಕೊಂಡಿಯಾಗಿ ಕೆಲಸ ಮಾಡಬೇಕು. ದೇಶ, ರಾಜ್ಯಕ್ಕೆ ಮಾದರಿ ನಗರ ನಿರ್ಮಿಸಬೇಕು ಎಂದು ಸಲಹೆ ನೀಡಿದರು.

    ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಅನೇಕ ವರ್ಷಗಳ ಹಿಂದೆ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರವಾಗಿ ಮಾರ್ಪಟ್ಟಿದ್ದರು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿರಲಿಲ್ಲ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ(ಬಿಟಿಡಿಎ) ಇದೆ ಎನ್ನುವ ಕಾರಣಕ್ಕೆ ಹಿನ್ನಡೆಯಾಗಿತ್ತು. ಬಿಟಿಡಿಎ ಕೇವಲ ಪುನರ್ವಸತಿಗೆ ಮಾತ್ರ ಸೀಮಿತವಾಗಿ ಕಾರ್ಯನಿರ್ವಹಿಸಿ ಮುಳುಗಡೆ ಸಂತ್ರಸ್ತರಿಗೆ ನಿವೇಶನ ನೀಡುತ್ತದೆ. ಆದರೆ, ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ನಗರದ ಎಲ್ಲ ಜನತೆಗೂ ಸೇವೆ ನೀಡಲಿದೆ. ಶೇ.50*50 ಅನುಪಾತದಲ್ಲಿ ಲೇಔಟ್ ವಿನ್ಯಾಸಗೊಳಿಸಿ ಬಡವರು, ಸಾಮಾನ್ಯರಿಗೆ ನಿವೇಶನ ನೀಡಲಿದೆ. ಡಿಸಿ, ಎಸ್ಪಿ, ಡಿಎಚ್‌ಒ ನಾಮನಿರ್ದೇಶಿತ ಸದಸ್ಯರಾಗಿರುತ್ತಾರೆ. ನೂತನ ಪದಾಧಿಕಾರಿಗಳು ಸವಾಲ್ ಆಗಿ ಸ್ವೀಕರಿಸಿ ಕಾರ್ಯನಿರ್ವಹಿಸಬೇಕು. ಸಂತ್ರಸ್ತರ ಅಲ್ಲದವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಪರಿಶ್ರಮ ವಹಿಸಬೇಕು ಎಂದರು.
    ಪ್ರಾಧಿಕಾರ ನೂತನ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ ಮಾತನಾಡಿ, ನಮಗೆ ನೀಡಿರುವ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಲಾಗುವುದು. ಬಾಗಲಕೋಟೆ ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.

    ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಅಲ್ಲದೆ, ಪ್ರಾಧಿಕಾರದ ಸದಸ್ಯರಾದ ಗುಂಡು ಶಿಂಧೆ, ರಾಜು ನಾಯ್ಕರ, ಚಂದ್ರಪ್ರಕಾಶ ಚೌಧರಿ, ಜಯಂತ ಕುರುಂದವಾಡ, ಶಾಂತಾ ಐಕೂರ ಅವರನ್ನು ಸನ್ಮಾನಿಸಲಾಯಿತು. ಎಸ್ಪಿ ಲೋಕೇಶ ಜಗಲಾಸರ್, ಪ್ರಾಧಿಕಾರದ ಆಯುಕ್ತ ಗಣಪತಿ ಪಾಟೀಲ, ವಿಪ ಮಾಜಿ ಸದಸ್ಯ ನಾರಾಯಸಾ ಭಾಂಡಗೆ, ಜಿಪಂ ಸದಸ್ಯ ಹೂವಪ್ಪ ರಾಠೋಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಸೇರಿ ಇತರರು ಉಪಸ್ಥಿತರಿದ್ದರು.

    ಬಾಗಲಕೋಟೆ ನಗರ ಅಭಿವೃದ್ಧಿ ಪಡಿಸುವಲ್ಲಿ ಶಾಸಕ ವೀರಣ್ಣ ಚರಂತಿಮಠ ಅವರ ಕಾರ್ಯ ಶ್ಲಾಘನೀಯ. ಕೃಷ್ಣಾ ಮೇಲ್ದಂಡೆ ಯೋಜನೆ -3 ನೇ ಹಂತ ಪೂರ್ಣಗೊಳಿಸಲು ನಮ್ಮ ಭಾಗದ ಶಾಸಕರು ಸೇರಿ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು.
    – ಹನುಮಂತ ನಿರಾಣಿ ವಿಧಾನ ಪರಿಷತ್ ಸದಸ್ಯ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts