More

    ಮಾದಕ ದ್ರವ್ಯಗಳ ಬಳಕೆ ದುಷ್ಪರಿಣಾಮ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ:ಶಾಸಕ ದಿನೇಶ್ ಗೂಳಿಗೌಡ ಮುಖ್ಯಮಂತ್ರಿಗಳಿಗೆ ಬರೆದ ಪತ್ರಕ್ಕೆ ಸ್ಪಂದನೆ

    ಬೆಂಗಳೂರು: ರಾಜ್ಯದ ಎಲ್ಲೆಡೆ ಶಿಕ್ಷಣ ಸಂಸ್ಥೆಗಳ ಸುತ್ತ ಮಾದಕ ದ್ರವ್ಯಗಳ ಮಾರಾಟ ಮತ್ತು ಸೇವನೆ ತಡೆಗಟ್ಟುವುದು ಹಾಗೂ ಡ್ರಗ್ಸ್ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ದಿಟ್ಟ ಹೆಜ್ಜೆಯನ್ನಿಡುವಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
    ಈ ಸಂಬಂಧ ಎಲ್ಲ ಪೊಲೀಸ್ ಆಯುಕ್ತರು, ಐಜಿಗಳು ಹಾಗೂ ಎಸ್‌ಪಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಶಾಸಕ ದಿನೇಶ್ ಗೂಳಿಗೌಡ ಅವರ ವಿದ್ಯಾರ್ಥಿಗಳ ಕಾಳಜಿಗೆ ಪೊಲೀಸ್ ಇಲಾಖೆ ಈಗ ಸೂಕ್ತ ಕ್ರಮವನ್ನು ಕೈಗೊಂಡಿದೆ.
    ಶಾಸಕ ದಿನೇಶ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಈ ಕುರಿತು ಮನವಿ ಮಾಡಿದ್ದರು. ಮನವಿಯನ್ನು ಪರಿಗಣಿಸಿದ ಸಿಎಂ ಈ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಪೊಲೀಸ್ ಮಹಾ ನಿದೇಶಕರು(ಡಿಜಿ) ಎಲ್ಲ ಮಹಾ ನಗರಗಳ ಪೊಲೀಸ್ ಕಮೀಷನರ್‌ಗಳು, ವಲಯಗಳ ಐಜಿಪಿಗಳು ಹಾಗೂ ಎಲ್ಲ ಜಿಲ್ಲೆಗಳ ಎಸ್‌ಪಿಗಳಿಗೆ ಈ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ಅಲ್ಲದೆ, ದಿನೇಶ ಗೂಳಿಗೌಡ ಅವರು ಬೆಂಗಳೂರು ನಗರದ ಪೊಲೀಸ್ ಆಯುಕ್ತರಿಗೆ ನೀಡಿದ ದೂರನ್ನು ಪರಿಗಣಿಸಿ ವಿಧಾನಸೌಧ ಪೊಲೀಸ್ ಠಾಣೆಯಿಂದ ಮಾ.13 ರಂದು ಬೆಂಗಳೂರು ಎಸ್‌ಜೆಪಿ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗಿತ್ತು.

    ದಿನೇಶ್ ಗೂಳಿಗೌಡ ಸಲ್ಲಿಸಿದ್ದ ಮನವಿಯಲ್ಲೇನಿತ್ತು?
    ಮಾದಕ ವ್ಯಸನಗಳಿಗೆ, ಗಾಂಜಾ ವಹಿವಾಟಿಗೆ ಪದೇ ಪದೇ ಮಕ್ಕಳು ಟಾರ್ಗೆಟ್ ಆಗುತ್ತಿರುವ ಬಗ್ಗೆ ನನಗೆ ಸಾಕಷ್ಟು ದೂರುಗಳು ಬಂದಿವೆ. ಅನೇಕ ಪಾಲಕರ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳುವುದು ಈಗಿನ ತುರ್ತು ಕ್ರಮಗಳಲ್ಲಿ ಒಂದು ಎಂಬುದು ನನ್ನ ಭಾವನೆಯಾಗಿದೆ. ಏಕೆಂದರೆ ಗಾಂಜಾ ಹಾವಳಿ ದೊಡ್ಡ ಪಿಡುಗಿನಂತೆ ವ್ಯಾಪಿಸಿದೆ. ಇದರ ಸುಳಿಗೆ ಯುವಜನತೆ ದೊಡ್ಡ ಸಂಖ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಶೈಕ್ಷಣಿಕ ಬದುಕು ಮೂರಾಬಟ್ಟೆಯಾಗಿದೆ. ಗಾಂಜಾ ಖರೀದಿಗೆ ಹಣವಿಲ್ಲದೆ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕಳ್ಳತನ, ಸುಲಿಗೆಗಳಿಗೆ ಕೆಲವರು ಇಳಿದಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಇದು ಪಾಲಕರನ್ನು ಕಂಗೆಡಿಸಿದೆ. ಈ ಸಕ್ರಿಯ ಜಾಲಕ್ಕೆ ಕೊನೆ ಹಾಡಲೇಬೇಕಿದೆ.
    ಇದನ್ನು ಕೂಲಂಕಷವಾಗಿ ನೋಡುತ್ತಾ ಹೋದರೆ ಪೊಲೀಸರಿಗೆ ಮಾಹಿತಿ ಇದ್ದರೂ ಏಕೆ ಸುಮ್ಮನಿದ್ದಾರೆ ಎಂಬ ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಆದರೆ, ಇನ್ನು ಮುಂದೆ ಹಾಗಾಗದೇ ಗಾಂಜಾ ಮಾರಾಟ ಹಾಗೂ ಸೇವನೆ ಜಾಲವನ್ನು ಬೇರು ಸಮೇತ ಕಿತ್ತೊಗೆಯಲು ತಾವು ಮುಂದಾಗಬೇಕು. ಇದಕ್ಕಾಗಿ ವಿಶೇಷ ತಂಡವನ್ನು ರಚನೆ ಮಾಡಿ ತಪ್ಪಿತಸ್ಥರಿಗೆ ಕಾನೂನಿನಡಿ ಕ್ರಮವನ್ನು ಜರುಗಿಸಬೇಕು ಎಂದು ಮನವಿ ಮಾಡಿದ್ದರು.

    ಸರ್ಕಾರ ತಗೆದುಕೊಳ್ಳಬಹುದಾದ ಕ್ರಮಗಳು:
    *ಜಿಲ್ಲಾ ಮಟ್ಟದಲ್ಲಿ ವಿಶೇಷ ದಳವನ್ನು ರಚಿಸುವುದು. ಆ ದಳಕ್ಕೆ ಮುಕ್ತ ಅಧಿಕಾರ ಮತ್ತು ಬೆಂಬಲ ನೀಡುವುದು
    ಸಾರ್ವಜನಿಕರ ಸಹಕಾರ ಪಡೆಯಲು ಸಹಾಯವಾಣಿಯನ್ನು ಆರಂಭಿಸುವುದು
    *ಜನರು ಮುಕ್ತವಾಗಿ ಮಾಹಿತಿ ನೀಡುವಂತಾಗಲು ಹೆಸರು ಮತ್ತು ವಿಳಾಸವನ್ನು ಗೌಪ್ಯವಾಗಿ ಇಡುವುದಾಗಿ ಮನವರಿಕೆ ಮಾಡುವುದು
    *ಶಾಲಾ, ಕಾಲೇಜು, ಶಿಕ್ಷಣ ಸಂಸ್ಥೆಗಳ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಶೇಷ ಗಸ್ತು ವ್ಯವಸ್ಥೆ ಮಾಡುವುದು
    *ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು
    *ಇಂಥ ಜಾಲದ ಬಗ್ಗೆ ಗಮನಕ್ಕೆ ಬಂದರೆ ಶಾಲಾ ಮುಖ್ಯಸ್ಥರು, ಇಲ್ಲವೇ ಪಾಲಕರ ಗಮನಕ್ಕೆ ತರುವಂತೆ ಮನವರಿಕೆ ಮಾಡುವುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts