More

    ಮಹಿಳೆ ಮೇಲೆ ರೌಡಿಶೀಟರ್​ನಿಂದ ಹಲ್ಲೆ

    ಹುಬ್ಬಳ್ಳಿ: ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ರೌಡಿಶೀಟರ್ ಹಾಗೂ ಮತ್ತೋರ್ವ ಸೇರಿ ಮಹಿಳೆಯೊಬ್ಬರೊಂದಿಗೆ ಜಗಳ ತೆಗೆದು ಆಕೆಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಇಲ್ಲಿನ ಹಳೇ ಹುಬ್ಬಳ್ಳಿ ಹೆಗ್ಗೇರಿ ಮಾರುತಿ ನಗರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

    ರಾಜೇಶ್ವರಿ ಹಲ್ಲೆಗೀಡಾದವರು. ರೌಡಿಶೀಟರ್ ಸಚಿನ್ ಹೆಬ್ಬಳ್ಳಿ ಹಾಗೂ ರಾಕೇಶ ಹೆಬ್ಬಳ್ಳಿ ಹಲ್ಲೆ ನಡೆಸಿದ ಆರೋಪಿಗಳು. ರಾಜೇಶ್ವರಿ ಅವರ ಮನೆಯ ಬಳಿ ಸಚಿನ್ ಹಾಗೂ ರಾಕೇಶ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದರು. ‘ಇಲ್ಲಿ ಕುಳಿತುಕೊಳ್ಳಬೇಡಿ, ಗಲಾಟೆ ಮಾಡಬೇಡಿ’ ಎಂದು ಹೇಳಿದ್ದಕ್ಕೆ ಸಚಿನ್ ಜಗಳ ತೆಗೆದು ತಲೆಗೆ ಮುಖಕ್ಕೆ ಹೊಡೆದು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

    ರಾಜೇಶ್ವರಿ ಮೂಗಿನಿಂದ ರಕ್ತಸ್ರಾವ ಉಂಟಾಗಿದ್ದು, ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಕೇಶ ವಿರುದ್ಧ ಈ ಹಿಂದೆ ಗಾಂಜಾ ಮಾರಾಟದ ಆರೋಪದಲ್ಲಿ ಎನ್​ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆ ನಂತರ ಆತನ ಮೇಲೆ ರೌಡಿಶೀಟ್ ತೆರೆಯಲಾಗಿತ್ತು. ಹೆಗ್ಗೇರಿಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಎಂಆರ್​ಪಿ ಅಂಗಡಿಯಲ್ಲಿ ಮದ್ಯ ಖರೀದಿಸಿ ತಂದು ಖಾಲಿ ನಿವೇಶನ ಅಥವಾ ಹೊರ ವಲಯದಲ್ಲಿ ಕುಳಿತು ಮದ್ಯ ಸೇವಿಸುತ್ತಾರೆ. ಮಹಿಳೆಯರು ಮತ್ತು ಮಕ್ಕಳು ಓಡಾಡುವ ಪ್ರದೇಶದಲ್ಲಿ ಚುಡಾಯಿಸುತ್ತ ಓಡಾಡುತ್ತಾರೆ. ಮಾರುತಿ ಕಾಲನಿಯಲ್ಲಿ ನಿತ್ಯ ರಾತ್ರಿ ಮದ್ಯ ಸೇವಿಸಿ ಗಲಾಟೆ ಮಾಡುತ್ತಾರೆ. ಈ ಬಗ್ಗೆ ಅನೇಕ ಬಾರಿ ಹಳೇಹುಬ್ಬಳ್ಳಿ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts