More

    ಮಹಿಳೆಯರಿಗೆ ಭದ್ರತೆ ಒದಗಿಸಿ

    ಗದಗ: ರಾಜ್ಯದ ಹಲವೆಡೆ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದಂಥ ಘಟನೆಗಳು ವರದಿಯಾಗಿವೆ. ಅವು ಮರುಕಳಿಸದಂತೆ ಆರೋಗ್ಯ, ಪೊಲೀಸ್ ಇಲಾಖೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಸೂಚಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್ ಕೇರ್ ಆರೈಕೆ ಕೇಂದ್ರಗಳಲ್ಲಿ ಮಹಿಳೆಯರಿಗೆ ಭದ್ರತೆ ನೀಡಬೇಕು. ಮಹಿಳಾ ಪೊಲೀಸರನ್ನು ನಿಯೋಜಿಸಬೇಕು. ಸಾಂತ್ವನ, ಸ್ವಾಧಾರ ಸೇರಿ ಮಹಿಳಾ ಪುನರ್ವಸತಿ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೆ ಆಶ್ರಯ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಬೇಕು. ದೇವದಾಸಿಯವರ ಮಕ್ಕಳ ದಾಖಲೆಗಳಲ್ಲಿ ತಂದೆ ಹೆಸರಿಲ್ಲದ ಕಾರಣಕ್ಕೆ ಕೆಲಸ ಸಿಗುತ್ತಿಲ್ಲ. ಅವರು ಜನರಿಂದ ಟೀಕೆಗೆ ಗುರಿಯಾಗುತ್ತಿದ್ದಾರೆ. ಈ ಕುರಿತು ಜನರಲ್ಲಿ ಜಾಗೃತಿ ಮಾಡಿಸಿ ಅನಿಷ್ಟ ಪದ್ಧತಿಗಳನ್ನು ತಡೆಗಟ್ಟಬೇಕು ಎಂದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಚ್.ಎಚ್. ಕುಕನೂರ ಮಾತನಾಡಿ, ಹಿರಿಯ ಮಹಿಳಾ ನಾಗರಿಕರಿಗೆ ವೃದ್ಧಾಪ್ಯ, ವಿಧವಾ ವೇತನ ಸೇರಿ ವಿವಿಧ ಯೋಜನೆಯಡಿ 73,911 ಜನರಿಗೆ ಮಾಸಾಶನ ನೀಡಲಾಗುತ್ತಿದೆ. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಮೃದ್ಧಿ ಯೋಜನೆಯಡಿ ಬೀದಿ ಬದಿಯ 72 ಮಹಿಳಾ ವ್ಯಾಪಾರಿಗಳಿಗೆ ತಲಾ 10,000 ರೂ. ಸಹಾಯಧನ ನೀಡಿದೆ. ಜಿಲ್ಲೆಯಲ್ಲಿ ಒಟ್ಟು 4368 ದಮನಿತ ಮಹಿಳೆಯರಿದ್ದು, 2014ರಿಂದ 2020ನೇ ಸಾಲಿನವರೆಗೆ ಚೇತನಾ ಯೋಜನೆಯಡಿ 84 ಜನರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು 50 ಸಾವಿರ ರೂ. ಸಹಾಯಧನ ನೀಡುತ್ತಿದ್ದು, ಇದುವರೆಗೆ 75 ಜನರಿಗೆ ನೀಡಲಾಗಿದೆ. ಎಚ್​ಐವಿ ಬಾಧಿತ ಮಹಿಳೆಯರಿಗೂ ನಿಗಮದಿಂದ ಸಹಾಯಧನ ನೀಡಲಾಗುತ್ತಿದೆ. ಕಳೆದ ಸಾಲಿನಲ್ಲಿ ಕಿರುಸಾಲ ಯೋಜನೆಯಡಿ ನಾಲ್ಕು ಸ್ತ್ರೀ ಶಕ್ತಿ ಗುಂಪುಗಳಿಗೆ 2 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ನೀಡಲಾಗಿದೆ ಎಂದರು. ಜಿಲ್ಲೆಯ 3489 ಕಟ್ಟಡ ಕಾರ್ವಿುಕ, 541 ಅಗಸ ಮಹಿಳೆಯರಿಗೆ 5000 ರೂ. ಸಹಾಯಧನ ನೀಡಲಾಗಿದೆ ಎಂದು ಕಾರ್ವಿುಕ ಕಲ್ಯಾಣಾಧಿಕಾರಿ ಸುಧಾ ಗರಗ ತಿಳಿಸಿದರು.

    ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಜಿಪಂ ಸಿಇಒ ಡಾ. ಆನಂದ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್, ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ, ಡಿಎಚ್​ಒ ಡಾ. ಸತೀಶ ಬಸರಿಗಿಡದ, ನಗರಾಭಿವೃದ್ಧಿ ಯೋಜನಾಧಿಕಾರಿ ಎಸ್.ಎನ್. ರುದ್ರೇಶ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts