More

    ಮಹಿಳಾ ಸ್ನೇಹಿ ಯೋಜನೆಗೆ ಅನುದಾನ

    ಹಿರಿಯೂರು: ಜಿಲ್ಲೆಯಲ್ಲಿ ಮಹಿಳಾ ಸ್ನೇಹಿ ಯೋಜನೆ ಅನುಷ್ಠಾನಕ್ಕೆ ವಿಶೇಷ ಅನುದಾನ ಮೀಸಲಿಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

    ಜಿಲ್ಲಾ ಖನಿಜ ಪ್ರತಿಷ್ಠಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಡಿಎಂಎಫ್ ಯೋಜನೆಯಡಿ ನಗರದ ರೋಟರಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳೆಯರಿಗೆ ಟೈಲರಿಂಗ್ ಯಂತ್ರ-ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ರಾಜ್ಯದಲ್ಲಿ ಮಹಿಳಾ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲು ಸರ್ಕಾರ ಬದ್ಧವಾಗಿದೆ. ಮಹಿಳೆಯರಿಗೆ ಸ್ಥಳೀಯವಾಗಿ ಅವಕಾಶ ಕಲ್ಪಿಸಲು ವಿಶೇಷ ಯೋಜನೆ ರೂಪಿಸಲಾಗಿದೆ. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅನನ್ಯ, ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಕೌಶಲ ತರಬೇತಿ ನೀಡಲು ನೆರವಿನ ಹಸ್ತ ಚಾಚಲಾಗುವುದು ಎಂದರು.

    ಗೃಹಲಕ್ಷ್ಮೀ, ಸ್ತ್ರೀಶಕ್ತಿ ಯೋಜನೆ ಮಹಿಳೆಯರ ಆರ್ಥಿಕ ಸದೃಢತೆಗೆ ವರದಾನವಾಗಿದ್ದು, ಅನ್ನಭಾಗ್ಯ ಯೋಜನೆಯಡಿ ಶೀಘ್ರ 10 ಕೆಜಿ ಅಕ್ಕಿ ವಿತರಣೆಗೆ ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.

    ಸಿಡಿಪಿಒ ರಾಘವೇಂದ್ರ ಮಾತನಾಡಿ, ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ 59 ಸಾವಿರ ಮಹಿಳೆಯರು ಅರ್ಜಿ ಸಲ್ಲಿಸಿದ್ದು, 54 ಸಾವಿರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದೆ. 5 ಸಾವಿರ ಅರ್ಜಿ ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ, ಸೋಮವಾರ 2ನೇ ಕಂತಿನ ಹಣ ಜಮೆಯಾಗಲಿದೆ ಎಂದು ತಿಳಿಸಿದರು.

    ಭೂಮಿಕಾ ಗ್ರಾಮಾಭಿವೃದ್ಧಿ ಸಂಸ್ಥೆ ನಿರ್ದೇಶಕ ಎಚ್.ಆಂಜನೇಯ, ವೀರಣ್ಣ, ನಗರಸಭೆ ಸದಸ್ಯ ಈರಲಿಂಗೇಗೌಡ, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಗೀತಾ, ನೇತ್ರಾವತಿ, ಕಮಲಾ, ವರ್ಷಿಣಿ, ತಾಹೀರಾ ಬಾನು, ಸಲ್ಮಾ, ವನಜಾಕ್ಷಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts