More

    ಮಹಿಳಾ ರಾಜ್ಯ ಸಮ್ಮೇಳನಕ್ಕೆ ತೆರೆ -ಕಾರ್ಮಿಕ ರಾಜ್ಯದಿಂದಲೇ ಸಮಸ್ಯೆಗಳಿಗೆ ಮುಕ್ತಿ- ಕೆ.ರಾಧಾಕೃಷ್ಣ

    ದಾವಣಗೆರೆ: ದೇಶದಲ್ಲಿ ಕಾರ್ಮಿಕರ ಕೈಗೆ ಅಧಿಕಾರ ಸಿಗಬೇಕು, ಕಾರ್ಮಿಕರ ರಾಜ್ಯ ನಿರ್ಮಾಣದಿಂದಲೇ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂದು ಎಸ್‌ಯುಸಿಐ(ಸಿ) ಪಾಲಿಟ್ ಬ್ಯೂರೋ ಸದಸ್ಯ ಕೆ. ರಾಧಾಕೃಷ್ಣ ಹೇಳಿದರು.
    ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ರಾಜ್ಯ ಮಟ್ಟದ ಏಳನೇ ಮಹಿಳಾ ಸಮ್ಮೇಳನದ ಸಮಾರೋಪದಲ್ಲಿ ಪ್ರಧಾನ ಭಾಷಣ ಮಾಡಿದರು.
    ದೇಶದಲ್ಲಿ ಕಾರ್ಮಿಕ ರಾಜ್ಯ, ಹೊಸ ಸಮಾಜವಾದಿ ವ್ಯವಸ್ಥೆ ಬರಬೇಕಿದೆ. ಹಾಗಾದಾಗ ಮಾಲೀಕತ್ವ ಬಂಡವಾಳಿಗರು ಅಥವಾ ಜಮೀನ್ದಾರರ ಬದಲಾಗಿ ಕಾರ್ಮಿಕರಿಗೆ ಸಿಗಲಿದೆ. ಇದಕ್ಕಾಗಿ ರೈತರು, ವಿದ್ಯಾರ್ಥಿ- ಯುವಜನರು, ಹೆಣ್ಣುಮಕ್ಕಳು ಒಗ್ಗೂಡಿ ಬಲಿಷ್ಠ ಕ್ರಾಂತಿ ಮಾಡಬೇಕಿದೆ ಎಂದು ಆಶಿಸಿದರು.
    ಮಹಾತ್ಮ ಗಾಂಧೀಜಿ, ಬುದ್ಧ, ಬಸವ, ಅಂಬೇಡ್ಕರ್ ಮೊದಲಾದ ವಿಚಾರವಾದಿಗಳು, ದಾರ್ಶನಿಕರ ಫೋಟೋಗಳಿಗೆ ಹಾರ ಹಾಕಿ ಪೂಜಿಸುತ್ತ ಆರಾಧ್ಯ ದೈವವಾಗಿಸಿದ್ದೇವೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ದೇಶದಲ್ಲಿ ಜಾತಿವಾದ, ಅಸ್ಪಶ್ಯತೆ ಜೀವಂತವಾಗಿವೆ. ಹಾಗಾಗಿ ಭಕ್ತಿ ಒಂದರಿಂದಲೇ ದೇಶದ ಸಮಸ್ಯೆಗಳು ಬಗೆಹರಿಯದು. ಮಹಾಪುರುಷರ ವಿಚಾರಧಾರೆಗಳನ್ನು ಪಾಲಿಸಬೇಕು ಎಂದು ಸೂಚ್ಯವಾಗಿ ಹೇಳಿದರು.
    ಮಹಾಭಾರತದಲ್ಲಿ ದ್ರೌಪದಿ ವಸ್ತ್ರಾಪಹರಣಕ್ಕೆ ಒಳಗಾಗಿದ್ದಾಗ ಶ್ರೀಕೃಷ್ಣ ಪ್ರತ್ಯಕ್ಷನಾಗಿ ಮಾನ ರಕ್ಷಣೆ ಮಾಡಿದ. ಇಂದು ಅತ್ಯಾಚಾರ ಮಾಡುವ ಶಕುನಿಗಳ ಸಂತಾನವೇ ತುಂಬಿರುವಾಗ, ಹೆಣ್ಣುಮಕ್ಕಳ ರಕ್ಷಣೆಗೆ ಯಾವ ಯುಗಪುರುಷ, ಅವತಾರ ಪುರುಷ ಬರುತ್ತಿದ್ದಾನೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ನೇತಾಜಿಯವರ ಝಾನ್ಸಿರಾಣಿ ರೆಜಿಮೆಂಟ್ ಮುಂದುವರಿದಿದ್ದರೆ ದೇಶದ ಯುವತಿಯರ ಕೈಗಳಲ್ಲಿ ಬಂದೂಕು ಇರುತ್ತಿದ್ದವು ಎಂದೂ ಹೇಳಿದರು.
    ಹೆಣ್ಣುಮಕ್ಕಳು ಸೀತೆ, ಸಾವಿತ್ರಿ, ದಮಯಂತಿ, ಅನಸೂಯ ಅವರಂತೆ ಪತಿವ್ರತೆಯಾಗಿ ಇರಬೇಕು ಎಂಬ ಏಕೈಕ ಗುರಿ ಒಂದು ಕಾಲದಲ್ಲಿತ್ತು. ಇಂದು ಎಲ್ಲೆಡೆ ಶಕುನಿಗಳಿರುವ ಕಾಲದಲ್ಲಿ ಈ ಗುರಿ ಮಾತ್ರಕ್ಕೆ ಹೆಣ್ಣುಮಕ್ಕಳು ಸೀಮಿತವಾಗಬೇಕೆ. ಕಾಲ ಬದಲದಂತೆ ಹೊಸ ಆದರ್ಶಗಳೂ ಬೇಕಿವೆ. ನೇತಾಜಿ ಮತ್ತು ಸ್ವಾಮಿ ವಿವೇಕಾನಂದರು ಹೇಳಿದಂತೆ ಧರ್ಮ-ಜಾತಿ ಭೇದ ಮನೆಯಿಂದ ಆಚೆಗೆ ಬರಬಾರದು ಎಂದರು.
    ಮಹಾತ್ಮ ಗಾಂಧೀಜಿ ಪ್ರಾಮಾಣಿಕರಾಗಿದ್ದರೂ ರಾಜಕೀಯ ಸ್ವಾತಂತ್ರೃಕ್ಕಾಗಿ ಹೋರಾಟ ಮಾಡಿದರೇ ಹೊರತು ಸಾಮಾಜಿಕ ಸಾಂಸ್ಕೃತಿಕ ಸ್ವಾತಂತ್ರೃಕ್ಕಾಗಿ ಹೋರಾಡಲಿಲ್ಲ. ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡಿದ್ದರು. ಬಂಡವಾಳಿಗರು ಅವರನ್ನು ಬಳಸಿಕೊಂಡರು. ಸ್ವಾತಂತ್ರಾೃ ನಂತರದಲ್ಲಿ ನಮ್ಮ ದೇಶದ ಮಾಲೀಕರೇ ದೇಶವನ್ನು ಕೊಳ್ಳೆ ಹೊಡೆದರು. ಭಗತ್‌ಸಿಂಗ್,ನೇತಾಜಿ ಸುಭಾಶ್ಚಂದ್ರ ಬೋಸ್ ರಾಜಿರಹಿತ ಹೋರಾಟ ಮಾಡಿದರು ಎಂದು ವಿವರಿಸಿದರು.
    ಎಐಎಂಎಸ್‌ಎಸ್ ರಾಜ್ಯ ಸಂಘಟನೆಯ 171 ಸದಸ್ಯ ಬಲದ ನೂತನ ಪದಾಧಿಕಾರಿಗಳನ್ನು ಘೋಷಣೆ ಮಾಡಲಾಯಿತು. ನೂತನ ರಾಜ್ಯಾಧ್ಯಕ್ಷ್ಷರಾಗಿ ಎಂ.ಎನ್.ಮಂಜುಳಾ ನಿಯುಕ್ತರಾದರು.
    ಕಾರ್ಯಕ್ರಮದಲ್ಲಿ ಎಐಎಂಎಸ್‌ಎಸ್‌ನ ರಾಷ್ಟ್ರೀಯ ಅಧ್ಯಕ್ಷೆ ಕೆಯಾ ಡೆ, ರಾಷ್ಟ್ರೀಯ ಉಪಾಧ್ಯಕ್ಷೆ ಡಾ. ಸುಧಾ ಕಾಮತ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಛಬ್ಬಿ ಮೊಹಂತಿ, ರಾಜ್ಯಾಧ್ಯಕ್ಷೆ ಬಿ.ಆರ್. ಅಪರ್ಣಾ, ರಾಜ್ಯ ಕಾರ್ಯದರ್ಶಿ ಎಸ್. ಶೋಭಾ, ಎಸ್‌ಯುಸಿಐ(ಸಿ) ರಾಜ್ಯ ಕಾರ್ಯದರ್ಶಿ ಕೆ. ಉಮಾ, ಡಾ.ಪಿ.ಎಂ. ಅನುರಾಧಾ, ಹರಿಣಿ, ಸೀಮಾ ಇತರರಿದ್ದರು.

    ಹತ್ತು ನಿರ್ಣಯಗಳ ಮಂಡನೆ
    1. ಲಿಂಗ ಪತ್ತೆ, ಭ್ರೂಣಹತ್ಯೆ ನಿಷೇಧ ಕಾನೂನನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. 2. ಬಾಲ್ಯವಿವಾಹ ತೊಡೆದು ಹಾಕಲು ಸರ್ಕಾರ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು. 3. ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸಿದವರಿಗೆ ನಿದರ್ಶನೀಯ ಶಿಕ್ಷೆ ನೀಡುವ ಭಾಗವಾಗಿ ಸಾಮಾಜಿಕ, ಸಾಂಸ್ಕೃತಿಕ ಹೋರಾಟಕ್ಕೆ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು. 4. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ರದ್ದುಪಡಿಸುವ ಜತೆಗೆ ಶಾಲಾ ಕಾಲೇಜುಗಳಲ್ಲಿ ಸುರಕ್ಷತೆ ಖಾತ್ರಿಪಡಿಸಬೇಕು. 5. ನರೇಗಾ ಯೋಜನೆಯಡಿ ಶುದ್ಧ ಕುಡಿವ ನೀರು, ಪ್ರಥಮ ಚಿಕಿತ್ಸೆ ಇತರೆ ಸೌಲಭ್ಯಗಳನ್ನು ನೀಡಬೇಕು. ಕಾರ್ಖಾನೆಗಳಲ್ಲಿ ರಾತ್ರಿ ಪಾಳಿಯಲ್ಲಿ ಸ್ತ್ರೀಯರನ್ನು ದುಡಿಸಿಕೊಳ್ಳುವ ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬಾರದು. 6. ಆರೋಗ್ಯ ಕ್ಷೇತ್ರದಲ್ಲಿ ಖಾಸಗೀಕರಣ ನೀತಿ ಕೈಬಿಟ್ಟು, ಪಿಎಚ್‌ಸಿ, ಕಾಲೇಜು ಹಂತದವರೆಗೆ ಬಿಸಿಯೂಟ ವಿಸ್ತರಿಸಬೇಕು. 7. ಸಮೂಹ ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲತೆಗೆ ಕಡಿವಾಣ ಹಾಕದ ಸರ್ಕಾರಗಳ ವಿರುದ್ಧ ಹೋರಾಟ ಮಾಡಬೇಕು. 8. ಜಾತೀಯತೆ, ಪ್ರಾಂತೀಯವಾದ, ಭಾಷಾಂಧತೆ ಹಾಗೂ ಕೋಮುವಾದಿ ವಿಚಾರಗಳಿಗೆ ಪ್ರಚೋದನೆ ವಿರುದ್ಧ ಮಹಿಳೆಯರು ಪ್ರತಿಭಟಿಸಬೇಕು. 9. ಸಮಾಜದ ಪ್ರಜಾತಾಂತ್ರಿಕ ಪ್ರಕ್ರಿಯೆಗೆ ಸಮಾಜ ಒಳಗಾಗಬೇಕಿದ್ದು ಸರ್ಕಾರ ಕೂಡ ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು. 10. ಮಹಿಳಾ ಸಮಸ್ಯೆಗಳ ವಿಮುಕ್ತಿಗೆ ಶೋಷಣಾರಹಿತ ಸಮಾಜ ಸ್ಥಾಪನೆ ಆಗಬೇಕಿದ್ದು ಇದನ್ನು ಹೋರಾಟದ ಮೂಲಕ ಪಡೆಯಲು ಮಹಿಳೆಯರು ಸಂಘಟಿತರಾಗಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts