More

    ಮಹಿಳಾ ದೌರ್ಜನ್ಯ ತಡೆಗೆ ಆರ್ಥಿಕ ಸಬಲತೆಯೇ ಅಸ್ತ್ರ

    ಚಿತ್ರದುರ್ಗ:ಕಾಯ್ದೆ ಬಲವಿದ್ದರೂ ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸೆ ಪ್ರಕರಣಗಳು ಕಡಿಮೆಯಾಗಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಬಿ.ಗೀತಾ ಕಳವಳ ವ್ಯಕ್ತಪಡಿಸಿದರು.
    ಜಿಪಂ ಸಭಾಂಗಣದಲ್ಲಿ ಆಯೋಜಿಸಿರುವ ‘ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಅನುಷ್ಠಾನದಲ್ಲಿ ಭಾಗೀದಾರ ಇಲಾಖೆಗಳ ಪಾತ್ರ’ ಕುರಿತ ಎರಡು ದಿನಗಳ ಕಾರ‌್ಯಾಗಾರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
    ಹಿಂಸೆಯಿಂದ ಮಹಿಳೆಯರಿಗೆ ರಕ್ಷಣೆ ನೀಡಲು ಸಾಕಷ್ಟು ಕಾನೂನು, ಕಾಯ್ದೆಗಳಿದ್ದರೂ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ದೂರು ನೀಡಲು ಹಿಂದೇಟು ಹಾಕುತ್ತಾರೆ. ಇದಕ್ಕೆ ಮುಖ್ಯ ಕಾರಣ ಅವರು ಆರ್ಥಿಕವಾಗಿ ಸಬಲರಾಗದೆ ಇರುವುದು. ಅವರು ಆರ್ಥಿಕವಾಗಿ ಸಬಲರಾದಂತೆ ಅವರ ಮೇಲಿನ ಹಿಂಸೆ ಪ್ರಮಾಣವೂ ಕಡಿಮೆಯಾಗುತ್ತವೆ ಎಂದರು.
    ಹಿಂಸೆಗೆ ಒಳಗಾದ ಮಹಿಳೆ ದೂರು ದಾಖಲಿಸಿದರೆ ಅವರನ್ನು ಕುಟುಂಬದಿಂದ ಹೊರ ಹಾಕಲಾಗುತ್ತಿತ್ತು. ಆದರೆ, ಮಹಿಳೆ ಸಂರಕ್ಷಣಾ ಕಾಯ್ದೆಯಲ್ಲಿ ದೂರುದಾರ ಮಹಿಳೆ ಅದೇ ಕುಟುಂಬದೊಂದಿಗೆ ಇದ್ದು ರಕ್ಷಣೆ ಕೋರಬಹುದು. ಮನೆ ಇತರ ಸದಸ್ಯರು ಆಕೆಗೆ ಹಿಂಸೆ ನೀಡದಂತೆ ಕಾಯ್ದೆಯಲ್ಲಿ ನಿಯಂತ್ರಿಸಲು ಅವಕಾಶವಿದೆ ಎಂದು ಹೇಳಿದರು.
    ಹತ್ತಿರದಿಂದ ಇಂಥ ಪ್ರಕರಣಗಳನ್ನು ಗಮನಿಸಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಂರಕ್ಷಣಾಧಿಕಾರಿಗಳು ನೊಂದವರಿಗೆ ನೆರವಾಗಬೇಕು. ಬೇರೆಲ್ಲ ಕಾನೂನುಗಳಲ್ಲಿರುವ ಅಧಿಕಾರವನ್ನು ಈ ಕಾಯ್ದೆಯಡಿ ಒಗ್ಗೂಡಿಸಿ ನ್ಯಾಯಾಧೀಶರಿಗೆ ನೀಡಲಾಗಿದೆ. ಸಮಾಜದಲ್ಲಿ ಆಳವಾಗಿರುವ ವರದಕ್ಷಿಣೆ ಪಿಡುಗನ್ನು ಬೇರು ಸಮೇತ ಕಿತ್ತು ಹಾಕಬೇಕಿದೆ ಎಂದ ಎಂದರು.
    ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಉಜ್ವಲಾ ವೀರಣ್ಣ ಸಿದ್ದಣ್ಣನವರ್, ಜಿಪಂ ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ ಮಾತನಾಡಿದರು. ಸರಸ್ವತಿ ಕಾನೂನು ಕಾಲೇಜು ಪ್ರಾಚಾರ‌್ಯೆ ಪ್ರೊ.ಸುಧಾದೇವಿ, ಬಾಲ ನ್ಯಾಯ ಮಂಡಳಿ ಸದಸ್ಯೆ ಸುಮನಾ ಎಸ್.ಅಂಗಡಿ ಉಪನ್ಯಾಸ ನೀಡಿದರು.
    ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಜಿಲ್ಲಾ ನಿರೂಪಣಾಧಿಕಾರಿ ಎಸ್.ವಿಜಯಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎನ್.ಪವಿತ್ರಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ ಮತ್ತಿತರರು ಇದ್ದರು.
    ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕಾರ್ಯಾಗಾರ ಆಯೋಜಿಸಲಾಗಿತ್ತು.

    *ಕೋಟ್
    ಸಂರಕ್ಷಣಾಧಿಕಾರಿಗಳು ನೊಂದ ಮಹಿಳೆಯರನ್ನು ಅನುಕಂಪದಿಂದ ನೋಡಬೇಕು. ಪ್ರತಿ ಪ್ರಕರಣದ ಸೂಕ್ಷ್ಮತೆ ಅರ್ಥಮಾಡಿಕೊಳ್ಳಬೇಕು. ಕೌಟುಂಬಿಕ ಹಿಂಸೆ ಹೆಚ್ಚಳಕ್ಕೆ ಸಮಾಜದ ಮನಸ್ಥಿತಿಯೇ ಪ್ರಮುಖ ಕಾರಣ.
    ಉಜ್ವಲಾ ವೀರಣ್ಣ ಸಿದ್ದಣ್ಣನವರ್, ನ್ಯಾಯಾಧೀಶೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts