More

    ಮಹಾಶಿವರಾತ್ರಿ ಹಬ್ಬ ಆಚರಣೆ

    ಕುಶಾಲನಗರ: ಕುಶಾಲನಗರ ಸಮೀಪದ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಆತ್ತೂರು ಗ್ರಾಮದ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.

    ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಗುರುವಾರ ಸಂಜೆಯಿಂದಲೇ ದೇವರಿಗೆ ತಕ್ಕರ ಮನೆಯಿಂದ ಶ್ರೀ ಕ್ಷೇತ್ರ ಭಂಡಾರವನ್ನು ಶ್ರೀಕ್ಷೇತ್ರಕ್ಕೆ ತರಲಾಯಿತ್ತು. 8 ಗಂಟೆಗೆ ದೇವರಿಗೆ ಮಹಾಪೂಜೆ ನೆರವೇರಿಸಿ ಪ್ರಸಾದ ವಿನಿಯೋಗ ಮಾಡಲಾಯಿತು.

    ಶನಿವಾರ ನವಕ ಕಳಶ ಪ್ರತಿಷ್ಠೆ, ಗಣಪತಿ ಹವನ, ನವಕ ಕಳಸಾಭಿಷೇಕ, ದೇವರಿಗೆ ಮಹಾಪೂಜೆ, ದೇವರ ಬಲಿ ಮತ್ತು ಪ್ರಸಾದ ವಿತರಣೆ ಮಾಡಲಾಯಿತು. ಸಂಜೆ ನಡೆ ತೆರೆಯುವುದು, ದೀಪಾರಾಧನೆ, ಸೋಪಾನ ಸಂಗೀತ, ಸ್ಥಳೀಯರಿಂದ ಭಜನೆ ನಡೆಯಿತು ಎಂದು ಅಧ್ಯಕ್ಷ ವಿ.ಸಿ.ಮನೋಜ್ ಕುಮಾರ್ ತಿಳಿಸಿದರು.

    ಕಾರ್ಯದರ್ಶಿ ಬಿ.ಎ. ರಮೇಶ್ ಮಾತನಾಡಿ, ಅಷ್ಟಮಂಗಲ ಪ್ರಶ್ನೆ ಕೇಳಿದಾಗ ಇದು ಕನಿಷ್ಠವೆಂದರೂ 1500 ವರ್ಷ ಹಳೆಯ ಲಿಂಗ, ಅಲ್ಪಸ್ವಲ್ಪ ವಿಘ್ನವಾಗಿದ್ದನ್ನು 6 ವರ್ಷಗಳ ಹಿಂದೆ ಮರು ಪ್ರತಿಷ್ಠಾಪನೆ ಮಾಡಿ ನಿತ್ಯ ಪೂಜೆ ಮಾಡಿಕೊಂಡು ಬರಲಾಗುತ್ತಿದೆ. ಶಿವರಾತ್ರಿ ಹಬ್ಬ ಸೇರಿದಂತೆ ಎಲ್ಲ ಹಬ್ಬಗಳಲ್ಲೂ ವಿಶೇಷ ಪೂಜೆ ಮಾಡಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

    ಕಾರ್ಕಳದ ಬ್ರಹ್ಮಶ್ರೀ ವೇದಮೂರ್ತಿ ಗಣೇಶ್ ತಂತ್ರಿಗಳ ನೇತೃತ್ವದಲ್ಲಿ ಪೂಜೆಗಳು ನೆರವೇರಿದವು. ಭಕ್ತರಿಗೆ ಇಲ್ಲಿ ಶಿವಪಂಚಾಕ್ಷರಿ ಹೋಮ, ಕಾರ್ತಿಕ ಪೂಜೆ, ಬಸ್ಮಾರ್ಚನೆ, ಶಿವಪೂಜೆ, ಬಿಲ್ವಾರ್ಚನೆ, ರುದ್ರಾಭಿಷೇಕ ಸೇರಿದಂತೆ ವಿವಿಧ ಸೇವೆಗಳನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.

    ಪಂಚಲಿಂಗೇಶ್ವರ ದೇವಾಲಯ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ದಿವಾಕರನ್, ಖಜಾಂಚಿ ಕೆ.ಪಿ.ಗಣೇಶ್, ಸಹಕಾರ್ಯದರ್ಶಿ ಮಧು ವೆಂಕಟ್, ಆತ್ತೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts