More

    ಮಹಾವೀರ್ ಜೈನ್ ವಿವಿ ಮಾನ್ಯತೆ ರದ್ದು ಮಾಡಿ

    ನಂಜನಗೂಡು: ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮೀಸಲಾತಿಯಡಿ ಸವಲತ್ತು ಪಡೆದಿರುವ ತಳ ಸಮುದಾಯದ ಜನರನ್ನು ತೇಜೋವಧೆ ಮಾಡಿರುವ ಬೆಂಗಳೂರಿನ ಮಹಾವೀರ್ ಜೈನ್ ವಿಶ್ವವಿದ್ಯಾಲಯದ ಮಾನ್ಯತೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

    ನಗರದ ತಾಲೂಕು ಕಚೇರಿ ಮುಂಭಾಗ ಸಂಘಟಿತರಾದ ಪ್ರತಿಭಟನಾಕಾರರು ಬೆಂಗಳೂರಿನ ಮಹಾವೀರ್ ಜೈನ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಅಲ್ಲಿನ ವಿದ್ಯಾರ್ಥಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಮಹಾವೀರ್ ಜೈನ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾಲೇಜ್ ಫೆಸ್ಟ್ ಕಾರ್ಯಕ್ರಮದಲ್ಲಿ ಕಿರುನಾಟಕ ಪ್ರದರ್ಶನ ಪ್ರದರ್ಶಿಸಿರುವ ಅಲ್ಲಿನ ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಬಗ್ಗೆ ಹಾಗೂ ಮೀಸಲಾತಿಯಡಿ ಸೌಲಭ್ಯ ಪಡೆಯುತ್ತಿರುವ ಸಮುದಾಯಗಳ ಬಗ್ಗೆ ಲಘುವಾಗಿ ಮಾತನಾಡುವ ಮೂಲಕ ಅವಮಾನಗೊಳಿಸಿ ತೇಜೋವಧೆ ಮಾಡಿದ್ದಾರೆ. ಇದು ಭಯೋತ್ಪಾದಕ ಕೃತ್ಯಕ್ಕೆ ಸಮನಾದ ಅಪರಾಧವಾಗಿದ್ದು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಶ್ವವಿದ್ಯಾಲಯವನ್ನು ಬಂದ್ ಮಾಡಿಸಬೇಕು ಹಾಗೂ ಆ ಸಂಸ್ಥೆಯ ಮುಖ್ಯಸ್ಥರನ್ನು ಸೇವೆಯಿಂದ ವಜಾಗೊಳಿಸಿ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

    ಬಳಿಕ ಸ್ಥಳಕ್ಕಾಗಮಿಸಿದ ಕಂದಾಯ ನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ಅಂತ್ಯಗೊಳಿಸಿದರು. ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್, ಉಪವಿಭಾಗೀಯ ಸಂಚಾಲಕ ಮಂಜು ಶಂಕರಪುರ, ಪ್ರತಿಧ್ವನಿ ವೇದಿಕೆ ಅಧ್ಯಕ್ಷ ತ್ರಿನೇಶಾರಾಧ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್,ಹಿಮ್ಮಾವು ರಘು, ಗಟ್ಟವಾಡಿ ಮಹೇಶ್,ಮರಿಸ್ವಾಮಿ, ಗಜೇಂದ್ರ, ಹೂವಯ್ಯ, ಮಹೇಶ್ ಬೆಳಲೆ ಮುಂತಾದವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts