More

    ಮುಸ್ಲಿಮರಿಲ್ಲದ ಹುಲಿಕಟ್ಟಿಯಲ್ಲಿ ಮೊಹರಂ ಆಚರಣೆ

    ಶಿಗ್ಗಾಂವಿ: ಮುಸ್ಲಿಂ ಸಮುದಾಯ ಇಲ್ಲದಿದ್ದರೂ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಹಿಂದುಗಳೇ ಭಕ್ತಿಭಾವದಿಂದ ಮೊಹರಂ ಹಬ್ಬ ಮಂಗಳವಾರ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದರು.ಮೊಹರಂ ಹಬ್ಬದ ನಿಮಿತ್ತ ಹಿಂದುಗಳೇ ಪಾಂಜಾಗಳನ್ನು ಸ್ಥಾಪಿಸಿ ಪೂಜೆ ನೆರವೇರಿಸುತ್ತಾರೆ. ಹಬ್ಬದ ಕೊನೆಯ ದಿನ ಸೋಮವಾರ ರಾತ್ರಿ ಪಾಂಜಾಗಳಿಗೆ ಪೂಜೆ ಸಲ್ಲಿಸಿ, ಮುಸ್ಲಿಂ ಧರ್ಮದ ಸಂಪ್ರದಾಯದಂತೆ ಸಕ್ಕರೆ ನೈವೇದ್ಯ ಅರ್ಪಿಸಿ, ಅಗ್ನಿಕುಂಡ ಸುತ್ತು ಹಾಕಲಾಯಿತು. ಪಕ್ಕದ ಹೋತನಹಳ್ಳಿಯ ತಾಜುದ್ದೀನ್ ಕಲ್ಯಾಣ ಅವರನ್ನು ಮಂಗಳವಾರ ಬೆಳಗ್ಗೆ ಗ್ರಾಮಕ್ಕೆ ಆಹ್ವಾನಿಸಿ, ಸಂಪ್ರದಾಯದಂತೆ ಪಾಂಜಾಗಳಿಗೆ ಪೂಜೆ ಸಲ್ಲಿಸಿ, ಸಂಜೆ ಹಬ್ಬ ಸಮಾಪ್ತಿಗೊಳಿಸಲಾಯಿತು.

    ಸುಮಾರು ದಶಕಗಳಿಂದ ಗ್ರಾಮದ ಪ್ರತಿಯೊಬ್ಬರೂ ಮೊಹರಂ ಹಬ್ಬದ ಆಚರಣೆಯಲ್ಲಿ ಭಾಗಿಯಾಗುವುದು ಇಲ್ಲಿಯ ವಿಶೇಷ. ಮೊಹರಂ ಆಚರಣೆಯಿಂದ ಬದುಕಿನ ಎಲ್ಲ ಕಷ್ಟಗಳು ಕಳೆದು ಹೋಗುತ್ತಿವೆ. ಗ್ರಾಮದ ಜನರಿಗೆ ನೆಮ್ಮದಿ ಸಿಕ್ಕಿದೆ. ಹಿಂದು ಹಬ್ಬಗಳಂತೆ ಮೊಹರಂ ಅನ್ನು ಅಷ್ಟೇ ಸಡಗರದಿಂದ ಆಚರಿಸುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.

    ಸುಮಾರು ವರ್ಷಗಳ ಹಿಂದೆ ಪ್ಲೇಗ್ ರೋಗಕ್ಕೆ ಹೆದರಿ ಹಲವು ಕುಟುಂಬಗಳು ಗ್ರಾಮ ತೊರೆದವು. ಅವರಲ್ಲಿ ಮುಸ್ಲಿಂ ಸಮುದಾಯದ ಎಲ್ಲ ಕುಟುಂಬಗಳು ಗ್ರಾಮ ತೊರೆದ ಕಾರಣ ಗ್ರಾಮದಲ್ಲಿ ಕೇವಲ ಮಸೀದಿ ಮಾತ್ರ ಇದೆ. ಸುಮಾರು ವರ್ಷಗಳಿಂದ ಮೊಹರಂ ಹಬ್ಬ ಆಚರಿಸುವ ಇಲ್ಲಿಯ ಹಿಂದುಗಳು, ಶಿಥಿಲಾವಸ್ಥೆಯಲ್ಲಿದ್ದ ಮಸೀದಿಯನ್ನು 2015ರಲ್ಲಿ ಹೊಸದಾಗಿ ನಿರ್ವಿುಸಿದ್ದಾರೆ.

    ಮಸೀದಿ ಬಳಿ ಅಲಾಯಿ ಕುಣಿ ತೋಡಿ, ಅಲಾಯಿ ಗುಂಡಿಗೆ ಕಟ್ಟಿಗೆ ತಂದು ಬೆಂಕಿ ಹಾಕಿ ಉಪ್ಪು ಸುರಿದು ಹರಕೆ ತೀರಿಸಿ ಹಬ್ಬ ಆಚರಿಸಲಾಗುತ್ತದೆ. ಈ ಹಬ್ಬದ ಆಚರಣೆಯಲ್ಲಿ ಗ್ರಾಮಸ್ಥರಲ್ಲಿರುವ ಸಂಭ್ರಮ ಕಿಂಚಿತ್ತೂ ಕುಂದಿಲ್ಲ ಎನ್ನುತ್ತಾರೆ ಗ್ರಾಮದ ಹಿರಿಯರಾದ ಭರಮಣ್ಣ ಮಾರಂಬೀಡ, ಗಂಗಾಧರ ಗಡ್ಡೆ, ಶಂಕರಗೌಡ ಪಾಟೀಲ, ಕಲ್ಲಪ್ಪ ಮೆಳ್ಳಳ್ಳಿ, ಶಿವಲಿಂಗಪ್ಪ ಕೊಳಲ, ನಿಂಗನಗೌಡ ಬನ್ನೂರ, ಪರಸಪ್ಪ ಗಲಗಿನಕಟ್ಟಿ, ನಿಂಗಪ್ಪ ಹಳೆಬಂಕಾಪುರ, ಹನಮಂತಪ್ಪ ಪೂಜಾರ ಹಾಗೂ ಗ್ರಾಮಸ್ಥರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts