More

    ಮಳೆ-ಬಿಸಿಲಿನಿಂದ ಅಡಕೆಗೆ ಕೊಳೆ ರೋಗ ಉಲ್ಬಣ: ಸಾಗರ ತಾಲೂಕಿನಾದ್ಯಂತ ಬೆಳೆ ನಷ್ಟ

    ಸಾಗರ: ವಾತಾವರಣದಲ್ಲಿನ ಬದಲಾವಣೆ ಮತ್ತು ಒಂದೆಡೆ ಸತತ ಸುರಿಯುತ್ತಿರುವ ಮಳೆ, ಮತ್ತೊಂದೆಡೆ ಮಂದ ಬಿಸಿಲಿನಿಂದಾಗಿ ತಾಲೂಕಿನಾದ್ಯಂತ ಅಡಕೆಗೆ ಕೊಳೆ ರೋಗ ಬಾಧಿಸುತ್ತಿದೆ. ತಾಲೂಕಿನ ಕುಂಟಗೋಡು, ಲಿಂಗದಹಳ್ಳಿ, ಗೀಜಗಾರು, ಖಂಡಿಕ, ತಾಳಗುಪ್ಪ ಹೋಬಳಿಯ ಬಹುತೇಕ ಭಾಗದಲ್ಲಿ ಕೊಳೆರೋಗದಿಂದ ಅಡಕೆ ಸಂಪೂರ್ಣ ನಾಶವಾಗುತ್ತಿದೆ.
    ಈ ಹಿನ್ನೆಲೆಯಲ್ಲಿ ತೋಟಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿ ಸೋಮವಾರ ‘ವಿಜಯವಾಣಿ‘ ಮಾತನಾಡಿದ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಜಯಂತ್, ಮಲೆನಾಡಿನಲ್ಲಿ ಅಡಕೆ ಬೆಳೆಗಾರರ ಸಂಕಷ್ಟದ ಕುರಿತು ಮಾಹಿತಿ ನೀಡಿದರು.
    ಕೊಳೆರೋಗದಿಂದ ಅಡಕೆ ಬೆಳೆ ಶೇ.80 ನಷ್ಟವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬರುವ ವರ್ಷ ರೋಗಬಾಧಿತ ಮರಗಳಿಂದ ಇಳುವರಿ ಪಡೆಯಲು ಸಾಧ್ಯವಾಗುವುದಿಲ್ಲ. ಮರಗಳು ದುರ್ಬಲವಾಗಿ ಬಿಡುತ್ತವೆ. ಯಾವ ಸರ್ಕಾರಗಳು ಅಡಕೆ ಬೆಳೆಗಾರರ ಸಂಕಷ್ಟವನ್ನು ಪರಿಗಣಿಸುತ್ತಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕಾಗೋಡು ತಿಮ್ಮಪ್ಪ ಅವರ ವಿಶೇಷ ಪ್ರಯತ್ನದಿಂದ ಸಾಗರ ತಾಲೂಕಿಗೆ 9 ಕೋಟಿ ರೂ. ಅನುದಾನ ಲಭಿಸಿತ್ತು. ಇದರಿಂದಾಗಿ ಪ್ರತಿ ಹೆಕ್ಟೇರ್‌ಗೆ 12,500 ರೂ. ಪರಿಹಾರ ಬರುವಂತೆ ಮಾಡಿದ್ದರು. ಅಧಿಕಾರಿಗಳು ತೋಟಗಳಿಗೆ ಭೇಟಿ ಕೊಡದೆ, ಬೆಳೆನಷ್ಟದ ಕುರಿತು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
    ಮಲೆನಾಡಿನಲ್ಲಿ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಿದ್ದು ಎನ್‌ಡಿಆರ್‌ಎಫ್‌ನಿಂದ ಪ್ರತಿ ಹೆಕ್ಟೇರ್‌ಗೆ 28 ಸಾವಿರ ರೂ. ಬೆಳೆನಷ್ಟ ಪರಿಹಾರ ನೀಡಲು ಅವಕಾಶವಿದೆ. ಈ ಮೊತ್ತವನ್ನು ದ್ವಿಗುಣಗೊಳಿಸಿ, ರಾಜ್ಯ ಸರ್ಕಾರ ಹೆಚ್ಚುವರಿ ಮೊತ್ತವನ್ನು ಭರಿಸಿ ಮಲೆನಾಡಿನ ಅಡಕೆ ಬೆಳೆಗಾರರಿಗೆ 56 ಸಾವಿರ ರೂ. ಬೆಳೆ ನಷ್ಟ ಪರಿಹಾರ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts