More

    ಮಳೆ, ಗಾಳಿಗೆ ಸಾಲು ಮನೆಗಳು ನೆಲಸಮ

    ಚನ್ನರಾಯಪಟ್ಟಣ: ತಾಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಮಳೆ ಹಾಗೂ ಗಾಳಿಯ ಅಬ್ಬರದ ಪರಿಣಾಮ ಮನೆ ಹಾಗೂ ಕೊಟ್ಟಿಗೆಯ ಗೋಡೆಗಳು ಕುಸಿದರೆ ತೆಂಗಿನ ಮರಗಳು ಬುಡ ಸಮೇತ ಧರೆಗುರುಳಿವೆ.

    ಬುಧವಾರ ಬೆಳಗ್ಗೆಯಿಂದಲೇ ತಾಲೂಕಿನ ಕೆಲವೆಡೆ ಜಿಟಿಜಿಟಿ ಮಳೆ ಸುರಿಯಿತು. ನಂತರ ಧಾರಾಕಾರವಾಗಿ ಸುರಿಯಿತು. ಸಂಜೆ 5 ಗಂಟೆ ಸುಮಾರಿನಲ್ಲಿ ಕಸಬಾ ಹೋಬಳಿ ಗದ್ದೆ ಬಿಂಡೇನಹಳ್ಳಿ ಗ್ರಾಮದಲ್ಲಿ ಮೂರು ಮನೆಗಳ ಗೋಡೆಗಳು ಕುಸಿದಿವೆ. ಮೊದಲು ನಂಜೇಗೌಡ ಎಂಬವರ ಮನೆಯ ಒಂದು ಬದಿಯ ಗೋಡೆ ಪಕ್ಕದ ತಮ್ಮಯ್ಯ ಎಂಬವರ ಮನೆಯ ಮೇಲೆ ಕುಸಿದಿದೆ. ಇದರಿಂದ ತಮ್ಮಯ್ಯ ಎಂಬವರ ಮನೆಯ ಗೋಡೆ ಕುಸಿದು ಪಕ್ಕದ ಸುರೇಶ್ ಮನೆಯ ಮೇಲೆ ಬಿದ್ದಿದೆ. ಇದರಿಂದ ಒಂದು ಮನೆಯ ಅರ್ಧ ಗೋಡೆ ಹಾಗೂ ಪಕ್ಕದ ಎರಡು ಮನೆಗಳು ಸಂಪೂರ್ಣ ನೆಲಸಮಗೊಂಡಿವೆ.

    ಸದ್ಯಕ್ಕೆ ಈ ವೇಳೆ ತಮ್ಮಯ್ಯ ಹಾಗೂ ಸುರೇಶ್ ಮನೆಯೊಳಗೆ ಯಾರೂ ಇಲ್ಲದಿದ್ದರಿಂದ ಯಾವುದೇ ಅವಘಡ ಅಥವಾ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ರಾಗಿ ಸೇರಿದಂತೆ ದಿನಸಿ ಪದಾರ್ಥಗಳು, ಪಾತ್ರೆ-ಪಗಡೆಗಳು, ಕುರ್ಚಿ, ಟಿವಿ ಸೇರಿದಂತೆ ದಿನಬಳಕೆ ವಸ್ತುಗಳು ಗೋಡೆಯ ಮಣ್ಣಿನ ಕೆಳಗೆ ಸಿಲುಕಿಕೊಂಡಿವೆ. ಎಂ.ಕೆ.ಹೊಸೂರು, ಚಿಕ್ಕೇನಹಳ್ಳಿ, ಮೆಳ್ಳಹಳ್ಳ, ಬಾಗೂರು, ಬೆಲಸಿಂದ, ಗುಲಸಿಂದ, ಆಯರಹಳ್ಳಿ, ಜಂಬೂರು ಸೇರಿದಂತೆ ವಿವಿಧೆಡೆ ತೆಂಗಿನ ಮರಗಳು ಮಳೆಗಾಳಿಗೆ ಬುಡಸಮೇತ ಕುಸಿದು ಧರೆಗುರುಳಿವೆ. ಮಾವು, ಬೇವು, ಹಲಸು ಹಾಗೂ ಇನ್ನಿತರ ಮರಗಳ ಕೊಂಬೆಗಳ ಮುರಿದು ಬಿದ್ದಿವೆ.

    ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅನಾಹುತ ಸಂಭವಿಸಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮನೆ ಮತ್ತು ತೆಂಗಿನ ಮರ ಕಳೆದುಕೊಂಡಿರುವವರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts