More

    ಮಳೆಯಿಂದ ನೆಲಕಚ್ಚಿದ ವರ್ಷದ ಕೂಳು

    ಮುಳಬಾಗಿಲು: ಈ ವರ್ಷ ಉತ್ತಮ ಮಳೆ ಬೆಳೆಯಾಗಿದ್ದರೂ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದ ಸ್ಥಿತಿ ರೈತರದ್ದಾಗಿದ್ದು, ಸತತ ಜಡಿ ಮಳೆಯಿಂದ ಬೆಳೆಗಳು ನೆಲಕಚ್ಚಿ ಕೊಯ್ಲು ಮಾಡಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಾಲೂಕಿನಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ರಾಗಿ, ಭತ್ತ ಬೆಳೆದಿದ್ದು, ಕೊಯ್ಲು ಮಾಡುವ ಹಂತದಲ್ಲಿರುವಾಗಲೇ ಮಳೆ ಸುರಿದು ಸಂಪೂರ್ಣ ಬೆಳೆ ನೆಲಕ್ಕೆ ಬಿದ್ದಿದೆ. ಕೊಯ್ದಿರುವ ಬೆಳೆಗಳು ಮಳೆಗೆ ನೆಂದು ನೀರುಪಾಲಾಗುತ್ತಿದೆ. ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದ ಕೊಯ್ಲು ಮಾಡಿರುವ ಬೆಳೆಯ ತೆನೆ ಒಕ್ಕಣೆ ಮಾಡಲು ರೈತರು ಹರಸಾಹಸ ಪಡಬೇಕಿದೆ.

    ಯಂತ್ರಗಳ ಸಮಸ್ಯೆ: ಕೊಯ್ಲು ಮಾಡಲು ಯಂತ್ರಗಳು ಬಂದಿದ್ದರೂ ಈ ಭಾಗದಲ್ಲಿ ಅಂತಹ ಯಂತ್ರಗಳನ್ನು ಕೃಷಿ ಯಂತ್ರಧಾರೆಗಳಲ್ಲಿ ಇಡದಿರುವುದು ಮತ್ತೊಂದು ಸಮಸ್ಯೆಯಾಗಿದೆ. ಬೆಳೆಯನ್ನು ಹೊಲದಿಂದ ಕಣಕ್ಕೆ ಸಾಗಿಸಲು ಮಳೆ ಬಿಡುತ್ತಿಲ್ಲ. ಕೊಯ್ಲಿಗೆ ಬಂದ ಬೆಳೆ ಕಟಾವು ಮಾಡಲು ಕೂಲಿಯಾಳುಗಳ ಅಭಾವ ಹೆಚ್ಚಾಗಿದ್ದು, 250ರಿಂದ 350 ರೂ. ಕೂಲಿ ಕೊಟ್ಟರೂ ಆಳು ಸಿಗದೆ ರೈತರು ಪರಿತಪಿಸುವಂತಾಗಿದೆ.

    ರಾಜಕೀಯದತ್ತ ಯುವಕರು: ಮಳೆಯಿಂದ ನೆಲಕಚ್ಚಿ ಅಧಿಕ ತೇವಾಂಶದಿಂದ ರಾಗಿ, ಭತ್ತ ಮೊಳಕೆಯೊಡೆಯುತ್ತಿದ್ದು, ಕಣ್ಣೆದುರಿಗೇ ಅನ್ನ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಸಹ ಬಂದಿರುವುದರಿಂದ ಕೃಷಿ ಚಟುವಟಿಕೆಗಳತ್ತ ಯುವ ಸಮೂಹ ಆಸಕ್ತಿ ಕಳೆದುಕೊಂಡಿದ್ದು, ರಾಜಕಾರಣದ ಗೀಳು ಹಚ್ಚಿಸಿಕೊಂಡವರು ಕೃಷಿಯನ್ನು ಮರೆತು ರಾಜಕೀಯದತ್ತ ಮುಖಮಾಡಿ ವರ್ಷದ ಕೂಳು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಮಳೆಯಿಂದ ಕೊಯ್ಲಿಗೆ ಬಂದ ಬೆಳೆಯನ್ನು ಸಕಾಲಕ್ಕೆ ಕಟಾವು ಮಾಡಿ ಒಕ್ಕಣೆ ಮಾಡಲು ಸಾಧ್ಯವಾಗುತ್ತಿಲ್ಲ. ರಾಗಿ ಮತ್ತು ಭತ್ತ ಮಳೆಯಿಂದ ನಷ್ಟವಾಗುತ್ತಿದೆ. ಮಳೆ ನಿಂತರೆ ಕಟಾವು ಮಾಡಿ ಒಣಗಿಸಿ ಒಕ್ಕಣೆ ಮಾಡಿಕೊಳ್ಳಲು ಅವಕಾಶವಿದೆ.
    ಅಮರನಾರಾಯಣರೆಡ್ಡಿ, ಹಿರಿಯ ಸಹಾಯಕ ಕೃಷಿ ನಿರ್ದೇಶಕ, ಮುಳಬಾಗಿಲು

    ಸತತ ಜಡಿ ಮಳೆಯಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತಿದೆ. ಬಂದ ಬೆಳೆಯನ್ನು ಕೊಯ್ಲು ಮಾಡಲು ಸಾಧ್ಯವಾಗದೆ ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ಕೂಲಿಯೂ ಹೆಚ್ಚಾಗಿದ್ದು, ಆಳು ಸಿಗದೆ ಸಕಾಲಕ್ಕೆ ಕಟಾವು ಮಾಡಲು ಆಗುತ್ತಿಲ್ಲ.
    ಎ.ಸುಬ್ರಮಣಿ, ಎಂ.ಅಗ್ರಹಾರ ರೈತ. ಮುಳಬಾಗಿಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts