More

    ಮಳೆಗಾಲದ ಬಳಿಕವೇ ಕೊಪ್ಪಿಕರ ರಸ್ತೆ ಸ್ಮಾರ್ಟ್

    ಹುಬ್ಬಳ್ಳಿ: ಅಮೃತ್ ಯೋಜನೆಯಡಿ ನಗರದ ಕೊಪ್ಪಿಕರ ರಸ್ತೆಯಲ್ಲಿ ಒಳಚರಂಡಿ (ಯುಜಿಡಿ) ಕಾಮಗಾರಿಯನ್ನು ಫೆಬ್ರವರಿಯಲ್ಲಿ ಪೂರ್ಣಗೊಳಿಸಲಾಗಿದೆ. ಆದರೆ, ಸ್ಮಾರ್ಟ್ ರೋಡ್ ಕಾಮಗಾರಿ ಇಲ್ಲಿಯವರೆಗೂ ಆರಂಭವಾಗಿಲ್ಲ. ಯುಜಿಡಿ ಕಾಮಗಾರಿಗಾಗಿ ಅಗೆದಿರುವ ರಸ್ತೆಯಲ್ಲಿ ತೆಗ್ಗು-ಗುಂಡಿಗಳು ಬಿದ್ದಿದ್ದು, ಸಾರ್ವಜನಿಕರಿಗೆ ನಿತ್ಯವೂ ರಸ್ತೆ ಸಂಚಾರ ಸವಾಲಾಗಿ ಪರಿಣಮಿಸಿದೆ.
    ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ‘ಸ್ಮಾರ್ಟ್ ರೋಡ್-2’ ಪ್ಯಾಕೇಜ್​ನಡಿ ಲ್ಯಾಮಿಂಗ್ಟನ್ ರಸ್ತೆಯಿಂದ ಕೊಪ್ಪಿಕರ ರಸ್ತೆ- ಬ್ರಾಡ್ ವೇ – ದುರ್ಗದಬೈಲ್​ವರೆಗೆ ಕಾಂಕ್ರೀಟ್ ರಸ್ತೆ ನಿರ್ವಣವಾಗಬೇಕಿದೆ. ಸ್ಮಾರ್ಟ್ ರೋಡ್​ಗಾಗಿ ಅಮೃತ್ ಯೋಜನೆಯಡಿ ಒಳಚರಂಡಿ ಕಾಮಗಾರಿಯನ್ನು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸಲಾಗಿತ್ತು. ಆದರೆ, ರಸ್ತೆ ಕಾಮಗಾರಿ ಆರಂಭಿಸದೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಕಾಲಹರಣ ಮಾಡಿದ್ದಾರೆ. ಲಾಕ್​ಡೌನ್ ಅವಧಿಯಲ್ಲೂ ಕಾಮಗಾರಿ ನಡೆಸಲಿಲ್ಲ. ಈಗ ಲಾಕ್​ಡೌನ್ ನಿಯಮಗಳಲ್ಲಿ ಸಡಿಲಿಕೆ ನೀಡಿರುವ ಪರಿಣಾಮ ಜನ-ವಾಹನ ಸಂಚಾರ ಹೆಚ್ಚಿದ್ದು, ರಸ್ತೆಯಲ್ಲಿ ಓಡಾಟ ದುಸ್ತರವಾಗಿದೆ.
    ಈಗ ಅಧಿಕಾರಿಗಳು ಮಳೆಗಾಲ ಎಂದು ನೆಪ ಹೇಳುತ್ತಿದ್ದಾರೆ. ಕಳೆದ 8-10 ದಿನಗಳಿಂದ ಹುಬ್ಬಳ್ಳಿ ನಗರದಲ್ಲಿ ಸಾಧಾರಣ ಮಳೆಯೂ ಆಗಿಲ್ಲ. ಮುಂದಿನ ದಿನಗಳಲ್ಲಿ ಸಾಧಾರಣ ಮಳೆಯಾದರೂ ಕೊಪ್ಪಿಕರ ರಸ್ತೆ ಕೆಸರು ಗದ್ದೆಯಂತಾಗುವುದು ನಿಶ್ಚಿತ. ಲಾಕ್​ಡೌನ್ ಕಾರಣಕ್ಕೆ ಕಳೆದೆರಡು ತಿಂಗಳು ಈ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿತ್ತು.

    ಒಳಚರಂಡಿ ಕಾಮಗಾರಿಗಾಗಿ ರಸ್ತೆ ಅಗೆದಾಗ 8-10 ತಿಂಗಳು ರಸ್ತೆ ಕುಸಿತಕ್ಕೆ ಒಳಗಾಗುತ್ತ ಇರುತ್ತದೆ. ಅಲ್ಲಿಯವರೆಗೆ ರಸ್ತೆ ಕಾಂಕ್ರೀಟಿಕರಣ, ಡಾಂಬರೀಕರಣ ಕಾಮಗಾರಿ ನಡೆಸುವುದು ಸೂಕ್ತವಲ್ಲ. ಇದೇ ವೇಳೆ ಸ್ಟೇಷನ್ ರಸ್ತೆ, ಜೆ.ಸಿ. ನಗರ ಒಳ ರಸ್ತೆಗಳ ಕಾಮಗಾರಿಗಳು ನಡೆಯುತ್ತಿವೆ. ರಸ್ತೆ ಕಾಮಗಾರಿ ನಿಮಿತ್ತ ಕೊಪ್ಪಿಕರ ರಸ್ತೆ ಬಂದ್ ಮಾಡಿದರೆ ಸಂಚಾರಕ್ಕೆ ಬೇರೆ ಮಾರ್ಗವೇ ಇರುವುದಿಲ್ಲ. ಮಳೆಗಾಲದ ಬಳಿಕ ಕೊಪ್ಪಿಕರ ರಸ್ತೆ ಕಾಮಗಾರಿ ಕೈಗೊಳ್ಳಲಿದ್ದೇವೆ.
    | ಶಕೀಲ್ ಅಹ್ಮದ್, ಎಂಡಿ, ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್
    =====


    ಯಜಿಡಿ ರಿಪೇರಿ ಕಿರಿಕಿರಿ: ಮೂರುಸಾವಿರ ಮಠದ ದ್ವಾರ ಬಾಗಿಲಿನಿಂದ ತಾಡಪತ್ರಿ ಗಲ್ಲಿಯವರೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಒಳಚರಂಡಿ ಮಾರ್ಗ (ಯುಜಿಡಿ) ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದೆ. ಇದರ ಜತೆಯಲ್ಲಿಯೇ ಮಹಾವೀರ ಗಲ್ಲಿಯಿಂದ ಮೂರುಸಾವಿರ ಮಠದವರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ-ಗಟಾರ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದಾಗಿ ಈ ಭಾಗದಲ್ಲಿ ರಸ್ತೆ ಸಂಚಾರ ದುಸ್ತರವಾಗಿದೆ. ಒಳಚರಂಡಿ ನೀರು ಮನೆಯ ಒಳಗೆ ರಿವರ್ಸ್ ಹೋಗುವ ಸಮಸ್ಯೆಯನ್ನು ಕಳೆದ 2 ವರ್ಷಗಳಿಂದ ಮೂರುಸಾವಿರ ಮಠದ ಸುತ್ತಮುತ್ತಲಿನ ನಿವಾಸಿಗಳು ಅನುಭವಿಸುತ್ತಿದ್ದಾರೆ. ಇದೀಗ ಪಾಲಿಕೆಯು 28 ಲಕ್ಷ ರೂ. ವೆಚ್ಚದಲ್ಲಿ ಯುಜಿಡಿ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದೆ. ತಾಡಪತ್ರಿ ಗಲ್ಲಿಯಲ್ಲಿ ರಸ್ತೆಯ ಮಧ್ಯದಲ್ಲೇ 7-8 ಅಡಿಯಷ್ಟು ಆಳಕ್ಕೆ ತೆಗ್ಗು ತೆಗೆದು ಪೈಪ್ ಅಳವಡಿಸಲಾಗುತ್ತಿದೆ. ಮೂರುಸಾವಿರ ಮಠದ ದ್ವಾರ ಬಾಗಿಲಿನಿಂದ ತಾಡಪತ್ರಿ ಗಲ್ಲಿಯವರೆಗೆ ನೆಲದಡಿ ಪೈಪ್ ಹಾಕಿ ಮಣ್ಣು ಮುಚ್ಚಲಾಗಿದೆ. ಸಹಜವಾಗಿಯೇ ರಸ್ತೆಯಲ್ಲಿ ತಗ್ಗು ಬಿದ್ದಿದ್ದು, ಮಣ್ಣಿನ ರಸ್ತೆಯಲ್ಲಿ ಸಂಚರಿಸುವ ಸ್ಥಿತಿ ನಾಗರಿಕರದ್ದು. ಮಳೆಯಿಂದ ರಸ್ತೆಯ ಉದ್ದಗಲವೂ ರಾಡಿ ಮಣ್ಣು ಹರಡಿಕೊಂಡಿದೆ. ಹಸಿ ಮಣ್ಣಿನಲ್ಲಿ ದ್ವಿಚಕ್ರ ವಾಹನಗಳು ಸಿಲುಕಿಕೊಳ್ಳುವುದು ಸಾಮಾನ್ಯ ದೃಶ್ಯವಾಗಿದೆ.
    ವಿದ್ಯುತ್ ಕಂಬಕ್ಕೆ ಧಕ್ಕೆ: ಕುಬಸದ ಗಲ್ಲಿಯಲ್ಲೂ ‘ಸ್ಮಾರ್ಟ್ ರೋಡ್’ ಕಾಮಗಾರಿ ನಡೆಯುತ್ತಿದೆ. ಅಂಗಡಿಗಳ ಮುಂಭಾಗಕ್ಕೆ ಹೊಂದಿಕೊಂಡೇ ಗಟಾರ್ ನಿರ್ವಣಕ್ಕೆ ಅಗಳ ತೆಗೆಯಲಾಗಿದೆ. ಇದರಿಂದ ಕುಡಿಯುವ ನೀರು, ವಿದ್ಯುತ್ ಸಂಪರ್ಕ ವ್ಯವಸ್ಥೆ ವ್ಯತ್ಯಯಗೊಂಡಿದೆ. ‘ಕಳೆದ 1 ವಾರದಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗಟಾರಕ್ಕೆ ಅಗಳ ತೋಡುವಾಗ ವಿದ್ಯುತ್ ಕಂಬಕ್ಕೆ ಧಕ್ಕೆಯಾಗಿ ಸಂಪರ್ಕ ಕಡಿತಗೊಂಡಿದೆ. ಗುತ್ತಿಗೆದಾರರು ಸರಿಪಡಿಸಿಲ್ಲ. ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಕೇಳಿದರೆ ಹೆಸ್ಕಾಂಗೆ ಅರ್ಜಿ ಕೊಡಿ ಎನ್ನುತ್ತಾರೆ. ಹಾಳು ಮಾಡಿದವರು ಸರಿಪಡಿಸಬೇಕಲ್ಲವೇ?’ ಎಂದು ಸ್ಥಳೀಯರಾದ ಮಹಾಲಕ್ಷ್ಮಿ ಎಂಟರ್​ಪ್ರೖೆಸಿಸ್​ನ ಜಯಂತಿಲಾಲ ಹಾಗೂ ಕಿಶೋರ ಜೈನ್ ಪ್ರಶ್ನಿಸುತ್ತಾರೆ. ಇದೇ ಪ್ರದೇಶದಲ್ಲಿ ಇನ್ನೊಂದು ವಿದ್ಯುತ್ ಕಂಬವೊಂದು ದುರ್ಬಲಗೊಂಡಿದೆ. ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಯ ಗುತ್ತಿಗೆದಾರರು ಕಬ್ಬಿಣದ ವಿದ್ಯುತ್ ಕಂಬಕ್ಕೆ ನೆಲದಿಂದ ಮೂರು ಅಡಿಯಷ್ಟು ಎತ್ತರಕ್ಕೆ ಸಿಮೆಂಟ್ ಕಾಂಕ್ರೀಟ್ ಹಾಕಿ ಭದ್ರ ಪಡಿಸಿದ್ದಾರೆ. ತುಕ್ಕು ಹಿಡಿದಿರುವ ಕಂಬ ಹಾಗೂ ಅದರ ಮೇಲಿನ ತಂತಿ ಮಾರ್ಗ, ಪರಿಕರಗಳ ಭಾರಕ್ಕೆ ಇದೇನೂ ಸಾಲದು. ಮುರಿದು ಬೀಳುವುದನ್ನು ತಪ್ಪಿಸಲು ಪಕ್ಕದ ಕಟ್ಟಡದ ಮಹಡಿ ಮೇಲಿನ ಅಂಗಡಿಯ ಕಬ್ಬಿಣದ ರೇಲಿಂಗ್ ಹಾಗೂ ವಿದ್ಯುತ್ ಕಂಬಕ್ಕೆ ನೈಲಾನ್ ಹಗ್ಗದಿಂದ ಬಿಗಿದು ಕಟ್ಟಲಾಗಿದೆ. ಇಷ್ಟು ದುರ್ಬಲವಾಗಿರುವ ವಿದ್ಯುತ್ ಕಂಬವನ್ನು ಬದಲಾಯಿಸಬೇಕೆಂಬ ಯೋಚನೆ ಹೆಸ್ಕಾಂಗೆ ಯಾಕೆ ಬಂದಿಲ್ಲ ಎಂಬುದು ಯಕ್ಷ ಪ್ರಶ್ನೆ. ತಾತ್ಕಾಲಿಕ ಕ್ರಮವು ಜನರು ಆತಂಕದಲ್ಲಿ ಬದುಕುವ ಪರಿಸ್ಥಿತಿಯನ್ನು ತಂದೊಡ್ಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts