ಮರಾಠ ಸಮುದಾಯ ಕನ್ನಡ ವಿರೋಧಿ ಅಲ್ಲ

2

ಬಾಗಲಕೋಟೆ: ರಾಜ್ಯದಲ್ಲಿ ಹಿಂದುಳಿದಿರುವ ಮರಾಠ ಸಮಾಜದ ವಿವಿಧ ಪಂಡಗಳ ಅಭಿವೃದ್ಧಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ಸ್ವಾಗತಾರ್ಹ. ಆದರೇ ಕೆಲವು ಕನ್ನಡ ಪರ ಸಂಘಟನೆಗಳು ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿವೆ. ರಾಜ್ಯಲ್ಲಿರುವ ಮರಾಠ ಸಮುದಾಯ ಕನ್ನಡ ವಿರೋಧಿಗಳಲ್ಲ ಎಂದು ಸಮಸ್ತ ಕ್ಷತ್ರಿಯ ಸಮಾಜದ ಮುಖಂಡ, ವಿಧಾನ ಪರಿಷತ್ತ ಮಾಜಿ ಸದಸ್ಯ ನಾರಾಯಸಾ ಭಾಂಡಗೆ ಹೇಳಿದರು.
ವಾಟಳ್ ನಾಗರಾಜ ಸೇರಿದಂತೆ ಇತರ ಕನ್ನಡ ಪರ ಹೋರಾಟಗಾರರು ಸಂವಿಧಾನ ಬಗ್ಗೆ ಮಾತನಾಡುವದಿಲ್ಲ. ಭಯೋತ್ಪಾದನೆ, ಸೈನಿಕರ ಮೇಲೆ ಹಲ್ಲೆಯಾದಾಗ ಹಾಗೂ ಟಿಪ್ಪು ಹಿಂದುಗಳು, ಕೊಡಗಿನ ಕನ್ನಡಿಗರನ್ನು ಕೊಲೆ ಮಾಡಿದಾಗ ಅದನ್ನು ವಿರೋಧಿಸಿ ಧ್ವನಿ ಎತ್ತುವದಿಲ್ಲ. ಈ ಬಗ್ಗೆ ಈಗ ಸುಮ್ಮನೆ ಸಮಾಜದಲ್ಲಿ ಸಾಮರಸ್ಯ ಹಾಳು ಮಾಡಲು ಮುಂದಾಗಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಮರಾಠ ಅಭಿವೃದ್ಧಿ ನಿಗಮ ಮರಾಠ ಭಾಷಿಕರಗಾಗಿ ಸ್ಥಾಪಿಸಿಲ್ಲ. ಮರಾಠ ಸಮುದಾಯದ ಬಲವರ್ಧನೆ ಉದ್ದೇಶ ಹೊಂದಲಾಗಿದೆ. ಮರಾಠ ಸಮುದಾಯ ಎಂದಿಗೂ ಎಂವಿಎಸ್ ಜತೆ ಕೈ ಜೋಡಿಸಿಲ್ಲ. ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮನ ತತ್ವಾದರ್ಶ ಪಾಲನೆ ಮಾಡುತ್ತಾರೆ. ಬೆಂಗಳೂರಿನಲ್ಲಿ ಬಾಡಿಗೆ ಜನರನ್ನು ತಂದು ವಾಟಳ್ ನಾಗರಾಜ ಅಂತಹವರು ಕುದರೆ, ಕತ್ತೆಯೊಂದಿಗೆ ಪ್ರತಿಭಟನೆ ಮಾಡುತ್ತಾರೆ. ನಿಜವಾದ ಕನ್ನಡಿಗರು ಡಿ.5 ಹಮ್ಮಿಕೊಂಡಿರುವ ಕರ್ನಾಟಕ ಬಂದ್‌ಗೆ ಬೆಂಬಲಿಸುವದಿಲ್ಲ. ಕ್ಷತ್ರಿಯ ಸಮಾಜದವರು ಕನ್ನಡ ವಿರೋಧಿಗಳು ಅಲ್ಲ ಎಂದರು.
ಮುಖಂಡ ಡಾ.ಶೇಖರ ಮಾನೆ ಮಾತನಾಡಿ, ರಾಜದಲ್ಲಿ ನೆಲೆಸಿರುವ ಕ್ಷತ್ರಿಯ ಸಮಾಜಕ್ಕೆ ಮರಾಠಿ ಮಾತೃ ಭಾಷೆಯಾಗಿದ್ದರೇ ಕನ್ನಡ ಉಸಿರು ಆಗಿದೆ. ಮರಾಠ ಸಮಾಜ ಎಂದಿಗೂ ನಾಡದ್ರೋಹ ಮಾಡುವದಿಲ್ಲ. ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇನ್ನು ಸದಾನಂದ ಗೌಡ ಮುಖ್ಯಮಂತ್ರಿ ಇದ್ದಾಗ ಶಿವಾಜಿ ಜಯಂತಿ ಸರ್ಕಾರಿ ಆಚರಣೆ ಮಾಡಿದರು. ಇದೀಗ ಯಡಿಯೂರಪ್ಪ ಅವರು ನಿಗಮ ಮಂಡಳಿ ಸ್ಥಾಪಿಸುವ ಮೂಲಕ ಎರಡನೇ ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿ ಮರಾಠ ಸಮುದಾಯಕ್ಕೆ 3 ಬಿ ಮೀಸಲಾತಿಯಲ್ಲಿದ್ದು, ಸರ್ಕಾರ ಮುಂದಿನ ದಿನಗಳಲ್ಲಿ 2 ಎಗೆ ಸರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಡಾ.ಎಚ್.ಎಫ್.ಯೋಗಪ್ಪನವರ ಮಾತನಾಡಿ, ರಾಜ್ಯದಲ್ಲಿ 6 ಕೋಟಿ ಜನ ಸಂಖ್ಯೆಯಲ್ಲಿ 1 ಕೋಟಿ ಜನ ಕ್ಷತ್ರಿಯರು ಇದ್ದಾರೆ. ಅದರಲ್ಲಿ 50 ಲಕ್ಷ ಮರಾಠರು ಇದ್ದಾರೆ. ನೂರಾರು ವರ್ಷಗಳಿಂದ ಇಲ್ಲೆ ನೆಲೆಸಿ ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿಗೆ ಬದ್ಧತೆ ತೋರಿಸಿದ್ದಾರೆ. ನಿಗಮ ಸ್ಥಾಪನೆಗೆ ವಿರೋಧಿಸುವುದು ಸರಿಯಲ್ಲ. ಇದು ಮರಾಠಿ ಭಾಷಿಕರಿಗೆ ನೀಡಿಲ್ಲ. ಮರಾಠ ಸಮುದಾಯದ ಏಳಿಗಾಗಿ ಸ್ಥಾಪಿಸಲಾಗಿದೆ ಎಂದರು. ಸಮಸ್ತ ಕ್ಷತ್ರಿಯ ಸಮಾಜದ ಮುಖಂಡರಾದ ಶರತ ಕಲಬುರ್ಗಿ, ಮಾರುತಿ ಶಿಂಧೆ, ಗುಂಡುರಾವ ಶಿಂಧೆ, ಸ್ಮೀತಾ ಪವಾರ ಸುದ್ದಿಗೋಷ್ಠಿಯಲ್ಲಿ ಇದ್ದರು.