More

    ತೊಗರಿ, ಜೋಳಕ್ಕೆ ಕೀಟಗಳ ಕಾಟ

    ಬೀದರ್: ಜಿಲ್ಲೆ ವಿವಿಧೆಡೆ ತೊಗರಿ, ಕಡಲೆ ಹಾಗೂ ಜೋಳಕ್ಕೆ ಕಾಯಿಕೊರಕ, ಸೈನಿಕ ಹುಳು ಬಾಧೆ ಕಂಡುಬಂದಿದೆ. ರೈತರು ಸೂಕ್ತ ನಿರ್ವಹಣೆ ಕೈಗೊಳ್ಳುವಂತೆ ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

    ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಮುಖ್ಯಸ್ಥ ಡಾ. ಎನ್.ಎಂ ಸುನೀಲಕುಮಾರ, ವಿಜ್ಞಾನಿಗಳಾದ ಡಾ. ಮಲ್ಲಿಕಾರ್ಜುನ ನಿಂಗದಳ್ಳಿ, ಡಾ. ಜ್ಞಾನದೇವ ಬುಳ್ಳಾ, ಡಾ. ಅಕ್ಷಯಕುಮಾರ, ಡಾ. ಬಸವರಾಜ ಬಿರಾದಾರ ಮತ್ತು ಕೃಷಿ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಪಿ.ಎಂ., ಮಸ್ಕಲೆ ರಮೇಶ ಅವರನ್ನೊಳಗೊಂಡ ತಂಡವು ಜಿಲ್ಲೆಯ ವಿವಿಧೆಡೆ ಜಂಟಿ ಕ್ಷಿಪ್ರ ಸಂಚಾರ ಸಮೀಕ್ಷೆ ವೇಳೆ ಬೆಳೆಗಳಿಗೆ ಕೀಟಗಳು ಹಾಗೂ ರೋಗ ಬಾಧಿಸುತ್ತಿರುವುದು ಪತ್ತೆಯಾಗಿದೆ.

    ಬೀದರ್, ಭಾಲ್ಕಿ, ಔರಾದ್, ಹುಮನಾಬಾದ್ ಮತ್ತು ಬಸವಕಲ್ಯಾಣ ತಾಲೂಕಿನ ಅನೇಕ ಗ್ರಾಮಗಳ ಹೊಲದಲ್ಲಿ ತೊಗರಿಗೆ ತೇವಾಂಶದ ಕೊರತೆ ಕಾಡುತ್ತಿದೆ. ಹುಮನಾಬಾದ್ ತಾಲೂಕಿನ ತಾಳಮಡಗಿ, ಹುಡಗಿ, ಭಾಲ್ಕಿ ತಾಲೂಕಿನ ಭಾಟಸಾಂಗವಿ ಹಾಗೂ ಔರಾದ್ ತಾಲೂಕಿನ ಕಮಲನಗರ, ಠಾಣಾಕುಶನೂರ ಗ್ರಾಮಗಳ ಕೆಲ ಹೊಲಗಳಲ್ಲಿ ಹಸಿರು ಕಾಯಿಕೊರಕ ಭಾದೆ ಕಂಡುಬಂದಿದ್ದು, ಕೀಟವು ಆರ್ಥಿಕ ನಷ್ಟ ರೇಖೆ ತಲುಪಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

    ಕೀಟವು ಆರ್ಥಿಕ ನಷ್ಟ ರೇಖೆ ತಲುಪಿರುವುದನ್ನು ಕಂಡುಬಂದಲ್ಲಿ ರೈತರು ತಕ್ಷಣವೇ ಇಮಾಮೆಕ್ಟಿನ್ ಬೆಂಜೊಯೇಟ್ 0.2 ಗ್ರಾಂ ಅಥವಾ ಕ್ಲೋರ್ಯಾಂಟ್ರನಿಲಿಪ್ರೋಲ್ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಹೇಳಿದ್ದಾರೆ.

    ಜೋಳಕ್ಕೆ ಸೈನಿಕ ಹುಳು ಬಾಧೆ ಕಂಡುಬಂದಿದೆ. ಇದರ ನಿರ್ವಹಣೆಗೆ ಇಮಾಮೆಕ್ಟಿನ್ ಬೆಂಜೋಯೇಟ್ 5 ಎಸ್. ಜಿ. 0.4 ಗ್ರಾಂ ಅಥವಾ ಸ್ಪೈನೋಸಾಡ್ 45 ಎಸ್.ಸಿ. 0.3 ಮಿ.ಲೀ ಅಥವಾ ಸ್ಪೈನೋಟೋರಂ 12.5 ಎಸ್.ಸಿ 0.5 ಮಿ. ಲೀ. ಅಥವಾ ಕ್ಲೋರಾಂಟ್ರಿನಿಲಿಪ್ರೋಲ್ 18.5 ಎಸ್.ಸಿ 0.3 ಮಿ.ಲೀ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. ಪ್ರತಿ ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ. ಸಿಂಪರಣಾ ದ್ರಾವಣ ನೇರವಾಗಿ ಸುಳಿಯೊಳಗೆ ಬೀಳುವಂತಿರಬೇಕು ಎಂದು ಸಲಹೆ ನೀಡಿದ್ದಾರೆ.

    ಕಡಲೆಗೆ ನೆಟೆ ರೋಗ
    ಜಿಲ್ಲೆಯ ವಿವಿಧೆಡೆ ಕಡಲೆೆಯಲ್ಲಿ ನೆಟೆ ರೋಗಬಾಧೆ ಕಂಡುಬಂದಿದೆ. ರೋಗ ಬಂದ ಗಿಡದ ಎಲೆಗಳು ಹಳದಿಯಾಗಿ, ಬಾಡಿ ಜೋತು ಬಿದ್ದು ನಂತರ ಒಣಗಿ ಉದುರದೆ ಗಿಡಕ್ಕೆ ಅಂಟಿಕೊಂಡಿರುತ್ತವೆ. ಗಿಡದ ಬೇರುಗಳು ಕೊಳೆಯದೆ ಆರೋಗ್ಯವಾಗಿರುವಂತೆ ಕಾಣುತ್ತವೆ. ಕಾಂಡವನ್ನು ಉದ್ದವಾಗಿ ಸೀಳಿ ನೋಡಿದಾಗ ನೀರು ಸಾಕಾಣಿಕಾ ಅಂಗಾಂಶವು ಕಡು ಕಪ್ಪಾಗಿರುವುದು ನಿಖರವಾಗಿ ಕಂಡು ಬರುತ್ತದೆ. ನಿರ್ವಹಣೆಗಾಗಿ ಕಾರ್ಬನ್ಡೈಜಿಮ್ 1 ಗ್ರಾಂ ಪ್ರತಿ ಲೀ. ನೀರಿಗೆ ಬೆರೆಸಿ ಸರಿಯಾಗಿ ಗಿಡ ತೊಯ್ಯುವಂತೆ ಸಿಂಪರಿಸಬೇಕು ಎಂದು ಸಲಹೆ ನೀಡಿದ್ದಾರೆ. ಮಾಹಿತಿಗಾಗಿ ಸಮೀಪದ ಕೃಷಿ ಅಧಿಕಾರಿ ಅಥವಾ ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಬೇಕು ಎಂದು ಕೆವಿಕೆ ಮುಖ್ಯಸ್ಥ ಸುನೀಲಕುಮಾರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts