More

    ಮನೆ ಮನೆಗೆ ಬಂದ ತರಕಾರಿ ಗಾಡಿ

    ಹುಬ್ಬಳ್ಳಿ: ಕರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಲಾಕ್​ಡೌನ್ ಘೊಷಿಸಿರುವುದರಿಂದ ಅವಳಿ ನಗರದ ಬಡಾವಣೆಗಳಲ್ಲಿ ಶನಿವಾರ ತರಕಾರಿ ಗಾಡಿಗಳು ಓಡಾಡಿದವು. ಜನರು ಮನೆಯ ಬಳಿ ನಿಂತು ತರಕಾರಿ ಖರೀದಿಸಿದರು.

    ಮಾರುಕಟ್ಟೆ ಪ್ರದೇಶಗಳಲ್ಲಿ ಸಾರ್ವಜನಿಕರು ಅಂತರ ಕಾಯ್ದುಕೊಳ್ಳದ ಕಾರಣಕ್ಕೆ ಶುಕ್ರವಾರದಿಂದ ಹು-ಧಾ ದಲ್ಲಿನ ಎಲ್ಲ ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದೆ. ಇದರ ಪರಿಣಾಮವಾಗಿ ಮನೆ ಮನೆಗೆ ತರಕಾರಿ ಪೂರೈಸುವ ವ್ಯವಸ್ಥೆ ಚಾಲನೆ ಪಡೆದುಕೊಂಡಿದೆ. ಪಾಲಿಕೆಯಿಂದ ವೆಂಡರ್ ಪಾಸ್ ಪಡೆದವರಿಗೆ ಮಾತ್ರ ಗಾಡಿಯಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

    ಸಗಟು ಹಾಗೂ ಚಿಲ್ಲರೆ ವ್ಯಾಪಾರಸ್ಥರು ಗೂಡ್ಸ್ ಆಟೋದಲ್ಲಿ ತರಕಾರಿ ತುಂಬಿಕೊಂಡು ವಿವಿಧ ಬಡಾವಣೆಗಳಿಗೆ ಹೋಗಿ ಮಾರಾಟ ಮಾಡುತ್ತಿದ್ದದ್ದು ಶನಿವಾರ ಕಂಡು ಬಂತು. ಹುಬ್ಬಳ್ಳಿಯಲ್ಲಿ ಪ್ರತಿ ವಾರ್ಡ್​ಗೆ 15 ಜನ ಹಾಗೂ ಧಾರವಾಡದಲ್ಲಿ 10 ಜನ ಮಾರಾಟಗಾರರಿಗೆ ವೆಂಡರ್ ಪಾಸ್ ನೀಡಲಾಗಿದೆ. ಪಾಸ್ ಪಡೆದವರು ಮಾತ್ರ ಮಾರಾಟ ಮಾಡಬೇಕು. ಆಯಾ ವಾರ್ಡ್​ನಲ್ಲಿ ಮಾತ್ರ ಮಾರಾಟ ಮಾಡಬೇಕೆಂದು ಶರತ್ತು ವಿಧಿಸಲಾಗಿದೆ. ಇದರ ಹೊರತಾಗಿಯೂ ರಸ್ತೆ ಬದಿಯಲ್ಲಿ ಕೆಲವರು ತಳ್ಳುಗಾಡಿ ಹಾಗೂ ಟೋಕರಿಯಲ್ಲಿ ತರಕಾರಿ ತುಂಬಿಕೊಂಡು ಮಾರಾಟ ಮಾಡಿದರು. ಇವರಲ್ಲಿ ಕೆಲವರು ಸಾರ್ವಜನಿಕರು ಅಂತರ ಕಾಯ್ದುಕೊಳ್ಳುವಂತೆ ರಸ್ತೆಯ ಮೇಲೆ ಮಾರ್ಕಿಂಗ್ ಮಾಡಿದ್ದರು.

    ಇದೇ ಮಾದರಿಯಲ್ಲಿ ದಿನಸಿ ಹಾಗೂ ನಿತ್ಯೋಪಯೋಗಿ ವಸ್ತುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲು ಪಾಲಿಕೆ ಮುಂದಾಗಿದೆ. ಆಯಾ ಬಡಾವಣೆಯ ಕಿರಾಣಿ ಅಂಗಡಿಯವರು ದಿನಸಿ ವಸ್ತುಗಳನ್ನು ಪ್ಯಾಕೆಟ್ ಮಾಡಿಕೊಂಡು ಗಾಡಿಯಲ್ಲಿ ತುಂಬಿಕೊಂಡು ಮನೆ ಮನೆಗೆ ಹೋಗಿ ಮಾರಾಟ ಮಾಡಬಹುದಾಗಿದೆ. ಇದರಿಂದ ಬೀದಿಯಲ್ಲಿ ಜನರ ಓಡಾಟ ಇನ್ನಷ್ಟು ತಗ್ಗಲಿದೆ.

    ಲಾಕ್​ಡೌನ್ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಜನತಾ ಬಜಾರ್, ಎಂ.ಜಿ. ಮಾರ್ಕೆಟ್, ದುರ್ಗದಬೈಲ್, ಸರಾಫ್​ಗಟ್ಟಿ, ಧಾರವಾಡದ ಸೂಪರ್ ಬಜಾರ್, ಇನ್ನಿತರ ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದೆ. ಶುಕ್ರವಾರದಂದು ವಿಶಾಲವಾದ ನೆಹರು ಮೈದಾನ, ಈದ್ಗಾ ಮೈದಾನ, ಹಳೇ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾರ್ಕಿಂಗ್ ಮಾಡಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಜನರು ಅಂತರ ಕಾಯ್ದುಕೊಳ್ಳದೇ ಪಕ್ಕಾ ವಾರದ ಸಂತೆಯಂತೆ ಜಮಾಯಿಸಿದ್ದರಿಂದ ಜಿಲ್ಲಾಡಳಿತ ಒಂದೇ ದಿನದಲ್ಲಿ ಈ ವ್ಯವಸ್ಥೆಯನ್ನು ಕೈ ಬಿಟ್ಟಿತು.

    ಗಾಡಿಯಲ್ಲಿ ತರಕಾರಿ ಹಾಗೂ ದಿನಸಿ ವಸ್ತುಗಳನ್ನು ಮಾರಾಟ ಮಾಡುವವರ ಪಟ್ಟಿಯನ್ನು ಪಾಲಿಕೆ ವೆಬ್​ಸೈಟ್ ಡಿಡಿಡಿ.ಜಛಞ್ಚ.ಞ್ಟ್ಚಜಟಡ.ಜ್ಞಿ ನಲ್ಲಿ ಪ್ರಕಟಿಸಲಿದ್ದೇವೆ. ಅದರಲ್ಲಿ ಮಾರಾಟಗಾರರ ಹೆಸರು, ಬಡಾವಣೆಯ ವಿವರ, ಸಂಪರ್ಕ ಸಂಖ್ಯೆ ಇರಲಿದೆ. ಇದರಿಂದ ಗ್ರಾಹಕರು ಮುಂಚಿತವಾಗಿ ಕರೆ ಮಾಡಿ ವಸ್ತುಗಳನ್ನು ಖರೀದಿಸಲು ಅನುಕೂಲವಾಗಲಿದೆ.
    | ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts