More

    ಮನೆ ಬಾಗಿಲಿಗೆ ಸೌಲಭ್ಯ ತಲುಪಿಸಿ

    ಚಿತ್ರದುರ್ಗ: ಸರ್ಕಾರಿ ಸೌಲಭ್ಯ ಅರ್ಹರ ಮನೆ ಬಾಗಿಲಿಗೆ ತಲುಪಿಸಬೇಕು. ಈ ಕುರಿತು ನಿರ್ಲಕ್ಷ್ಯ ತೋರಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಸೂಚಿಸಿದರು.

    ಜಿಲ್ಲೆಯ ಹೊಳಲ್ಕೆರೆಯ ಸಂವಿಧಾನ ಸೌಧದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಜನತಾ ದರ್ಶನದಲ್ಲಿ ಸ್ವೀಕರಿಸುವ ಸಾರ್ವಜನಿಕರ ಕುಂದು ಕೊರತೆ, ಸಮಸ್ಯೆಗಳ ಅರ್ಜಿಗಳನ್ನು 1 ತಿಂಗಳೊಳಗೆ ವಿಲೇವಾರಿ ಮಾಡಬೇಕು. ಸೂಕ್ತ ಸ್ಪಂದನೆ ದೊರಕಬೇಕು. ನಿತ್ಯವೂ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ ಎಂದು ತಾಕೀತು ಮಾಡಿದರು.

    ಜನರ ಬಳಿ ಅಧಿಕಾರಿಗಳು, ಜನಪ್ರತಿನಿಧಿಗಳು ತೆರಳಿ ದೂರು ಸಮಸ್ಯೆ ಆಲಿಸಿ ಪರಿಹರಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯವಾಗಿದೆ ಎಂದು ಹೇಳಿದರು.

    ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಜನರ ಸಮಸ್ಯೆಗಳನ್ನು ಬಗೆಹರಿಸಲು ಜನತಾ ದರ್ಶನ ಉತ್ತಮ ಕಾರ್ಯಕ್ರಮ. ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಅನುವು ಮಾಡಿಕೊಟ್ಟಿದೆ ಎಂದರು.

    ಹಿಂದಿನ ಸರ್ಕಾರದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆದವು. ಈಗಿನ ಸರ್ಕಾರ ಒಂದೆಜ್ಜೆ ಮುಂದೆ ಹೋಗಿ, ಜನತಾ ದರ್ಶನ ಮೂಲಕ ಜನರನ್ನು ತಲುಪುವ ಕಾರ್ಯ ಮಾಡುತ್ತಿದೆ. ಯಾವುದೇ ಸರ್ಕಾರವಿದ್ದರೂ ಸಾರ್ವಜನಿಕರ ಕಷ್ಟಗಳನ್ನು ಪರಿಹರಿಸಲು ಪ್ರಯತ್ನಿಸುತ್ತವೆ ಎಂದು ಹೇಳಿದರು.

    ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಮಾತನಾಡಿ, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 8 ಜನತಾ ದರ್ಶನ ಕಾರ್ಯಕ್ರಮ ನಡೆದಿವೆ. ಈವರೆಗೂ ಒಟ್ಟು 1,585 ಅರ್ಜಿ ಸ್ವೀಕರಿಸಿದ್ದು, 1,286 ವಿಲೇ ಮಾಡಿ ಜನರ ಸಮಸ್ಯೆ ಪರಿಹರಿಸಲಾಗಿದೆ. ಕಂದಾಯ ಇಲಾಖೆ ಸಂಬಂಧ 144, ವಿವಿಧ ಇಲಾಖೆಯ 155 ಸೇರಿ 299 ಬಾಕಿ ಇವೆ ಎಂದರು.

    ಇಲ್ಲಿ ಸಲ್ಲಿಸಿದ ಅರ್ಜಿಗಳನ್ನು ಐಪಿಜಿಆರ್‌ಎಸ್ ಪೋರ್ಟಲ್ ಮೂಲಕ ಗಣಕೀಕೃತ ಮಾಡಲಾಗುವುದು. ಆಡಳಿತದಲ್ಲಿ ಪಾರದರ್ಶಕತೆ ತರುವ ಸಲುವಾಗಿ ಸಕಾಲ ಹಾಗೂ ಇ-ಆಫೀಸ್ ಸೇವೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

    ಫ್ರೂಟ್ಸ್ ತಂತ್ರಾಂಶದ ಮಾಹಿತಿ ಆಧರಿಸಿ ಸರ್ಕಾರ ನೇರವಾಗಿ ರೈತರ ಖಾತೆಗೆ ಪರಿಹಾರದ ಮೊತ್ತ ಜಮೆ ಮಾಡಲಿದೆ. ಜಿಲ್ಲೆಯಲ್ಲಿ ಶೇ 80ರಷ್ಟು ರೈತರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಇನ್ನುಳಿದವರಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

    ಅರ್ಹರಿಗೆ ಸೌಲಭ್ಯ ವಿತರಣೆ: 15 ಯಂತ್ರ ಚಾಲಿತ ದ್ವಿಚಕ್ರ ವಾಹನ, ಮೂವರಿಗೆ 50 ಸಾವಿರ ರೂ. ವಿವಾಹ ಪ್ರೋತ್ಸಾಹ ಧನ, ಮಹಿಳಾ ಸ್ವ-ಸಹಾಯ ಸಂಘಗಳಿಗೆ ಕಿರು ಸಾಲ ಯೋಜನೆಯಡಿ ಪ್ರತಿ ಸದಸ್ಯರಿಗೆ 15 ಸಾವಿರ ರೂ.ನಂತೆ 2 ಸಂಘಗಳಿಗೆ ತಲಾ 2.5 ಲಕ್ಷ ರೂ. ಸಹಾಯಧನ ಮಂಜೂರಾತಿ ಪತ್ರ, ರೈತ ಆತ್ಮಹತ್ಯೆ ಪರಿಹಾರ, ಸುಕನ್ಯಾ ಸಮೃದ್ಧಿ ಯೋಜನೆ, ಪಿಎಂ ಆವಾಸ್, ಪೋಷಣ್ ಅಭಿಯಾನ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಸೌಲಭ್ಯಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.

    ಶಂಕುಸ್ಥಾಪನೆ: ರಾಮಗಿರಿ, ಚಿಕ್ಕಜಾಜೂರು-ಗಂಜಿಗನೂರು ಪಿಎಚ್‌ಸಿ ನೂತನ ವಸತಿ ಗೃಹಗಳ ನಿರ್ಮಾಣ, ಹೊಳಲ್ಕೆರೆಯಲ್ಲಿ ಎಸ್ಸಿ, ಎಸ್ಟಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯಕ್ಕೆ ಡಿ.ಸುಧಾಕರ್ ಶಂಕುಸ್ಥಾಪನೆ ನೆರವೇರಿಸಿದರು.

    ಪುರಸಭೆಯಿಂದ ಎಸ್ಸಿ ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯಕ್ಕೆ 80 ಸಾವಿರ ರೂ. ವೆಚ್ಚದಲ್ಲಿ ನೀಡಲಾದ 8 ಅಲ್ಮಾರಿ, 2 ಲಕ್ಷ ರೂ.ನಲ್ಲಿ ಸಾಮಾನ್ಯ ವರ್ಗ, ಎಸ್ಟಿ ವಿದ್ಯಾರ್ಥಿ ನಿಲಯಕ್ಕೆ ತಲಾ 2 ಆರ್‌ಒ ಘಟಕಗಳು, 40 ಸಾವಿರ ರೂ.ನ 2 ಕಾಟು ಹಸ್ತಾಂತರಿಸಿದರು.

    ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಎಸ್‌ಪಿ ಕುಮಾರಸ್ವಾಮಿ, ಎಸಿ ಎಂ.ಕಾರ್ತಿಕ್, ತಹಸೀಲ್ದಾರ್ ಬೀಬಿ ಫಾತಿಮಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts