More

    ಮದ್ಯ ಮಾರಾಟ ನಿಷೇಧಕ್ಕೆ ದಿಂಗಾಲೇಶ್ವರ ಶ್ರೀ ಆಗ್ರಹ

    ಲಕ್ಷ್ಮೇಶ್ವರ: ಲಾಕ್​ಡೌನ್ ಹಿಂಪಡೆದ ಬಳಿಕವೂ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಿ ಸಾರಾಯಿಮುಕ್ತ ರಾಜ್ಯದ ಕಲ್ಪನೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಅಂಕಿತ ಹಾಕಬೇಕು ಎಂದು ಬಾಲೇಹೊಸೂರಿನ ಶ್ರೀದಿಂಗಾಲೇಶ್ವರ ಮಹಾಸ್ವಾಮಿಗಳು ಆಗ್ರಹಿಸಿದ್ದಾರೆ.

    ಸಾರಾಯಿ ನಿಷೇಧದಿಂದ ವ್ಯಸನಿಗಳ ಕುಟುಂಬಗಳು ನೆಮ್ಮದಿ, ಸಂತೋಷದಿಂದ ಬದುಕುವಂತಾಗುತ್ತದೆ. ಬಡತನ ನಿಮೂಲನೆ, ಸ್ವಾಸ್ಥ ಸಮಾಜದ ನಿರ್ವಣಕ್ಕೆ ನಾಂದಿಯಾಗುತ್ತದೆ. ಸಾರಾಯಿ ನಿಷೇಧದ ಬಗ್ಗೆ ಶ್ರೀಮಠವು ಕಳೆದ 25 ವರ್ಷಗಳಿಂದ ‘ದುಶ್ಚಟಗಳ ಭೀಕ್ಷೆ-ಸದ್ಗುಣಗಳ ದೀಕ್ಷೆ’ ಎಂಬ ಘೊಷಣೆಯಡಿ ಜನಜಾಗೃತಿ ಮೂಡಿಸುತ್ತಿದೆ. ಮಠದಲ್ಲಿ ಕಾಣಿಕೆ ಹುಂಡಿ ಬದಲಾಗಿ ಸಾರಾಯಿ, ಗುಟ್ಖಾ, ತಂಬಾಕಿನ ಪಾಕೀಟುಗಳನ್ನು ಹಾಕಿ ಸಂಕಲ್ಪ ಮಾಡಿಸುವ ವ್ಯವಸ್ಥೆ ಇದೆ. ಸಾರಾಯಿ ನಿಷೇಧದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಲ್ಲ. ಸರ್ಕಾರ ಒಂದಿಷ್ಟು ಸೌಲತ್ತುಗಳನ್ನು, ಅಭಿವೃದ್ಧಿ ಕಾರ್ಯಗಳನ್ನು ಕಡಿಮೆ ಮಾಡಿಯಾದರೂ ಮದ್ಯ, ಗುಟ್ಖಾ ಮಾರಾಟ ಸಂಪೂರ್ಣ ನಿಷೇಧಿಸಬೇಕು.

    ದೇಶಕ್ಕೆ ಉಂಟಾಗುವ ಆರ್ಥಿಕ ಹೊರೆಗಿಂತ ಜನರ ಜೀವ ಮುಖ್ಯ ಎಂಬ ನಿಲುವಿನಿಂದ ಲಾಕ್​ಡೌನ್ ಘೊಷಿಸಿದಂತೆ ದೇಶದ ಪ್ರಧಾನಮಂತ್ರಿಗಳು, ರಾಜ್ಯದ ಮುಖ್ಯಮಂತ್ರಿಗಳು ದೇಶವನ್ನು ಸಂಪೂರ್ಣ ಸಾರಾಯಿ ಮುಕ್ತ ಮಾಡಬೇಕು. ಮಹಿಳೆಯರು, ಮಕ್ಕಳು ನಿತ್ಯ ಅನುಭವಿಸುವ ಸಂಕಷ್ಟಕ್ಕೆ ಕಾರಣವಾದ ಸಾರಾಯಿ ನಿಷೇಧ ಮಾಡಿದರೆ ಅದರ ಪುಣ್ಯದ ಫಲ, ಹಾರೈಕೆ ಸರ್ಕಾರಕ್ಕೆ ಲಭಿಸುತ್ತದೆ. ಕರೊನಾ ವೇಳೆ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿದ ಪರಿಣಾಮ ರಾಜ್ಯದಲ್ಲಿ ಅಪಘಾತ, ಹಲ್ಲೆ, ಅಪರಾಧ ಚುಟುವಟಿಕೆಗಳು, ಕಾನೂನು ಉಲ್ಲಂಘನೆಯಂತಹ ಪ್ರಕರಣಗಳು ಮಾಯವಾಗಿ ಶಾಂತಿ, ಸುವ್ಯವಸ್ಥೆ, ಸುಖೀ ಕುಟುಂಬದ ವ್ಯವಸ್ಥೆ ಎಲ್ಲರ ಕಣ್ಣಮುಂದಿದೆ.

    ಆದ್ದರಿಂದ ರಾಜ್ಯವನ್ನು ಸಾರಾಯಿಮುಕ್ತ ಮಾಡುವ ಐತಿಹಾಸಿಕ ನಿಲುವು, ನಿರ್ಣಯ ರಾಜ್ಯದಿಂದಲೇ ಆರಂಭವಾಗುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts