More

    ಮದಿನಾ ಕಾಲನಿ ಹಾಟ್​ಸ್ಪಾಟ್

    ಭಟ್ಕಳ: ಪಟ್ಟಣದ ಮದಿನಾ ಕಾಲನಿಯನ್ನು ಹಾಟ್​ಸ್ಪಾಟ್ ಕ್ಲಸ್ಟರ್ ಎಂದು ಪರಿಗಣಿಸಲಾಗಿದೆ. ಉಳಿದ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ವಿಂಗಡಿಸಿ ಅದರ ಪ್ರಕಾರ ಕಾರ್ಯನಿರ್ವಹಿಸಲಾಗುವುದು ಎಂದು ಉತ್ತರಕನ್ನಡ ಜಿಲ್ಲಾ ಎಸ್​ಪಿ ಶಿವಪ್ರಕಾಶ ದೇವರಾಜು ಹೇಳಿದರು.

    ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಇನ್ನು ಮುಂದೆ ಮದಿನಾ ಕಾಲನಿಯಲ್ಲಿ ಪ್ರವೇಶ ಮತ್ತು ಹೊರ ಹೋಗಲು ಒಂದೆ ದಾರಿಯನ್ನು ಇಡಲಾಗುವುದು. ಮದಿನಾ ಕಾಲನಿಯ ಪ್ರದೇಶದಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅಲ್ಲಿ ಪೆಟ್ರೋಲ್ ಬಂಕ್, ಔಷಧ ಅಂಗಡಿ ಸೇರಿ ಯಾವುದೆ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ. ಹಾಗೆಯೆ ತಾಲೂಕಿನ ಇನ್ನೂ 5 ಪ್ರದೇಶಗಳನ್ನು ಗುರುತಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮುಂದಿನ ದಿನಗಳಲ್ಲಿ ಅದನ್ನು ಕೂಡ ಹಾಟ್​ಸ್ಪಾಟ್ ಕ್ಲಸ್ಟರ್ ಮಾಡಲಾಗುವುದು ಎಂದರು.

    ಭಟ್ಕಳದಲ್ಲಿ ಈವರೆಗೆ ನೀಡಿದ ಎಲ್ಲ ಪಾಸ್​ಗಳು ಶನಿವಾರದಿಂದ ರದ್ದಾಗಲಿವೆ. ಹಾಗಾಗಿ ಯಾರೂ ರದ್ದಾದ ಪಾಸ್​ಗಳನ್ನು ಬಳಸಬಾರದು. ಭಟ್ಕಳದಲ್ಲಿ ಅಂದಾಜು 300ಕ್ಕೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಿಸಲಾಗುತ್ತದೆ. ಹೀಗೆಂದ ಮಾತ್ರಕ್ಕೆ ನಾವು ಒಂದು ಸಮುದಾಯ ಅಥವಾ ನಿರ್ದಿಷ್ಟ ಜನರನ್ನು ಟಾರ್ಗೆಟ್ ಮಾಡುತ್ತಿದ್ದೇವೆ ಎಂದಲ್ಲ. ಬದಲಾಗಿ ಲಾಕ್​ಡೌನ್ ಸರಿಯಾಗಿ ಪಾಲನೆ ಮಾಡಲು ವ್ಯವಸ್ಥೆ ರೂಪಿಸುತ್ತಿದ್ದೇವೆ. ಸಾರ್ವಜನಿಕರು ಇದಕ್ಕೆ ಸಹಕರಿಸಿ ಸ್ವಯಂ ಪ್ರೇರಿತರಾಗಿ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಶನಿವಾರದಿಂದ ಬ್ಯಾಂಕ್ ಮತ್ತು ಎಟಿಎಂಗಳನ್ನು ಕೂಡ ಬಂದ್ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದರು. ಈ ವೇಳೆ ಡಿವೈಎಸ್​ಪಿ ಗೌತಮ್ ಕೆ.ಸಿ., ಭಟ್ಕಳ ಉಪವಿಭಾಗಾಧಿಕಾರಿ ಭರತ್ ಎಸ್., ಪ್ರೊಬೇಶನರಿ ಐಪಿಎಸ್ ಅಧಿಕಾರಿ ಸಾಹಿಲ್ ಇತರರು ಇದ್ದರು.

    ಪಟ್ಟಣ ಸುತ್ತಾಡಿದ ಎಸ್​ಪಿ: ಶುಕ್ರವಾರ ಬೆಳಗ್ಗೆ 12 ಕರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ಭಟ್ಕಳಕ್ಕೆ ಎಸ್​ಪಿ ಶಿವಪ್ರಕಾಶ ದೇವರಾಜು ದೌಡಾಯಿಸಿದ್ದರು. ಪಟ್ಟಣದ ಸುಲ್ತಾನ್ ಸ್ಟ್ರೀಟ್, ಮದಿನಾ ಕಾಲನಿ, ಹೆಬಳೆ, ಹೊನ್ನಿಗದ್ದೆ, ಜಾಲಿ ಸೇರಿ ನಿರ್ಬಂಧಿತ ಪ್ರದೇಶವನ್ನೆಲ್ಲ ಸುತ್ತಾಡಿದರು. ಚಿನ್ನದ ಪಳ್ಳಿಯ ಬಳಿಯ ಮನೆಯೊಂದರಲ್ಲಿ ತರಕಾರಿ ಅಂಗಡಿ ತೆರದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಅದನ್ನು ಮುಚ್ಚಿಸುವಂತೆ ಆದೇಶಿಸಿದರು. ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರವೇಶ ಮತ್ತು ನಿರ್ಗಮನವನ್ನು ಒಂದೇ ಮಾಡುವಂತೆ ಸೂಚಿಸಿದ ಅವರು, ಇಂತಹ ಪಟ್ಟಣಗಳಿಗೆ ಯಾರನ್ನೂ ಬಿಡಬಾರದು ಎಂದು ಖಡಕ್ ಆಗಿ ವಾರ್ನಿಂಗ್ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts