More

    ಮತ್ತೊಬ್ಬಳಿಗೆ ಕರೊನಾ ಸೋಂಕು

    ವಾದಿರಾಜ ವ್ಯಾಸಮುದ್ರ ಕಲಬುರಗಿ
    ಕರೊನಾದಿಂದ ದೇಶದಲ್ಲೇ ಮೊದಲ ಸಾವು ಸಂಭವಿಸಿದ ಕಲಬುರಗಿಗೆ ಮಂಗಳವಾರ ಮಿಶ್ರ ದಿನವಾಗಿ ಮಾರ್ಪಟ್ಟಿತು. ಸೋಂಕಿತ ಮಹಿಳೆಯೊಬ್ಬರು ಗುಣಮುಖರಾಗಿ ಮನೆ ಸೇರಿದರೆ, 60 ವರ್ಷದ ವೃದ್ಧೆಗೆ ಮೊದಲ ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದು, ಇವರನ್ನು ಇಎಸ್ಐ ಆಸ್ಪತ್ರೆ ಐಸೋಲೇಷನ್ ವಾರ್ಡ್​ ಪ್ರತ್ಯೇಕವಾಗಿ ಇರಿಸಲಾಗಿದೆ.
    ಹೊಸ ಪ್ರಕರಣ ಜಿಲ್ಲಾಡಳಿತವನ್ನು ಮತ್ತೆ ಕಂಗೆಡುವಂತೆ ಮಾಡಿದೆ. ಸೋಂಕು ನಿರ್ನಾಮಕ್ಕೆ ಹಗಲಿರುಳು ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಅಧಿಕಾರಿಗಳು, ಕೆಲ ಜನಪ್ರತಿನಿಧಿಗಳ ಸೇವೆ ಮರೆಯುವಂತಿಲ್ಲ.
    ಸೌದಿಯಿಂದ ಬಂದಿದ್ದ ಮಹ್ಮದ್ ಹುಸೇನ್ ಸಿದ್ಧಿಕಿ (76) ಕರೊನಾದಿಂದ ಮೃತಪಟ್ಟಿದ್ದರು. ಇವರ ಪುತ್ರಿ ಮತ್ತು ಚಿಕಿತ್ಸೆ ನೀಡಿದ ವೈದ್ಯರಲ್ಲಿ ಸೋಂಕು ದೃಢಪಟ್ಟಾಗ ಜಿಲ್ಲಾಡಳಿತಕ್ಕೆ ನಡುಕ ಶುರುವಾಯಿತು. ಮೃತನ ಪುತ್ರಿ ಈಗ ಗುಣಮುಖರಾಗಿದ್ದು, ಅವರನ್ನು ಮತ್ತು ಅವರ ಜತೆ ಮುಂಜಾಗ್ರತಾ ಕ್ರಮವಾಗಿ ಇದ್ದ ಪತಿಯನ್ನು ಮನೆಗೆ ಕಳಿಸಲಾಗಿದೆ.
    ಮೃತ ಸೇರಿ ಮೂವರಿಗೆ ಕರೊನಾ ಸೋಂಕು ಇರುವುದು ಗೊತ್ತಾಗುತ್ತಲೇ ಜಿಲ್ಲಾಧಿಕಾರಿ ಶರತ್ ಸುಮ್ಮನೆ ಕೂಡಲಿಲ್ಲ. ಜಿಲ್ಲಾ ಪಂಚಾಯಿತಿ ಸಿಇಒ ಡಾ.ರಾಜಾ ಪಿ., ನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಡಿಸಿಪಿ ಕಿಶೋರಬಾಬು, ಎಸ್ಪಿ ಯಡಾ ಮಾರ್ಟಿ ನ್ ಮಾರ್ಬನ್ಯಾಂಗ್, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಡಿಎಚ್ಒ ಡಾ.ಎಂ.ಎ. ಜಬ್ಬಾರ್, ಸರ್ಜನ್ ರುದ್ರವಾಡಿ, ಇಎಸ್ಐ ಆಸ್ಪತ್ರೆ ಮುಖ್ಯಸ್ಥ ನಾಗರಾಜ ಮತ್ತು ವೈದ್ಯರ ತಂಡ ಕಟ್ಟಿಕೊಂಡು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಐಸೋಲೇಟೆಡ್ ಬೆಡ್ಗಳನ್ನು ಹಾಕಿಸಿದರು. ಸರ್ಕಾ ರದ ಎಲ್ಲ ಯಂತ್ರಗಳನ್ನು ಚುರುಕುಗೊಳಿಸಿದರು.
    ಕಲಬುರಗಿ ಇಎಸ್ಐಸಿ ಆಸ್ಪತ್ರೆಯಲ್ಲೂ ಐಸೋಲೇಷನ್ ವಾರ್ಡ್​ ವ್ಯವಸ್ಥೆ ಮಾಡಿ, ಸೋಂಕಿತ ಮೃತನ ಪುತ್ರಿ ಮತ್ತು ಆರೋಗ್ಯ ಪರೀಕ್ಷಿಸಿದ ವೈದ್ಯರನ್ನು ಚಿಕಿತ್ಸೆಗೆ ಸೇರಿಸಿದರು. ಕರೋನಾ ಬಂದರೆ ಸಾವು ಖಚಿತ. ಇದಕ್ಕೆ ಸೂಕ್ತ ಔಷಧ ಇಲ್ಲ ಎಂಬ ಭಯದಲ್ಲೂ ಈ ಮಹಿಳೆ ಸೋಂಕನ್ನು ಹಿಮ್ಮೆಟ್ಟಿದಳು. ಈಕೆಗೆ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಜಿಲ್ಲಾಧಿಕಾರಿ ಶರತ್ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
    ದೇಶದಲ್ಲಿ ಈಗ ಕೈಕೊಂಡಿರುವ ಎಲ್ಲ ಕ್ರಮಗಳನ್ನು ಜಿಲ್ಲಾಧಿಕಾರಿ ಶರತ್ ಅವರು ಕಲಬುರಗಿ ಜಿಲ್ಲೆಯಲ್ಲಿ ಕೈಕೊಂಡರು. ಜಿಲ್ಲೆಯನ್ನು ಮೊದಲು ಲಾಕ್ಡೌನ್ ಮಾಡಿದರು. ತಕ್ಷಣವೇ ನಿಷೇಧಾಜ್ಞೆ ಜಾರಿಗೊಳಿಸಿದರು. ಈಗ ನಿಷೇಧಾಜ್ಞೆಯನ್ನು ಏಪ್ರಿಲ್ 14ರವರೆಗೆ ವಿಸ್ತರಿಸಿದ್ದಾರೆ. ಬಸ್, ರೈಲು ಸೇರಿ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದೆ. ಹೊರ ದೇಶ ಮತ್ತು ರಾಜ್ಯಗಳಿಂದ ಬಂದವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಇಂಥವರೇನಾದರೂ ಹೊರಬಂದಲ್ಲಿ ಪೊಲೀಸ್ ಕೇಸ್ ದಾಖಲಿಸಲಾಗಿದೆ. ಸಾಧ್ಯವಾದಷ್ಟು ಜನ ಹೊರಬರದಂತೆ ಎಚ್ಚರಿಕೆ ಜತೆಗೆ ಸೋಂಕಿನಿಂದ ಹೇಗೆ ಬಚಾವ್ ಆಗಬಹುದು ಎಂಬ ಬಗ್ಗೆ ತಿಳಿವಳಿಕೆ ಕೊಡಲಾಗುತ್ತಿದೆ.
    ಸರ್ಕಾರಿ ಕಚೇರಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿ ಕರೊನಾವನ್ನು ಕಟ್ಟಿ ಹಾಕಲಾಯಿತು. ಸೋಂಕಿನಿಂದ ಮೊದಲ ಸಾವು ಆಗಿದ್ದು ಮಾರ್ಚ 10. ಅಲ್ಲಿಂದ ಇಲ್ಲಿಯವರೆಗೆ ಸೋಂಕಿನಿಂದ ಬಳಲುತ್ತಿದ್ದವರು ಕೇವಲ ಇಬ್ಬರಿದ್ದರು. ಈಗ ಮಹಿಳೆ ಪಾರಾದರೆ, ಇನ್ನೊಬ್ಬಳು ಸೋಂಕಿತರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
    ಹೋಂ ಕ್ವಾರಂಟೈನ್ನಲ್ಲಿದ್ದ 450ಕ್ಕೂ ಹೆಚ್ಚು ಜನರಿಗೆ ಕ್ಲೀನ್ಚಿಟ್ ನೀಡಲಾಗಿದೆ. ಹಾಗಂತ ಜಿಲ್ಲಾಧಿಕಾರಿ ಸುಮ್ಮನೆ ಕುಳಿತಿಲ್ಲ. ಒಟ್ಟಾರೆ ಈ ಸೋಂಕನ್ನು ಜಿಲ್ಲೆಯಿಂದ ಹೊಡೆದೋಡಿಸಲು ಪಣ ತೊಟ್ಟು ತಮ್ಮ ಕಾರ್ಯ ಮುಂದುವರಿಸಿದ್ದಾರೆ.

    ಸಿಗ್ತಿಲ್ಲ ಜನಬೆಂಬಲ: ನಿರೀಕ್ಷೆಗೆ ತಕ್ಕಂತೆ ಜನತೆ ಬೆಂಬಲಿಸುತ್ತಿಲ್ಲ ಎಂಬ ನೋವು ಎಲ್ಲ ಅಧಿಕಾರಿಗಳನ್ನು ಕಾಡುತ್ತಿದೆ. ಮನೆ ಬಿಟ್ಟು ಹೊರಬರಬೇಡಿ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಕೈಮುಗಿದು ಹೇಳಿದರೂ, ಪೊಲೀಸರು ಬೆತ್ತದ ರುಚಿ ತೋರಿಸಿದರೂ, ವಾಹನಗಳನ್ನು ಜಪ್ತಿ ಮಾಡುತ್ತಿದ್ದರೂ ಜನ ಹೊರಬಂದು ಅಪಾಯ ತಂದುಕೊಳ್ಳುತ್ತಿದ್ದಾರೆ. ಜನ ಸಹಕಾರ ನೀಡಿ ಮನೆಗಳಿಂದ ಹೊರ ಬರದಿದ್ದರೆ ಇಡೀ ಜಿಲ್ಲೆಯನ್ನು ಕರೊನಾ ಮುಕ್ತಗೊಳಿಸಬಹುದಾಗಿದೆ. ಇಲ್ಲವಾದರೆ ಅಧಿಕಾರಿಗಳು ಎಷ್ಟು ಬಡಿದಾಡಿದರೂ ಫಲ ಸಿಗದು ಎಂಬುದನ್ನು ಪ್ರಜ್ಞಾವಂತರು ಅರಿತುಕೊಳ್ಳಬೇಕಿದೆ.

    ಹೊಗಳಿಕೆ ಬಯಸದ ಡಿಸಿ: ಜಿಲ್ಲೆಯ ಎಲ್ಲ ಅಧಿಕಾರಿಗಳನ್ನು ಒಳಗೊಂಡು ತಂಡ ಕಟ್ಟಿಕೊಂಡು ಹಗಲಿರುಳು ಕರೊನಾ ವಿರುದ್ಧ ಸಮರ ಸಾರಿರುವ ಜಿಲ್ಲಾಧಿಕಾರಿ ಬಿ.ಶರತ್ ಕೆಲಸ ಪ್ರಶಂಸಾರ್ಹವೇ ಸರಿ. ಆದರೆ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ ಅವರಿಂದ ಬರುವ ಉತ್ತರ ಏನು ಗೊತ್ತೆ? ಹೊಗಳಿ ಹೊಗಳಿ ಹೊನ್ನ ಶೂಲಕ್ಕೆ ಏರಿಸದಿರಿ ಎಂಬ ಶರಣರ ವಚನದ ಸಾಲುಗಳು. ಜತೆಗೆ ಜಿಲ್ಲೆಯಲ್ಲಿ ಕರೊನಾ ವಿರುದ್ಧ ಮಾಡಬೇಕಾದ ಕೆಲಸ ಬಹಳಷ್ಟಿದೆ. ಇದಕ್ಕೆ ಮಾಧ್ಯಮದವರು ಸೇರಿ ಎಲ್ಲರ ಸಹಕಾರ ಬೇಕು ಎನ್ನುತ್ತಾರೆ ಶರತ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts