More

    ಮತ್ತೆ ಕಾಣಿಸಿಕೊಂಡ ಮಂಗನ ಕಾಯಿಲೆ

    ಸಾಗರ: ತಾಲೂಕಿನಲ್ಲಿ ಮತ್ತೆ ಮಂಗನ ಕಾಯಿಲೆ ಮರುಕಳಿಸುವ ಲಕ್ಷಣಗಳು ಕಾಣಿಸುತ್ತಿವೆ. ಭಾನ್ಕುಳಿ ಗ್ರಾಪಂ ವ್ಯಾಪ್ತಿಯ ಗುಜರವಳ್ಳಿಯ ಐಟಿಐ ವಿದ್ಯಾರ್ಥಿ ಭರತ್ ಕೆಎಫ್​ಡಿ ವೈರಾಣು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಮಧ್ಯೆ ಗುರುವಾರ ತುಮರಿ ಗ್ರಾಪಂ ಕಳೂರಿನ ಸೀಗೆಮಕ್ಕಿ ಗ್ರಾಮದ ಹೂವಮ್ಮ (58) ಅವರನ್ನು ಉಪವಿಭಾಗೀಯ ಆಸ್ಪತ್ರೆಗೆ ಶಂಕಿತ ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ದಾಖಲು ಮಾಡಲಾಗಿದೆ.

    ಈ ಎರಡು ಪ್ರಕರಣ ಗಮನಿಸಿದರೆ ಮಂಗನಕಾಯಿಲೆ ಮತ್ತೊಮ್ಮೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆ ಇನ್ನೂ ಹೆಚ್ಚಿನ ನಿಗಾ ವಹಿಸಬೇಕು. ಕಳೆದ ವರ್ಷ ಸಾವುನೋವುಗಳು ಸಂಭವಿಸಿದ್ದು ಮೈಯೆಲ್ಲ ಕಣ್ಣಾಗಿ ಶುಶ್ರೂಷೆಯಲ್ಲಿ ತೊಡಗಿಕೊಳ್ಳಬೇಕು. ಆರೋಗ್ಯ ಇಲಾಖೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ನಮಗೆ ತೃಪ್ತಿ ಇದೆ. ಆದರೆ ಇನ್ನೂ ಹೆಚ್ಚಿನ ನಿಗಾವಹಿಸಲಿ ಎಂದು ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು.

    ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಕೆಎಫ್​ಡಿಗೆ ಚಿಕಿತ್ಸೆ ಪಡೆಯುತ್ತಿರುವ ಭರತ್ ಭೇಟಿಯಾಗಿ ವೈದ್ಯಾಧಿಕಾರಿಗಳ ಜತೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

    ಕರೂರು, ಭಾರಂಗಿ ಹೋಬಳಿಯಲ್ಲಿ ವೈರಾಣು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು ತಕ್ಷಣ ಗಮನ ಹರಿಸಬೇಕು. ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆ ಕೆಎಫ್​ಡಿಗೆ ಚಿಕಿತ್ಸೆ ನೀಡಲು ವೈದ್ಯ ಸಿಬ್ಬಂದಿ ನೇಮಕ ಮಾಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು. ಕೆಎಫ್​ಡಿ ಸೋಂಕು ಕಾಣಿಸಿಕೊಂಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಲು ಮಣಿಪಾಲ್ ಆಸ್ಪತ್ರೆಯಲ್ಲಿ ನೋಡಲ್ ಅಧಿಕಾರಿ ನೇಮಕ ಮಾಡಿ, ಸರ್ಕಾರದಿಂದಲೇ ರೋಗಿಗಳ ಖರ್ಚು ವೆಚ್ಚ ಭರಿಸಲು ಪೂರ್ವಭಾವಿಯಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ರೋಗ ನಿರೋಧಕ ಚುಚ್ಚುಮದ್ದು ತೆಗೆದುಕೊಂಡವರಿಗೂ ಮತ್ತೆ ರೋಗಾಣುಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಆತಂಕ ಕಾಡುತ್ತಿದೆ. ಆಧುನಿಕ ತಂತ್ರಜ್ಞಾನ ಮುಂದುವರಿದಿರುವ ಹಿನ್ನೆಲೆಯಲ್ಲಿ ಚುಚ್ಚುಮದ್ದು ತೆಗೆದುಕೊಂಡವರಿಗೂ ರೋಗ ಕಾಣಿಸಿಕೊಳ್ಳುತ್ತದೆ ಎಂದರೆ ಏನರ್ಥ? ಈ ಬಗ್ಗೆ ಸಂಶೋಧನೆಗಳಾಗಬೇಕು. ಸರ್ಕಾರ ಅಗತ್ಯಕ್ರಮ ಕೈಗೊಳ್ಳಬೇಕು. ವಯೋವೃದ್ಧರು ಚುಚ್ಚುಮದ್ದು ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎನ್ನುವ ಸುದ್ದಿ ಹರಡಲಾಗುತ್ತಿದೆ. ಆರೋಗ್ಯ ಇಲಾಖೆ ಈ ಕುರಿತು ಕಟ್ಟೆಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.

    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ.ರಾಜು, ಕೆಎಫ್​ಡಿ ನಿಗಾ ಘಟಕದ ಡಾ. ಹರೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts