More

    ಮತದಾನ ಪ್ರಜಾತಂತ್ರ ವ್ಯವಸ್ಥೆಯ ಉಸಿರಾಟ

    ಧಾರವಾಡ: ಸಂವಿಧಾನದತ್ತವಾದ ಮತದಾನದ ಹಕ್ಕು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೂಲ ಆಧಾರ. ನಿಸ್ವಾರ್ಥ ಹಾಗೂ ಉತ್ತಮ ಮನೋಭಾವ ಹೊಂದಿದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾನವು ವ್ಯಕ್ತಿಯ ಉಸಿರಾಟದಷ್ಟೇ ಮುಖ್ಯ. ಹಕ್ಕು ಎಂದು ಭಾವಿಸದೇ ಕರ್ತವ್ಯವಾಗಿ ನಿರ್ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ ಅಡಿಗ ಹೇಳಿದರು.

    ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ವರ್ಚುವಲ್ ವೇದಿಕೆ ಮೂಲಕ ಮಂಗಳವಾರ ಏರ್ಪಡಿಸಿದ್ದ ಮತದಾರರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಸಂವಿಧಾನಿಕವಾಗಿರುವ ಮತದಾನದ ಹಕ್ಕಿನ ಕುರಿತು ಹೆಚ್ಚು ಜಾಗೃತಿ ಮೂಡಿಸಬೇಕು. ಭಾರತ ಚುನಾವಣಾ ಆಯೋಗ ಸ್ಥಾಪನೆಯಾದ ದಿನವನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. ಮತದಾನ ಕುರಿತು ಅಸಡ್ಡೆ, ನಿರ್ಲಕ್ಷ್ಯ ತೋರಬಾರದು. ರಾಷ್ಟ್ರೀಯ ಮತದಾರರ ದಿನದಂದು ಸ್ವೀಕರಿಸುವ ಪ್ರತಿಜ್ಞೆ ಅರ್ಥಪೂರ್ಣವಾಗಿದೆ. ಅದನ್ನು ಮನಃಪೂರ್ವಕವಾಗಿ ಅರಿತು ಆಚರಣೆಗೆ ತರಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಮತದಾನ ಹಕ್ಕು ಮಾತ್ರವಲ್ಲ. ಜವಾಬ್ದಾರಿಯಾಗಿದೆ. ಧರ್ಮ, ಜಾತಿ, ಭಾಷೆ ಇನ್ನಿತರ ಪ್ರೇರಣೆ, ದಾಕ್ಷಿಣ್ಯಗಳಿಗೆ ಒಳಗಾಗದೆ ಮತ ಚಲಾಯಿಸಬೇಕು. 18 ವರ್ಷ ಪೂರ್ಣಗೊಳಿಸಿದ ಮತದಾರರನ್ನು ಪಟ್ಟಿಗೆ ಸೇರಿಸುವ ಕಾರ್ಯ ನಿರಂತರವಾಗಿದೆ. 2021ರ ಜನವರಿಯಲ್ಲಿ ಜಿಲ್ಲೆಯಲ್ಲಿ 15,40,041 ಮತದಾರರು ಇದ್ದರು. ಈಗ 15,48,641ಕ್ಕೆ ಏರಿಕೆಯಾಗಿದೆ. ಮತದಾರರ ಸಹಾಯವಾಣಿ, ಮೊಬೈಲ್ ಆಪ್​ಗಳ ಮೂಲಕ ಮತದಾರರ ನೋಂದಣಿ ಕಾರ್ಯ ಸರಳೀಕರಿಸಿದೆ. ಜನತೆ ಇವುಗಳ ಪ್ರಯೋಜನ ಪಡೆಯಬೇಕು ಎಂದರು.

    ಹು-ಧಾ ಪೊಲೀಸ್ ಆಯುಕ್ತ ಲಾಭೂರಾಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಜಿಪಂ ಸಿಇಒ ಡಾ. ಬಿ.ಸುಶೀಲಾ, ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಸಿಜೆಎಂ ಸಂಜಯ ಗುಡಗುಡಿ, ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತ ಸಿ.ಎಂ., ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಕವಿವಿ ಕುಲಸಚಿವ ಡಾ.ಕೆ.ಟಿ. ಹನುಮಂತಪ್ಪ, ಚುನಾವಣೆ ತಹಸೀಲ್ದಾರ ಎಚ್.ಎನ್. ಬಡಿಗೇರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಇತರರು ಇದ್ದರು.

    ಉಪವಿಭಾಗಾಧಿಕಾರಿ ಅಶೋಕ ತೇಲಿ ಪ್ರತಿಜ್ಞಾ ವಿಧಿ ಬೋಧಿಸಿದರು. ರಾಜ್ಯದ ಅತ್ಯುತ್ತಮ ಮತದಾರರ ಸಾಕ್ಷರತಾ ಸಂಘಗಳ ಪ್ರಶಸ್ತಿಗೆ ಭಾಜನವಾಗಿರುವ ನವಲಗುಂದ ತಾಲೂಕಿನ ಚಿಲಕವಾಡದ ಕೋನರೆಡ್ಡಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಡಾ. ಪ್ರಭಾಕರ ಲಗಮಣ್ಣವರ ಹಾಗೂ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts