More

    ಮಟ್ಕಾ ಹಾವಳಿ ವಿಪರೀತ

    ಸೋಮು ಲದ್ದಿಮಠ ರೋಣ

    ತಾಲೂಕಿನಾದ್ಯಂತ ಮಟ್ಕಾ ಹಾವಳಿ ವಿಪರೀತವಾಗಿದ್ದು, ಕಡಿವಾಣ ಹಾಕಲು ಪೊಲೀಸ್ ಇಲಾಖೆ ಹರಸಾಹಸ ಪಡುತ್ತಿದೆ. ಪೊಲೀಸರು ಚಾಪೆಯ ಕೆಳಗೆ ನುಸುಳಿದರೆ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಮಟ್ಕಾ ಬುಕ್ಕಿಗಳು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ.

    ರೋಣ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಟ್ಕಾ ವ್ಯವಹಾರ ಅವ್ಯಾಹತವಾಗಿ ನಡೆಯುತ್ತಿದೆ. ಯುವಕರು, ದಿನ ನಿತ್ಯ ದುಡಿದು ತಿನ್ನುವ ಕೃಷಿ ಕೂಲಿ ಕಾರ್ವಿುಕರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಮಟ್ಕಾ ವ್ಯವಹಾರದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಮಟ್ಕಾದಿಂದಾಗಿ ಬಹುತೇಕರು ಹೊಲ-ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅಲ್ಲದೆ, ಮಟ್ಕಾ ಆಡಿಸುವವರು ಮತ್ತು ಆಡುವವರಿಗೆ ತಾಲೂಕಿನಾದ್ಯಂತ ಯಾರದೇ ಭಯವಿಲ್ಲ ಎನ್ನುವಂತಾಗಿದೆ. ತಾಲೂಕಿನ ಕುಗ್ರಾಮ ಹಾಗೂ ಗಡಿ ಗ್ರಾಮಗಳಲ್ಲಿಯೂ ಮಟ್ಕಾ ಜೂಜಾಟದಲ್ಲಿ ಹಾವಳಿ ಹೆಚ್ಚಾಗಿದೆ.

    ಮಟ್ಕಾ ಬುಕ್ಕಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ಆದರೆ, ಬುಕ್ಕಿಗಳಿಗೆ ಕಠಿಣ ಶಿಕ್ಷೆ ಇಲ್ಲದ ಕಾರಣ ಅವರು ಜಾಮೀನು ಪಡೆದು ಹೊರಬರುತ್ತಾರೆ. ಹೀಗೆ ಬಂದವರು ದುಶ್ಚಟ ಬಿಡದೆ ಮತ್ತೆ ಅದೇ ದಂಧೆಯಲ್ಲಿ ತೊಡಗಿಕೊಳ್ಳುತ್ತಾರೆ.

    ಮಿಸ್ಡ್ ಕಾಲ್ ನೀಡಿ ಸಂಖ್ಯೆ ನೋಂದಣಿ: ಇತ್ತೀಚೆಗೆ ಪೊಲೀಸರು ಮಟ್ಕಾ ಅಡ್ಡೆಗಳ ಮೇಲೆ ದಾಳಿ ಮಾಡಿ ಪ್ರಕರಣಗಳನ್ನು ದಾಖಲಿಸುತ್ತಿರುವುದರಿಂದ ಎಚ್ಚೆತ್ತುಕೊಂಡು ಮಟ್ಕಾ ಬುಕ್ಕಿಗಳು ಮೊಬೈಲ್ ಮಿಸ್ಡ್ ಕಾಲ್ ಮೂಲಕ ನೋಂದಣಿ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಇದರಿಂದ ಪೊಲೀಸರಿಗೆ ಇದು ಸವಾಲಾಗಿ ಪರಿಣಮಿಸಿದೆ. ಯಾರು ಎಲ್ಲಿ ಹೇಗೆ ಬುಕ್ ಮಾಡಿಕೊಳ್ಳುತ್ತಾರೆ ಎನ್ನುವುದು ತಿಳಿಯದಾಗಿದೆ.

    ತಾಲೂಕಿನಲ್ಲಿ ಕೆಲವರು ಮಟ್ಕಾ ಬರೆಯುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ಇದು ಲಕ್ಷಾಂತರ ರೂಪಾಯಿ ವ್ಯವಹಾರವಾಗಿರುವುದರಿಂದ ಹೆಚ್ಚಿನ ಲಾಭದ ನಿರೀಕ್ಷೆಯಿಂದ ಕೆಲವರು ಪರೋಕ್ಷವಾಗಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ಸಾವಿರ ರೂಪಾಯಿಗೆ ಇಂತಿಷ್ಟು ಎಂದು ಕಮಿಷನ್ ಪಡೆಯುವ ಬುಕ್ಕಿಗಳು, ಸಾರ್ವಜನಿಕರನ್ನು ಜೂಜಾಟಕ್ಕೆ ತಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ರೋಣವನ್ನು ಮಟ್ಕಾ ಮುಕ್ತ ತಾಲೂಕನ್ನಾಗಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

    ಮಾಹಿತಿ ನೀಡಿ : ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗವಹಿಸುವ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರು ಪಟ್ಟಣ ಅಥವಾ ಗ್ರಾಮಗಳಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಮಾಹಿತಿ ನೀಡಬಹುದು. ಮಾಹಿತಿದಾರರ ವಿವರ ಗೌಪ್ಯವಾಗಿ ಇಡಲಾಗುತ್ತದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

    ಮಟ್ಕಾ ಬುಕ್ಕಿಗಳ ಕಡಿವಾಣಕ್ಕೆ ಪೊಲೀಸ್ ಬಾತ್ಮಿದಾರರು, ಸಾರ್ವಜನಿಕರಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, ತಂತ್ರಜ್ಞಾನದ ಮೂಲಕ ನಡೆಯುತ್ತಿರುವ ಜೂಜಾಟ ಬ್ಯಾನ್ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ.
    | ಡಿ. ಶಿವಪ್ರಕಾಶ ಎಸ್ಪಿ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts