More

    ಮಜಾ ಮಾಡಲು ಬಂದಿದ್ದೀರಾ ; ಅಧಿಕಾರಿಗಳ ಕಾರ್ಯವೈಖರಿಗೆ ಸಚಿವ ಜೆ.ಸಿ.ಮಾಧುಸ್ವಾಮಿ ಕೆಂಡಾಮಂಡಲ

    ತುಮಕೂರು : ಸಿಎಂ ಬದಲಾವಣೆಯ ಗೊಂದಲದ ನಡುವೆಯೇ ಶುಕ್ರವಾರ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ಮೊದಲನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳ ಕಾರ್ಯವೈಖರಿಗೆ ಹರಿಹಾಯ್ದರು.

    ವಸತಿ ಶಾಲೆಗಳ ನಿರ್ಮಾಣ ಕಾಮಗಾರಿ ಕುಂಠಿತವಾಗಿರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ ವಿರುದ್ಧ ಕೆಂಡಾಮಂಡಲರಾದ ಮಾಧುಸ್ವಾಮಿ, ನೀವು ಇಲಾಖೆಯಲ್ಲಿ ನನಗಿಂತ ಪ್ರಭಾವಿಯಾಗಿದ್ದೀರಿ, ಶಾಸಕರು ಕಷ್ಟಪಟ್ಟು ತಂದಿರುವ ಅನುದಾನ ಲೋಪವಾಗಿಸಬೇಡಿ ಎಂದು ಮೂದಲಿಸಿದರು.

    ಪ್ರೇಮಾ ಉತ್ತರಕ್ಕೆ ತೃಪ್ತರಾಗದ ಮಾಧುಸ್ವಾಮಿ, ಕಚೇರಿಯಲ್ಲಿ ಕುಳಿತು ಮಜಾ ಮಾಡಲು ಜಿಲ್ಲಾಮಟ್ಟದ ಅಧಿಕಾರಿಗಳಾಗಿ ಬಂದಿದ್ದೀರಾ?, ನಿಮ್ಮ ಕೆಲಸವೇನು, ಅನುದಾನ ಏಕೆ ಬಳಸುತ್ತಿಲ್ಲ, ಮೋಜಿಗೆ ಆಡಳಿತ ಇಲ್ಲ, ಸಮಾಜ ಕಲ್ಯಾಣ ಇಲಾಖೆಯಲ್ಲಿ ನನಗಿಂತ ನೀವೆ ಪ್ರಭಾವಿಯಾಗಿದ್ದು, ಕೆಲಸ ಮಾಡಿಸಿ ಎಂದು ತರಾಟೆಗೆ ತೆಗೆದುಕೊಂಡರು.

    ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಗಳ ಸಮುದಾಯಕ್ಕೆ ಸ್ಮಶಾನಗಳೇ ಇಲ್ಲ. ಜಾಗ ಇದ್ದರೂ ಅದನ್ನು ಗುರುತಿಸಿ ಸ್ಮಶಾನ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿಲ್ಲ, ಸ್ಮಶಾನಗಳ ನಿರ್ವಾಣಕ್ಕೂ ಹೆಚ್ಚು ಕ್ರಮ ವಹಿಸಬೇಕು ಎಂದು ಸೂಚಿಸಿದರು. ಜಾನುವಾರುಗಳ ಆರೋಗ್ಯಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕಾಲುಬಾಯಿ ಜ್ವರ ಸಾಂಕ್ರಾಮಿಕ ರೋಗಗಳು ಬಾಧಿಸದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲ ಜಾನುವಾರುಗಳಿಗೂ ಲಸಿಕೆ ಹಾಕಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಾಡಬಾರದು. ಪಶುಪಾಲನೆ ಇಲಾಖೆ ಅಂಕಿ-ಅಂಶಗಳಿಗೆ ಸೀಮಿತವಾಗದೆ, ಅಭಿವೃದ್ಧಿಗೆ ಪೂರಕವಾಗಿ ಕೆಲಸ ವಾಡಬೇಕು ಎಂದು ಉಪನಿರ್ದೇಶಕ ಡಾ.ದಿವಾಕರ್‌ಗೆ ಸೂಚಿಸಿದರು.

    ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ವಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಬೆಸ್ಕಾಂ ಇಲಾಖೆ ಕಾರ್ಯವೈಖರಿಗೆ ಜನಾಕ್ರೋಶವಿದೆ, ಸಮರ್ಪಕವಾಗಿ ನಿರಂತರ ಜ್ಯೋತಿ ಕಲ್ಪಿಸಬೇಕು. ಯಾವುದೇ ಮನೆಯೂ ವಿದ್ಯುತ್‌ನಿಂದ ವಂಚಿತವಾಗಬಾರದು, ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

    ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆ ಹಾಗೂ ನರೇಗಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಚಿವರು ಸೂಚಿಸಿದರು. ಜಿಲ್ಲೆಯಲ್ಲಿ ಬಹುತೇಕ ಕೆರೆಗಳು ಭರ್ತಿಯಾಗಿದ್ದು, ಮೀನು ಸಾಕಾಣಿಕೆಗೆ ಆದ್ಯತೆ ನೀಡಬೇಕು. ಕಡ್ಡಾಯವಾಗಿ ಹರಾಜು ಪ್ರಕ್ರಿಯೆ ಮೂಲಕವೇ ಮೀನು ಸಾಕಲು ಅವಕಾಶ ವಾಡಿಕೊಡಬೇಕು. ನೇರವಾಗಿ ಸಂ-ಸಂಸ್ಥೆಗಳಿಗೆ ಮೀನು ಸಾಕಾಣಿಕೆ ವಾಡಲು ಅವಕಾಶ ವಾಡಿಕೊಡಬಾರದು ಎಂದರು.

    ಶಾಸಕ ಬಿ.ಸಿ.ನಾಗೇಶ್, ಜಿ.ಬಿ.ಜ್ಯೋತಿಗಣೇಶ್, ಮಸಾಲೆ ಜಯರಾಮ್, ಡಾ.ಎಚ್.ಡಿ.ರಂಗನಾಥ್, ಡಾ.ರಾಜೇಶಗೌಡ, ಎಂ.ವಿ.ವೀರಭದ್ರಯ್ಯ, ಚಿದಾನಂದ ಎಂ.ಗೌಡ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ. ವಿದ್ಯಾಕುವಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುವಾರ ಶಹಾಪುರವಾಡ್ ಇದ್ದರು.

    ಮದಲೂರು ಕೆರೆಗೆ ನೀರು ಬಿಟ್ಟರೆ ಜೈಲಿಗೋಗ್ತಿರಾ! : ಕಳ್ಳಂಬೆಳ್ಳ ಹಾಗೂ ಶಿರಾ ಕೆರೆಗಳಿಗೆ ಮಾತ್ರ ಹೇಮಾವತಿ ನೀರು ಹರಿಸಬೇಕು, ಮದಲೂರು ಕೆರೆಗೆ ನೀರಿಗೆ ಹರಿಸಿದರೆ ಜೈಲಿಗೆ ಕಳುಹಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕೆಡಿಪಿ ಸಭೆಯಲ್ಲಿ ಹೇಮಾವತಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು ಚರ್ಚೆಗೆ ಕಾರಣವಾಗಿದೆ. ಉಪಚುನಾವಣೆ ಸಂದರ್ಭದಲ್ಲಿ ಖುದ್ದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ಭರವಸೆ ನೀಡಿದ್ದರಿಂದ ಕಳೆದ ವರ್ಷ ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಮದಲೂರು ಕೆರೆಗೆ ಹೇಮಾವತಿ ಹರಿದಿತ್ತು. ಈಗ ಸಚಿವರೇ ನೀರು ಹರಿಸದಂತೆ ಎಚ್ಚರಿಕೆ ನೀಡಿದ್ದು ಆಶ್ಚರ್ಯ ಮೂಡಿಸಿತು. ಕುಡಿಯುವ ನೀರಿನ ಉದ್ದೇಶಕ್ಕೆ ಕಳ್ಳಂಬೆಳ್ಳ ಹಾಗೂ ಶಿರಾ ಕೆರೆಗೆ ಮಾತ್ರ ನೀರು ಹರಿಸಬೇಕು ಎಂದು ಸೂಚಿಸಿದರು. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರು ಬಿಡಲು ತೀರ್ಮಾನಿಸಲಾಗಿದ್ದು ಕುಡಿಯುವ ನೀರು ಪೂರೈಸುವ ಕೆರೆಗಳಿಗಷ್ಟೇ ನೀರು ಹರಿಯಬೇಕು, ಮದಲೂರು ಕೆರೆಗೆ ಹರಿಸುವ ವ್ಯರ್ಥ ಪ್ರಯತ್ನ ಮಾಡಬೇಡಿ ಎಂದು ಮಾಧುಸ್ವಾಮಿ ನಿರ್ದೇಶಿಸಿದ್ದಾರೆ.

    ಜಿಲ್ಲೆಯಲ್ಲಿ ನನ್ನ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ, ಕೆಲವು ಅಧಿಕಾರಿಗಳ ಮೋಜು ನಡೆಯುತ್ತಿದೆ. ಶಾಸಕರು ಒದ್ದಾಡಿಕೊಂಡು ಸರ್ಕಾರದಿಂದ ಅನುದಾನ ತಂದರೂ ಜಿಲ್ಲಾಮಟ್ಟದ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಖುರ್ಚಿ ಬಿಟ್ಟು ಮೇಲೇಳುತ್ತಿಲ್ಲ, ತಾಲೂಕುಗಳಿಗೆ ಭೇಟಿಯನ್ನೂ ನೀಡುತ್ತಿಲ್ಲ. ತಿಂಗಳಲ್ಲಿ ಒಮ್ಮೆಯಾದರೂ ತಾಲೂಕು ಭೇಟಿ ಮಾಡಿ.
    ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts