More

    ಮಗುಚಿಬಿದ್ದ ರೈಲುಬೋಗಿ- ಅಣಕು ರಕ್ಷಣಾ ಕಾರ್ಯಾಚರಣೆ

    ದಾವಣಗೆರೆ: ಹರಿಹರ ರೈಲು ನಿಲ್ದಾಣ ಬಳಿ ಶುಕ್ರವಾರ ಬೆಳಗ್ಗೆ ಅರಸೀಕೆರೆಯಿಂದ ಹಾವೇರಿಗೆ ತೆರಳುತ್ತಿದ್ದ ವಿಶೇಷ ರೈಲು ಹಳಿ ತಪ್ಪಿದ ಪರಿಣಾಮ, ಸಾಮಾನ್ಯ ದರ್ಜೆಯ ಎರಡು ಬೋಗಿಗಳು ಮಗುಚಿ ಬಿದ್ದಿದ್ದು, ಸ್ಥಳಕ್ಕೆ ಧಾವಿಸಿದ ಎನ್‌ಡಿಆರ್‌ಎಫ್ ತಂಡದ ಸಿಬ್ಬಂದಿ ಬೋಗಿಗಳಲ್ಲಿ ಸಿಕ್ಕುಬಿದ್ದಿದ್ದ 22 ಪ್ರಯಾಣಿಕರ ರಕ್ಷಣಾ ಕಾರ್ಯ ನಡೆಸಿತು.

    ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿತು. ಸುಮಾರು 1 ತಾಸು 50 ನಿಮಿಷಗಳ ಕಾಲ ರಕ್ಷಣಾ ಕಾರ್ಯ ನಡೆಯಿತು. ರೈಲ್ವೆ ಆಸ್ಪತ್ರೆ ವೈದ್ಯರು ಮತ್ತು ಶುಶ್ರೂಷಕರು ಗಾಯಾಳುಗಳಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ, ಆ್ಯಂಬುಲೆನ್ಸ್‌ಗಳಲ್ಲಿ ಗಾಯಾಳುಗಳನ್ನು ಸಾಗಿಸಲು ನೆರವಾದರು.
    ಯಾರೂ ಗಾಬರಿ ಪಡಬೇಕಿಲ್ಲ. ಇದೊಂದು ಕಲ್ಪಿತ ಕಾರ್ಯಾಚರಣೆ ಮಾತ್ರ! ರೈಲಿನ ಎರಡು ಬೋಗಿಗಳು ಹಳಿ ತಪ್ಪಿ ಮಗುಚಿ ಬಿದ್ದ ರೀತಿಯ ಸನ್ನಿವೇಶವನ್ನು ಮರುಸೃಷ್ಟಿ ಮಾಡಲಾಗಿತ್ತು. ಸಂದೇಶ ಪಡೆದ ರೈಲ್ವೆ ಅಧಿಕಾರಿಗಳು ಮಾರ್ಗಸೂಚಿಯಂತೆ ಪರಿಹಾರ- ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದರು.
    ಘಟನಾ ಸ್ಥಳದಲ್ಲಿ 22 ಪ್ರಯಾಣಿಕರಿದ್ದು, ಇಬ್ಬರು ಮೃತಪಟ್ಟಿದ್ದು, 8-10 ಜನರು ಗಂಭೀರ ಗಾಯಗೊಂಡಿರುವ ಮಾಹಿತಿ ತಲುಪುತ್ತಿದ್ದಂತೆ ಸಹಾಯಕ ಕಮಾಂಡೆಂಟ್ ಸೆಂಥಿಲ್‌ಕುಮಾರ್ ನೇತೃತ್ವದ 23 ಸಿಬ್ಬಂದಿ ಒಳಗೊಂಡ ಎನ್‌ಡಿಆರ್‌ಎಫ್ ತಂಡ ಬಂದಿಳಿಯಿತು. ಎಸ್.ಎನ್. ಕಿರಣಕುಮಾರ್ ನೇತೃತ್ವದ ಎಸ್‌ಡಿಆರ್‌ಎಫ್ ತಂಡ, ಜಿಲ್ಲಾ ಅಗ್ನಿಶಾಮಕಾಧಿಕಾರಿ ಸೋಮಶೇಖರ್ ನೇತೃತ್ವದ ಜಿಲ್ಲಾ ಅಗ್ನಿಶಾಮಕ ದಳದ ತಂಡಗಳು ರಕ್ಷಣೆಗೆ ದೌಡಾಯಿಸಿದವು. ಬೆಳಗ್ಗೆ 10ರಿಂದ ಆರಂಭವಾದ ಕಾರ್ಯಾಚರಣೆ 11-50ಕ್ಕೆ ಮುಕ್ತಾಯವಾಯಿತು. ನೈಋತ್ಯ ರೈಲ್ವೆ ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳು ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.
    ರೈಲ್ವೆ ಸಚಿವಾಲಯದ (ರೈಲ್ವೆ ಮಂಡಳಿ) ಆದೇಶದಂತೆ ಸಂತ್ರಸ್ತರ ಸಂಕಷ್ಟಗಳನ್ನು ತಗ್ಗಿಸಲು ಮತ್ತು ಇಂತಹ ಸಂಕಷ್ಟ ಸಮಯದಲ್ಲಿ ಆಪತ್ತು ತಡೆಗಟ್ಟುವ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಿಲ್ಪಿ ಅಗರ್ವಾಲ್ ತಿಳಿಸಿದರು.
    ರೈಲು ಅಫಘಾತಕ್ಕೀಡಾದ ಸ್ಥಳಕ್ಕೆ ವಿವಿಧ ತಂತ್ರಜ್ಞರ, ಸಹಾಯಕರ ತಂಡ ಕರೆಸಿ ರಕ್ಷಣೆಯಲ್ಲಿ ತೊಡಗುವುದು. ಪ್ರಯಾಣಿಕರು ಹೊರ ಬರಲಾಗದಿದ್ದರೆ, ಬೋಗಿಯ ಆಕಾರವನ್ನು ಕತ್ತರಿಸಿ ಅನುವು ಮಾಡುವುದು, ಊಟೋಪಚಾರ, ಸಾರಿಗೆ, ಹೆಲ್ಪ್ ಡೆಸ್ಕ್ ಬಗ್ಗೆ ಪರಿಚಯಿಸಲಾಗಿದೆ. ಪ್ರತಿ ವರ್ಷ ಮೈಸೂರು ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿದ್ದ ಈ ಕಲ್ಪಿತ ಪ್ರದರ್ಶನವನ್ನು ಹರಿಹರದಲ್ಲಿ ನಿರೀಕ್ಷೆಯಂತೆ ನಡೆಸಲಾಗಿದೆ ಎಂದು ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಇ.ವಿಜಯಾ ತಿಳಿಸಿದರು.
    ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿ ನೀರಜ್ ಬಾಪ್ನಾ, ಸಹಾಯಕ ವಾಣಿಜ್ಯ ವ್ಯವಸ್ಥಾಪಕ ಉಮೇಶ್ ನಾಯ್ಕ, ಟಿಎಚ್‌ಒ ಡಾ. ಚಂದ್ರಮೋಹನ, ರೈಲ್ವೆ ಹಿರಿಯ ವೈದ್ಯಾಧಿಕಾರಿ ಡಾ.ರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts