More

    ಮಕ್ಕಳ ಶಾಲಾ ಶುಲ್ಕ ಪಾವತಿಸಿದ ಶಾಸಕ

    ಮದ್ದೂರು: ತಾಲೂಕಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶುಲ್ಕವನ್ನು ಕೆ.ಎಂ. ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಪಾವತಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಕೆ.ಎಂ. ಉದಯ್ ತಿಳಿಸಿದರು.

    ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶಾಲೆ ಶುಲ್ಕ ವಿತರಿಸಿ ಮಾತನಾಡಿದರು.
    ತಾಲೂಕಿನ 6 ರಿಂದ ಎಸ್ಸೆಸ್ಸೆಲ್ಸಿವರಗಿನ ತಾಲೂಕಿನ ಸರ್ಕಾರಿ ಶಾಲೆಗಳ ಎಲ್ಲ ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡುವ ಬಗ್ಗೆ ಚುನವಾಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಶಾಲಾ ಶುಲ್ಕವನ್ನು ನೀಡಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

    ತಾಲೂಕಿನ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದ್ದು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಈಗಾಗಲೇ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಸರ್ಕಾರಿ ಶಾಲೆಗಳಲ್ಲಿರುವ ಶೌಚಗೃಹ, ಕಟ್ಟಡಗಳು ಹಾಗೂ ಮೈದಾನ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿದ್ದು, ಈ ಸಮಸ್ಯೆಗಳನ್ನ ಹಂತ ಹಂತವಾಗಿ ಬಗ್ಗೆ ಹರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಟ್ಟಣದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಹಲವಾರು ಸಮಸ್ಯೆಗಳಿದ್ದು, ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ವಾಯವಿಹಾರ ಮಾಡಲು ಅನುಕೂಲವಾಗುವಂತೆ ಹೈಟೆಕ್ ಕ್ರೀಡಾಂಗಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.
    ಸರ್ಕಾರಿ ಶಾಲೆಗಳಲ್ಲಿ ಓದಿದ ಲಕ್ಷಾಂತರ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ನಾನು ಕೂಡ ಸರ್ಕಾರಿ ಶಾಲೆಯಲ್ಲಿ ಅದರಲ್ಲೂ ಗ್ರಾಮಾಂತರ ಪ್ರದೇಶದಲ್ಲಿ ಓದಿದ ವಿದ್ಯಾರ್ಥಿಯಾಗಿದ್ದೇನೆ. ಆದ್ದರಿಂದ ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಎಂಬ ಕೀಳರಿಮೆ ಬಿಟ್ಟು ಪರಿಶ್ರಮ ಪಟ್ಟು ವ್ಯಾಸಂಗ ಮಾಡಿದರೆ ಉತ್ತಮ ಸಾಧನೆ ಮಾಡಬಹುದು ಎಂದರು.
    ವಿದ್ಯಾರ್ಥಿಗಳು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ನೀಡುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾಭ್ಯಾಸದಲ್ಲಿ ಅದ್ವೀತಿಯ ಸಾಧನೆ ಮಾಡುವ ಮೂಲಕ ಶಿಕ್ಷಕರಿಗೆ ಹಾಗೂ ಪಾಲಕರಿಗೆ ಉತ್ತಮ ಹೆಸರು ತರಬೇಕೆಂದು ಕಿವಿ ಮಾತು ಹೇಳಿದರು.

    ಬಿಇಒ ಸಿ.ಎಚ್. ಕಾಳೀರಯ್ಯ ಮಾತನಾಡಿ, ಶಾಸಕರು ಸರ್ಕಾರಿ ಶಾಲೆಗಳ ಎಲ್ಲ ವಿದ್ಯಾರ್ಥಿಗಳ ಶುಲ್ಕವನ್ನು ವೈಯಕ್ತಿಕವಾಗಿ ಕಟ್ಟುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಶಾಸಕರು ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡುತ್ತಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

    ಪ್ರಾಂಶುಪಾಲರಾದ ಗೀತಾ, ಉಪ ಪ್ರಾಂಶುಪಾಲರಾದ ಸುಕನ್ಯಾ, ಪುರಸಭಾ ಸದಸ್ಯರಾದ ಸಚಿನ್ ಸಿದ್ದರಾಜು ಮುಖಂಡರಾದ ಶೇಖರ್, ಕೃಷ್ಣಪ್ಪ, ಶಿಕ್ಷಕರಾದ ನಿಂಗರಾಜು, ಮೋಹನ್, ಸುನಿತಾ, ಶಿಲ್ಪಾ, ಶೋಭಾ, ಶೈಲಜಾ, ಸಾವಿತ್ರಿ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts