More

    ಮಕ್ಕಳಿಗೆ ಅವಧಿ ಮುಗಿದ ಆಹಾರ!

    ಬೀದರ್: ಜಿಲ್ಲೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ನಡೆಯುವ ಕೆಲ ವಸತಿ ನಿಲಯ ಮತ್ತು ವಸತಿ ಶಾಲೆಗಳಿಗೆ ಅವಧಿ ಮುಗಿದ ಆಹಾರ ಪದಾರ್ಥ ಪೂರೈಸಲಾಗುತ್ತಿದೆ ಎನ್ನುವ ವಿಷಯ ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಆಕ್ರೋಶ ಗದ್ದಲಕ್ಕೆ ಕಾರಣವಾಯಿತು.
    ಅವಧಿ ಮುಗಿದಿದೆ ಎನ್ನಲಾದ ಅಡುಗೆ ಎಣ್ಣೆ, ಇಡ್ಲಿ ರವೆ ಹಾಗೂ ಇತರೆ ಆಹಾರ ಪದಾರ್ಥಗಳ ಪಾಕೇಟ್ಗಳನ್ನು ಜಿಪಂ ಸದಸ್ಯರಾದ ಅಂಬಾದಾಸ ಕೋರೆ, ರವೀಂದ್ರ ರೆಡ್ಡಿ ಅವರು ಟೇಬಲ್ ಮೇಲೆ ಇಟ್ಟು ಪ್ರದರ್ಶಿಸಿದರು. ಈ ರೀತಿ ಕಳಪೆ ಆಹಾರ ಪದಾರ್ಥಗಳನ್ನು ಪೂರೈಸಿದರೆ ಮಕ್ಕಳ ಆರೋಗ್ಯ ಹಾಳಾಗುವುದಿಲ್ಲವೆ? ಒಂದು ವೇಳೆ ಮಕ್ಕಳು ಸಾವಿಗೀಡಾದರೆ ಯಾರು ಹೊಣೆ? ಎಂದು ವ್ಯವಸ್ಥೆ ವಿರುದ್ಧ ಕಿಡಿಕಾರಿದರು.
    ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ ನಡೆಯುವ ಕಸ್ತೂರಬಾ ಗಾಂಧಿ ವಸತಿ ನಿಲಯ ಮತ್ತು ಕಸ್ತೂರಬಾ ಗಾಂಧಿ ಹೆಣ್ಣು ಮಕ್ಕಳ ಕೆಲ ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಪೂರೈಸುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಈ ವಸತಿ ನಿಲಯ ಮತ್ತು ವಸತಿ ಶಾಲೆ ಮಕ್ಕಳಿಗೆ ಮೆನೂ ಪ್ರಕಾರ ಊಟೋಪಹಾರ ಕೊಡುತ್ತಿಲ್ಲ. ಅಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸದಸ್ಯರು, ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಆಯುಕ್ತರಿಗೆ ವರದಿ ಮಾಡಬೇಕು ಎಂದು ಪಟ್ಟು ಹಿಡಿದರು.
    ನೋಟಿಸ್ ನೀಡಲಾಗಿದೆ: ತಾವು ಹಲವು ಬಾರಿ ವಸತಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಉಪ ಯೋಜನಾ ಸಮನ್ವಯಾಧಿಕಾರಿಗಳು, ಅವ್ಯವಸ್ಥೆ ಕಂಡುಬಂದ ಶಾಲೆಗಳ ಸಂಬಂಧಿಸಿದವರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
    ಸಭೆಯಲ್ಲಿ ಜಿಪಂ ಸದಸ್ಯೆ ಜಯಶ್ರೀ, ಯೋಜನಾ ನಿರ್ದೇಶಕ ವಿಜಯಕುಮಾರ ಮಡ್ಡೆ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts