More

    ಮಕ್ಕಳಲ್ಲಿ ವಚನಗಳ ಆಶಯಗಳನ್ನು ಬಿತ್ತೋಣ

    ಕೋಲಾರ: ವಚನಗಳನ್ನು ಕಂಠಪಾಠ ಮಾಡಿದರೆ ಸಾಲದು, ಅದರ ಅರ್ಥ ಹೇಳಿಕೊಡುವ ಮೂಲಕ ವಚನಗಳ ಆಶಯವನ್ನು ಹೃದಯದಲ್ಲಿ ಬಿತ್ತುವ ಕೆಲಸವನ್ನು ತಾಯಂದಿರು ಮಾಡಬೇಕು ಎಂದು ರಾಜ್ಯ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು.

    ಮನ್ವಂತರ ಪ್ರಕಾಶನ ಹಾಗೂ ಮನ್ವಂತರ ಜನ ಸೇವಾ ಟ್ರಸ್ಟ್ ಸಹಯೋಗದಲ್ಲಿ 1ರಿಂದ 7ನೇ ತರಗತಿ ಮಕ್ಕಳಿಗಾಗಿ ಆನ್‌ಲೈನ್ ಮೂಲಕ ಮೇ ತಿಂಗಳಲ್ಲಿ ಏರ್ಪಡಿಸಿದ್ದ ವಚನ ವಾಚನ ಸ್ಪರ್ಧೆಯಲ್ಲಿ ವಿಜೇತರಾದ 64 ಮಕ್ಕಳಿಗೆ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು. ಜಾತೀಯತೆ, ಧರ್ಮಾಂಧತೆ, ಭಾಷೆ ಬಗ್ಗೆ ಕಿತ್ತಾಟವಿಲ್ಲದ ಸುಂದರ, ಸಮಾನತೆಯ ಸಮಾಜ ಸೃಷ್ಟಿಸಲು ಸಂಸ್ಕಾರದ ಬೀಜ ಬಿತ್ತಬೇಕಾದುದು ತಾಯಿ. ಹೀಗಾಗಿ ವಚನಗಳ ಸಾರವನ್ನು ಎಳೆಯ ಮನಸ್ಸುಗಳಲ್ಲಿ ಬಿತ್ತುವ ಕೆಲಸ ಮಾಡಬೇಕು. ಈ ದಿಸೆಯಲ್ಲಿ ಸಂಸ್ಥೆಯ ಪ್ರಯತ್ನ ಶ್ಲಾಘನೀಯ ಎಂದರು.

    ವಚನಕಾರರು ವಚನಗಳನ್ನು ಮನ್ನಣೆ ಗಳಿಸಲು ರಚಿಸಿದ್ದಲ್ಲ, ಅದು ಶಾಸ್ತ್ರೀಯ ಸಾಹಿತ್ಯವಲ್ಲ, ಹೃದಯ, ಅಂತರಂಗದಲ್ಲಿ ಅರಳಿದ, ಜನಸಾಮಾನ್ಯರ ನೋವು ನಲಿವಿಗೆ ಸ್ಪಂದಿಸಿದ ಸಾಹಿತ್ಯ. ಅವುಗಳ ಜ್ಞಾನ ವಿಸ್ತಾರವಾದುದು. ಆ ಜ್ಞಾನವನ್ನು ಮಕ್ಕಳಿಗೆ, ಸಮಾಜಕ್ಕೆ ಮುಟ್ಟಿಸಿದರೆ ಜವಾಬ್ದಾರಿಯುತ ಸಾಂಸ್ಕೃತಿ ಪ್ರಪಂಚ ಸೃಷ್ಟಿಸಿದಂತಾಗುತ್ತದೆ ಎಂದರು.

    ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ ಎಂಬ ವಚನ ಬಸವಣ್ಣನವರು ಕೊಟ್ಟ ಮಾನವ ಸಂವಿಧಾನ, ಇಡೀ ವಿಶ್ವಕ್ಕೆ ಕೊಟ್ಟ ಜೀವನ ಸಂವಿಧಾನ, ನೈತಿಕ ಸಂವಿಧಾನ. ಬೇರೆ ಸಂವಿಧಾನವನ್ನು ಬದಲಿಸಬಹುದು, ಬಸವಣ್ಣನವರ ಸಪ್ತ ಸೂತ್ರಗಳ ಸಂವಿಧಾನ ತಿದ್ದುಪಡಿ ಮಾಡಲಾಗದು ಎಂದರು.

    ಆಶಯ ನುಡಿಗಳನ್ನಾಡಿದ ಕಸಾಪ ನಿಟಕಪೂರ್ವ ಅಧ್ಯಕ್ಷ ಜೆ.ಜಿ. ನಾಗರಾಜ್, ಮನ್ವಂತರ ಪ್ರಕಾಶನ ಒಂದೂವರೆ ದಶಕಗಳಿಂದ ಸಾಹಿತ್ಯ, ಸಾಂಸ್ಕೃತಿಕವಾಗಿ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುತ್ತಿದೆ. ಕರೊನಾ ಸಂದರ್ಭದಲ್ಲಿ ಮಕ್ಕಳ ಖಿನ್ನತೆ ದೂರವಾಗಿಸುವ ನಿಟ್ಟಿನಲ್ಲಿ ಆನ್‌ಲೈನ್ ಮೂಲಕ ವಚನಗಳ ಗಾಯನ ಹಮ್ಮಿಕೊಂಡು ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಭದ್ರಗೊಳಿಸಿಕೊಂಡು ಹೋಗುತ್ತಿದೆ ಎಂದರು.

    ಹರಿಹಥಾ ವಿದ್ವಾನ್ ಎನ್.ಆರ್. ಜ್ಞಾನಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಸಂಸ್ಥಾಪಕ ಪಾ.ಶ್ರೀ.ಅನಂತರಾಮ್, ಸಂಘಟನಾ ಕಾರ್ಯದರ್ಶಿ ಎಸ್.ಮಂಜುನಾಥ್, ಖಜಾಂಚಿ ಎಸ್.ಎನ್. ಪ್ರಕಾಶ್, ಸ್ಪರ್ಧೆಯ ತೀರ್ಪುಗಾರರಾದ ಕೆ.ಎನ್. ಪರಮೇಶ್ವರನ್, ಪಿ. ಸುಬ್ಬರಾಯಪ್ಪ, ಗೋಕುಲ್ ಕಾಲೇಜಿನ ಪ್ರಾಂಶುಪಾಲ ಮಹೇಶ್, ಪತ್ರಕರ್ತರ ಸಂಘದ ಅಧ್ಯಕ್ಷ ವಿ. ಮುನಿರಾಜು, ರೈತ ಸಂಘದ ಉಪಾಧ್ಯಕ್ಷ ಕೆ. ನಾರಾಯಣಗೌಡ, ಮಹಿಳಾ ಘಟಕ ಅಧ್ಯಕ್ಷೆ ನಳಿನಿ, ಮನ್ವಂತರ ಮಾಧ್ಯಮ ವಿಭಾಗದ ಸಂಚಾಲಕ ಪಿ.ಎಸ್.ಸತ್ಯನಾರಾಯಣರಾವ್, ಮನ್ವಂತರ ಪರಿಸರ ಪಡೆಯ ಸಂಚಾಲಕ ಎ. ಬಾಲನ್, ಸೇವಾ ವಿಭಾಗದ ಸಂಘಟನಾ ಕಾರ್ಯದರ್ಶಿ ಎಲ್. ನಿರಂಜನ್, ಸಾಹಿತ್ಯ ವಿಭಾಗದ ಸಂಚಾಲಕ ಸಿ. ರವೀಂದ್ರ ಸಿಂಗ್, ಸಹಕಾರಿ ಯೂನಿಯನ್ ನಿರ್ದೇಶಕಿ ಅರುಣಮ್ಮ, ಎಪಿಎಂಸಿ ಮಾಜಿ ಅಧ್ಯಕ್ಷೆ ರಾಜರಾಜೇಶ್ವರಿ, ಟೆಕ್ನಿಕಲ್ ಟೀಂನ ಪಿ.ಎಸ್.ಹರೀಶ್, ಸ್ಫೂರ್ತಿ ಎ.ದೀಕ್ಷಿತ್, ಶ್ರಾವಣಿ, ಎಂ.ಸಂತೋಷ್, ಹರಿ ಪಾಲ್ಗೊಂಡಿದ್ದರು.

    ಸಮಾಜದಲ್ಲಿ ಸ್ವಾರ್ಥ ತುಂಬಿದೆ. ಸ್ವಾರ್ಥವಿದ್ದರೆ ಸಮಾಜ ಉಳಿಯದು, ಬಡತನವನ್ನು ಕೆಟ್ಟದಾಗಿ ನೋಡಿದರೆ ಅದು ಶಾಪವಾಗಿ ಪರಿಣಮಿಸುತ್ತದೆ. ಬದುಕಿನ ಚಕ್ರ ಅರ್ಧ ಮಾಡಿಕೊಂಡು ಬಡವರನ್ನೂ ಗೌರವದಿಂದ ಕಾಣಬೇಕು.
    ಬ್ಯಾಲಹಳ್ಳಿ ಗೋವಿಂದಗೌಡ, ಮನ್ವಂತರ ಜನಸೇವಾ ಟ್ರಸ್ಟ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts