More

    ಭೂ ಕಂದಾಯ ಕಾಯ್ದೆ ತಿದ್ದುಪಡಿಗೆ ಚಿಂತನೆ

    ಶಿವಮೊಗ್ಗ: ಭೂ ಸಾಗುವಳಿದಾರರಿಗೆ ತೊಂದರೆ ಆಗದಂತೆ ಕರ್ನಾಟಕ ಭೂ ಕಂದಾಯ ಕಾಯ್ದೆ 2007ನ್ನು ತಿದ್ದುಪಡಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮರುಚಿಂತನೆ ನಡೆಸಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.

    ನಗರ ಪ್ರದೇಶದಲ್ಲಿ ರಿಯಲ್ ಎಸ್ಟೇಟ್​ಗೆ ಕಡಿವಾಣ ಹಾಕುವ ಉದ್ದೇಶದಿಂದ ಎ.ಟಿ.ರಾಮಸ್ವಾಮಿ ವರದಿ ಪ್ರಕಾರ ಕಾನೂನು ಜಾರಿಗೆ ತಂದಿದ್ದರೂ ಸಣ್ಣಪುಟ್ಟ ರೈತರ ಮೇಲೆ ಅದು ಪರಿಣಾಮ ಬೀರುತ್ತಿದೆ. ಅಲ್ಲದೆ ರೈತರು ಬೆಂಗಳೂರಿನಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಶೀಘ್ರವೇ ಕಾಯ್ದೆಗೆ ತಿದ್ದುಪಡಿ ತರಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

    ಈ ಸಂಬಂಧ ವಿಧಾನಸೌಧದಲ್ಲಿ ಗುರುವಾರ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಚಿವರಾದ ಆರ್.ಅಶೋಕ್, ಜಿ.ಮಾಧುಸ್ವಾಮಿ, ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ ಸೇರಿ ಕೆಲ ಶಾಸಕರು, ಎಂಎಲ್​ಸಿಗಳು, ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಕಾಯ್ದೆಗೆ ತಿದ್ದುಪಡಿ ತರುವ ಕುರಿತು ಪರಾಮಶಿಸಲಾಯಿತು. ಕೋಟ್ಯಂತರ ರೂ. ಬೆಲೆ ಬಾಳುವ ಭೂಮಿ ಲೂಟಿ ತಡೆಗಟ್ಟಲು ಕಾಯ್ದೆ ಜಾರಿಗೆ ತಂದಿದ್ದರೂ ಪರಿಣಾಮ ಮಾತ್ರ ಸಣ್ಣ ರೈತರ ಮೇಲೆ ಆಗುತ್ತಿದೆ. ಅದನ್ನು ತಡೆಯುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ಮಾಡುವುದಕ್ಕೆ ಸಿಎಂ ಕೂಡ ಒಲವು ತೋರಿದ್ದಾರೆ ಎಂದರು.

    ಕಾಯ್ದೆ ತಿದ್ದುಪಡಿ ಮಾಡುವುದರಿಂದ 4 ಎಕರೆ ಒಳಗೆ ಸಾಗುವಳಿ ಮಾಡುವ ರೈತರಿಗೆ ಇದು ಅನುಕೂಲ. ಈ ಸಂಬಂಧ ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ನಡೆಯುತ್ತಿರುವ ಜಂಟಿ ಸರ್ವೆ ವಿಳಂಬವಾಗುತಿದ್ದು, ಇದಕ್ಕೆ ವಿಶೇಷ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರ ಬದಲು ಐಎಎಸ್ ದರ್ಜೆ ಅಧಿಕಾರಿಯನ್ನು ಸರ್ಕಾರ ಉಸ್ತುವಾರಿಗೆ ನಿಯೋಜಿಸಬೇಕಿದೆ ಎಂದು ಮನವಿ ಮಾಡಿದರು.

    5 ಸಾವಿರ ರೈತರಿಗೆ ನೋಟಿಸ್: ಶಿವಮೊಗ್ಗ ಜಿಲ್ಲೆಯಲ್ಲೆಯೊಂದರಲ್ಲೇ ಅರಣ್ಯ ಇಲಾಖೆಯಿಂದ 4,725 ಹಾಗೂ ಕಂದಾಯ ಇಲಾಖೆಯಿಂದ ಒಂದು ಸಾವಿರಕ್ಕೂ ಅಧಿಕ ರೈತರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಶೀಘ್ರವೇ ಕಾಯ್ದೆಗೆ ತಿದ್ದುಪಡಿ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಎಂಪಿಎಂ ಮುಚ್ಚುವುದಿಲ್ಲ: ಭದ್ರಾವತಿ ಎಂಪಿಎಂ ಮುಚ್ಚುವುದಿಲ್ಲ. ಆದರೆ ಪ್ರಸ್ತುತ ರಾಜ್ಯ ಸರ್ಕಾರದ ಬಳಿ ಕಾರ್ಖಾನೆಯಲ್ಲಿರುವ ಯಂತ್ರಗಳನ್ನು ಬದಲಿಸಿ ಮರು ಅಭಿವೃದ್ಧಿಪಡಿಸುವಷ್ಟು ಆರ್ಥಿಕ ಸಾಮರ್ಥ್ಯ ಇಲ್ಲ. ಆ ನಿಟ್ಟಿನಲ್ಲಿ ಕಾರ್ಖಾನೆ ಪುನಶ್ಚೇತನಕ್ಕಿಂತ ಮುಂದೇನು ಮಾಡಬಹುದು ಎಂಬುದರ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

    ಕಾನೂನಿನ ಚೌಕಟ್ಟನಲ್ಲಿ ತನಿಖೆ ನಡೆಸಲಿ: ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಅತೃಪ್ತ ಶಾಸಕರು ಮತ್ತೊಂದು ಅನಾಮಧೇಯ ಪತ್ರ ಬಿಡುಗಡೆ ಮಾಡಿ ವಿಜಯೇಂದ್ರ ಅವರೇ ಸೂಪರ್ ಸಿಎಂ ಆಗಿದ್ದಾರೆಂದು ಬಿಜೆಪಿ ಅತೃಪ್ತ ಶಾಸಕರು ಹೈಕಮಾಂಡ್​ಗೆ ಪತ್ರ ಬರೆದಿದ್ದಾರೆನ್ನಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಬಿ.ವೈ.ರಾಘವೇಂದ್ರ, ವಿಜಯೇಂದ್ರ ವಿರುದ್ಧ ಪತ್ರ ಬರೆದಿದ್ದಾರೆ ಎಂಬುದು ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದೆ. ಇದು ಪಕ್ಷದೊಳಗಿನವರು ಅಥವಾ ಹೊರಗಿನವರು ಬರೆದಿದ್ದಾರೋ ಎಂಬುದರ ಬಗ್ಗೆ ಪಕ್ಷ ತೀರ್ವನಿಸಲಿದೆ. ಅಗತ್ಯಬಿದ್ದರೆ ಆ ಬಗ್ಗೆ ಕಾನೂನಿನ ಚೌಕಟ್ಟಿನಲ್ಲಿ ಸಮಗ್ರ ತನಿಖೆ ನಡೆಸಲಿ ಎಂದರು.

    ಕೌಶಲಾಭಿವೃದ್ಧಿ ಕೇಂದ್ರಕ್ಕೆ ಜಾಗ ಹುಡುಕಾಟ: ಯುವಜನತೆಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೌಶಲಾಭಿವೃದ್ಧಿ ಕೇಂದ್ರಗಳು ಮಹತ್ವ ಪಡೆದುಕೊಳ್ಳುತ್ತಿವೆ. ಆ ನಿಟ್ಟಿನಲ್ಲಿ 25 ಎಕರೆ ಜಾಗ ಹುಡುಕಾಟ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕೇಂದ್ರ ತೆರೆದು ಕೌಶಲವನ್ನು ಕಲಿಸಲು ಒತ್ತು ನೀಡಲಾಗುತ್ತಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಲಾಗಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು. ಇದೇವೇಳೆ ಜಿಲ್ಲಾಮಟ್ಟದ ಪ್ರಧಾನಮಂತ್ರಿ ಕೌಶಲಾಭಿವೃದ್ಧಿ ಕೇಂದ್ರಗಳು ಕೂಡ ತನ್ನದೇ ಆದ ನೆಟ್​ವರ್ಕ್​ನೊಂದಿಗೆ ಉತ್ತಮವಾಗಿ ಕಾರ್ಯಾಚರಣೆ ನಡೆಸಿವೆ ಎಂದು ಹೇಳಿದರು.

    ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಜಿಪಂ ಸದಸ್ಯ ವೀರಭದ್ರಪ್ಪ ಪೂಜಾರ, ಸುನೀತಾ ಅಣ್ಣಪ್ಪ, ಜ್ಯೋತಿ ಪ್ರಕಾಶ್, ಋಷಿಕೇಶ್ ಪೈ, ಮಾಲತೇಶ್, ರತ್ನಾಕರ್ ಶೆಣೈ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts