More

    ಭಿನ್ನಮತ ತೋರಿದಲ್ಲಿ ಎಐಸಿಸಿಗೆ ವರದಿ -ಪ್ರಣಿತಿ ಶಿಂಧೆ ಎಚ್ಚರಿಕೆ

    ದಾವಣಗೆರೆ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಎಐಸಿಸಿ ವೀಕ್ಷಕಿ ಪ್ರಣಿತಿ ಶಿಂಧೆ ಹೇಳಿದರು.
    ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ, ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದರು.
    ಮೇನಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದೆ. ಜಿಲ್ಲೆಯ 8 ಕ್ಷೇತ್ರಗಳಲ್ಲೂ ನಮ್ಮವರೇ ಶಾಸಕರಾಗಲು ಶ್ರಮ ಹಾಕಬೇಕಿದೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಾಗಿ ಮತ್ತು ಪಕ್ಷಕ್ಕಾಗಿ ಕೆಲಸ ಮಾಡಬೇಕು ಪಕ್ಷವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದವರ ಬಗ್ಗೆ ಎಐಸಿಸಿಗೆ ವರದಿ ನೀಡಲಾಗುವುದು ಎಂದು ಹೇಳಿದರು.
    ಭಾರತ್ ಜೋಡೋ ಯಾತ್ರೆ ಬಳಿಕ ಕರ್ನಾಟಕದಲ್ಲಿ ಚುನಾವಣೆ ಬರುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಉತ್ತಮ ಅವಕಾಶವಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಸುರ್ಜೆವಾಲಾ, ಶಾಮನೂರು ಶಿವಶಂಕರಪ್ಪ ಸೇರಿ ದೊಡ್ಡ ಮುಖಂಡರ ಪಡೆಯೇ ನಮ್ಮಲ್ಲಿದೆ. ಹೀಗಾಗಿ ಎಲ್ಲರ ಮಾರ್ಗದರ್ಶನದಲ್ಲಿ ಹೆಜ್ಜೆ ಹಾಕಬೇಕಿದೆ ಎಂದರು.
    ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳು ಕಾಂಗ್ರೆಸ್ ಮೂಲ ಹೊಂದಿವೆ. ಪಕ್ಷದ ವರಿಷ್ಠ ರಾಹುಲ್‌ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ತಮ್ಮ ಪಾತ್ರ ನಿಭಾಯಿಸಿದ್ದಾರೆ. ಇನ್ನು ಮುಂಬರುವ ಚುನಾವಣೆಯಲ್ಲಿ ಕಾರ್ಯಕರ್ತರು ತಮ್ಮ ಶ್ರಮವನ್ನು ಪ್ರದರ್ಶಿಸಬೇಕಿದೆ.
    ದಾವಣಗೆರೆ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ವೀಕ್ಷಕಿಯಾಗಿದ್ದು, ಮುಖಂಡರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಆಗದವರು ನನ್ನನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಮಾಹಿತಿ ನೀಡಬಹುದು. ಪಕ್ಷದ ಪರ ಕೆಲಸ ಮಾಡದವರ ಬಗ್ಗೆಯೂ ಹೇಳಬಹುದು ಎಂದರು.
    ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ ಭಾರತ್ ಜೋಡೋ ಯಾತ್ರೆ ಹಾಗೂ ಪ್ರಜಾಧ್ವನಿ ಕಾರ್ಯಕ್ರಮದಿಂದಾಗಿ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಆಗುತ್ತಿದೆ. ಪ್ರತಿ ಮನೆಗೂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ಅವಧಿಯ ಕೆಲಸಗಳನ್ನು ಮನವರಿಗೆ ಮಾಡಿಕೊಡಬೇಕು ಎಂದು ಹೇಳಿದರು.
    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಿಣಿಯರಿಗೆ 2 ಸಾವಿರ ರೂ. ನೆರವು, ಪ್ರತಿ ಮನೆಗೂ 200 ಯೂನಿಟ್‌ವರೆಗೆ ವಿದ್ಯುತ್, ಪಡಿತರದಾರರಿಗೆ 10 ಕೆಜಿ ಅಕ್ಕಿ ನೀಡಲಿದೆ. ಈ ಬಗ್ಗೆ ಜನರಿಗೆ ತಿಳಿಸಬೇಕು. ಈಗಿರುವ ಸುಳ್ಳಿನ ಸರ್ಕಾರವನ್ನು ಮನೆಗೆ ಕಳುಹಿಸಲು ಸಂಕಲ್ಪ ಮಾಡಬೇಕೆಂದರು.
    ಕಳೆದ ಬಾರಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಸೋಲಿಸಿದ್ದರ ಬಗ್ಗೆ ದಾವಣಗೆರೆ ಉತ್ತರ ಕ್ಷೇತ್ರದ ಮತದಾರರಲ್ಲಿ ಪಶ್ಚಾತ್ತಾಪವಿದೆ. ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಅಧಿಕೃತ ಅಭ್ಯರ್ಥಿ ಪರವಾಗಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು.
    ದಾವಣಗೆರೆ ಉತ್ತರ ಕ್ಷೇತ್ರದ ಅಧ್ಯಕ್ಷ ಕೆ.ಜಿ.ಶಿವಕುಮಾರ್ ಮಾತನಾಡಿ ಉತ್ತರ ಕ್ಷೇತ್ರದ 14 ವಿಭಾಗಗಳಲ್ಲಿ ಪಕ್ಷದ ಯೋಜನೆಗಳನ್ನು ತಲುಪಿಸಲಾಗುವುದು ಎಂದು ತಿಳಿಸಿದರು.
    ಸಭೆಯಲ್ಲಿ ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ದಕ್ಷಿಣ ವಲಯದ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ಪಾಲಿಕೆ ವಿಪಕ್ಷನಾಯಕ ಗಡಿಗುಡಾಳ್ ಮಂಜುನಾಥ, ಮುಖಂಡ ಸೈಯದ್ ಸೈಪುಲ್ಲಾ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಎಸ್. ಮಲ್ಲಿಕಾರ್ಜುನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts