More

    ಭಾಷಣಗಳಿಂದ ಜನರನ್ನು ಯಾಮಾರಿಸಬೇಡಿ, ಸಚಿವ ಎಂಟಿಬಿ ನಾಗರಾಜ್ ಕಿಡಿ, ಹೊಸಕೋಟೆ ವಿವಿಧೆಡೆ ದಿನಸಿ ಕಿಟ್ ವಿತರಣೆ

    ಬೆಂಗಳೂರು ಗ್ರಾಮಾಂತರ: ಕೇವಲ ಭಾಷಣಗಳಿಂದ ಜನರನ್ನು ಮರಳು ಮಾಡೋಕೆ ಸಾಧ್ಯವಿಲ್ಲ. ಅಭಿವೃದ್ಧಿ ಕಾರ್ಯ ಕೈಗೊಂಡು ಜನರಿಗೆ ಲೆಕ್ಕ ಕೊಡಿ ಎಂದು ಕ್ಷೇತ್ರದ ಶಾಸಕರಿಗೆ ಪೌರಾಡಳಿತ ಮತ್ತು ಸಕ್ಕರೆ ಖಾತೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಸಲಹೆ ನೀಡಿದರು.

    ಹೊಸಕೋಟೆ ತಾಲೂಕು ಅನುಗೊಂಡನಹಳ್ಳಿ ಹೋಬಳಿ ಮಲ್ಲಸಂದ್ರದಲ್ಲಿ ಮಂಗಳವಾರ ದಿನಸಿ ಕಿಟ್ ವಿತರಿಸಿ ಮಾತನಾಡಿದರು. ಭಾಷಣ ಮಾಡುವುದನ್ನೇ ಕರಗತ ಮಾಡಿಕೊಂಡವರಿಂದ ಅಭಿವೃದ್ಧಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

    ಅಧಿಕಾರಿಗಳು ಕೈಗೊಂಬೆಯಲ್ಲ: ಯಾವ ಅಧಿಕಾರಿಗಳು ಕೈಗೊಂಬೆಯಲ್ಲ. ಅಧಿಕಾರಿಗಳನ್ನು ಕೈಗೊಂಬೆ ಮಾಡಿಕೊಳ್ಳುವ ಅವಶ್ಯಕತೆಯೂ ನನಗಿಲ್ಲ ಎಂದು ಸಚಿವರು ಖಾರವಾಗಿ ನುಡಿದರು. ಅಧಿಕಾರ ಇಲ್ಲದಾಗಲೂ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದೆ. ಜನರ ಅಹವಾಲು ಸ್ವೀಕರಿಸಿ ಅಧಿಕಾರಿಗಳ ಗಮನ ಸೆಳೆದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದೆ. ಅಧಿಕಾರಿಗಳೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಇದರಲ್ಲಿ ಕೈಗೊಂಬೆ ಮಾಡಿಕೊಳ್ಳುವ ಅವಶ್ಯಕತೆಯೇ ಇಲ್ಲ ಎಂದು ಪರೋಕ್ಷವಾಗಿ ಶಾಸಕ ಶರತ್ ಬಚ್ಚೇಗೌಡ ಅವರಿಗೆ ಟಾಂಗ್ ನೀಡಿದರು.
    ಕರೊನಾ ಎರಡನೇ ಅಲೆ ವೇಳೆ ಸ್ವಂತ ಖರ್ಚಿನಲ್ಲಿ ಎಂಟಿಬಿ ಚಾರಿಟಬಲ್ನಿಂದ ಬಡವರಿಗೆ ಕೂಲಿ ಕಾರ್ಮಿಕರಿಗೆ ಆರ್ಥಿಕವಾಗಿ ಹಿಂದುಳಿದವರಿಗೆ ದಿನಕಿ ಕಿಟ್ ವಿತರಿಸಿದ್ದೇನೆ. ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗೆ ವೈದ್ಯಕೀಯ ಪರಿಕರ ವಿತರಿಸಿದ್ದೇನೆ. ಅಭಿಯಾನದ ಮಾದರಿಯಲ್ಲಿ ಉಚಿತವಾಗಿ ವ್ಯಾಕ್ಸಿನ್ ವಿತರಣೆ ಹಮ್ಮಿಕೊಂಡಿದ್ದೇನೆ ಎಂದು ಮಾಹಿತಿ ನೀಡಿದರು.

    ಪ್ರೋಟೋಕಾಲ್ ನೆಪ: ಸ್ಥಳೀಯ ಶಾಸಕರು ಪ್ರೋಟೋಕಾಲ್ ನೆಪದಲ್ಲಿ ಆಗಾಗ ಅಭಿವೃದ್ಧಿ ಕಾರ್ಯಗಳಿಗೆ ತಡೆಯೊಡ್ಡುತ್ತಿದ್ದಾರೆ ಎಂದು ಸಚಿವ ಎಂಟಿಬಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದೆ ಬಿ.ಎನ್.ಬಚ್ಚೇಗೌಡ ಅವರ ಅಧಿಕಾರಾವಧಿಯಲ್ಲಿ ಯಾವುದೇ ಸರ್ಕಾರಿ ಕಾಮಗಾರಿಗಳಿಗೆ ಹಾಗೂ ಕಾರ್ಯಕ್ರಮಗಳಿಗೆ ನಗರಸಭೆ ಅಧ್ಯಕ್ಷರನ್ನಾಗಲಿ, ಜಿಪಂ, ತಾಪಂನ ಜನಪ್ರತಿನಿಧಿಗಳನ್ನಾಗಲಿ ಆಹ್ವಾನಿಸುತ್ತಿರಲಿಲ್ಲ. ಈ ಬಗ್ಗೆ ಬಹಳ ಜನ ನನ್ನ ಮುಂದೆ ಸಾಕಷ್ಟು ಬೇಸರ ತೋರ್ಪಡಿಸಿದ್ದರು. ಆದರೆ ಈಗ ಶಾಸಕರು ಶಿಷ್ಟಾಚಾರ ನೆಪದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ಆರೋಪಿಸಿದರು. ಈ ಹಿಂದೆ ಹೊಸಕೋಟೆ ಬಸ್ ನಿಲ್ದಾಣ ಉದ್ಘಾಟನೆ ವೇಳೆಯೂ ಗದ್ದಲ ಮಾಡಿ ಕ್ಷೇತ್ರದ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದರು. ಈಗಲು ಅದನ್ನೆ ಮುಂದುವರಿಸಿದ್ದಾರೆ. 40 ವರ್ಷದಿಂದ ಕೇವಲ ಭಾಷಣ ಮಾಡಿದವರಿಂದ ಕ್ಷೇತ್ರದಲ್ಲಿ ಯಾವ್ಯಾವ ಅಭಿವೃದ್ಧಿ ಕೆಲಸಗಳಾಗಿವೆ, ಎಂಟಿಬಿ ಅವಧಿಯಲ್ಲಿ ಏನೇನು ಪ್ರಗತಿಯಾಗಿದೆ ಎಂಬುದು ಜನಕ್ಕೆ ತಿಳಿದಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts