More

    ಭಾವೈಕ್ಯದ ತಾಣದಲ್ಲಿ ಮೊಹರಂ ಸಿದ್ಧತೆ

    ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
    ಹಿಂದು-ಮುಸ್ಲಿಮರ ಭಾವೈಕ್ಯದ ಹಬ್ಬಗಳಲ್ಲಿ ಪ್ರಮುಖವಾದದ್ದು ಮೊಹರಂ. ಯಾವುದೇ ತಾರತಮ್ಯ ಇಲ್ಲದೆ ಈ ಹಬ್ಬದಲ್ಲಿ ಹಿಂದುಗಳು ಪಾಲ್ಗೊಳ್ಳುತ್ತಾರೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಮೊಹರಂ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ. ಆದರೆ, ಕರೊನಾ ಕಾಟದಿಂದಾಗಿ ಇತ್ತೀಚೆಗೆ ಹಬ್ಬದ ಸಡಗರ ಕಳೆಗುಂದುತ್ತಿದೆ.
    ಹಬ್ಬದ ಹಿನ್ನೆಲೆ: ಸತ್ಯ ನ್ಯಾಯವನ್ನು ಕಾಪಾಡಲು ಇಮಾಮ್ ಹುಸೇನರು 72 ಅನುಯಾಯಿಗಳೊಡನೆ ಯುದ್ಧ ಸಾರಿದ್ದರು. ಮೊಹರಂ ತಿಂಗಳ ಹತ್ತನೇ ದಿನ ಕರ್ಬಲಾ ಎಂಬ ಮರುಭೂಮಿಯಲ್ಲಿ ನಡೆದ ಯುದ್ಧದಲ್ಲಿ ಇಮಾಮ್ ಹುಸೇನ್ ಹುತಾತ್ಮರಾದರು. ಶಾಂತಿ ಮತ್ತು ಧರ್ಮಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ಹಜರತ್ ಹಸನ್ ಮತ್ತು ಹುಸೇನರ ಪುಣ್ಯ ಸ್ಮರಣೆಯ ನಿಮಿತ್ತ ಈ ಹಬ್ಬ ಆಚರಿಸಲಾಗುತ್ತದೆ. ಹತ್ತು ದಿನಗಳವರೆಗೆ ನಡೆಯುವ ಈ ಹಬ್ಬದಲ್ಲಿ ಬರುವ ಹೆಜ್ಜೆ ಕುಣಿತ, ಮುಳ್ತಾ ಹೆಜ್ಜೆ ಕುಣಿತ, ಮಟಕಿ ಹೆಜ್ಜೆ ಕುಣಿತ, ಮರಗಾಲು ಕುಣಿತ ಮುಂತಾದ ಪ್ರಕಾರಗಳಲ್ಲಿ ಕುಣಿಯುತ್ತಾರೆ. ಇದನ್ನು ಜಾನಪದ ಕಲೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಹಳ್ಳಿಗಳಲ್ಲಿ ಈ ಕುಣಿತಕ್ಕೆ ಅಲಾಯಿ ಹೆಜ್ಜೆ ಕುಣಿತ ಎಂದು ಕರೆಯಲಾಗುತ್ತದೆ. ಆ. 19ರಂದು ನಡೆಯುವ ಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
    ಪಟ್ಟಣ ಸೇರಿದಂತೆ ಕೋಡಿಕೊಪ್ಪ, ಕೋಚಲಾಪೂರ, ಅಬ್ಬಿಗೇರಿ, ಯರೇಬೇಲೇರಿ, ಕುರಡಗಿ, ಗುಜಮಾಗಡಿ, ಡ.ಸ. ಹಡಗಲಿ, ಜಕ್ಕಲಿ, ಬೂದಿಹಾಳ, ಮಾರನಬಸರಿ, ಹಾಲಕೆರೆ, ನಿಡಗುಂದಿಕೊಪ್ಪ, ನಿಡಗುಂದಿ, ಕಳಕಾಪುರ ಗ್ರಾಮಗಳಲ್ಲಿ ಮೊಹರಂ ಹಬ್ಬವನ್ನು ಹಿಂದು-ಮುಸ್ಲಿಮರು ಶ್ರದ್ಧೆಯಿಂದ ಆಚರಿಸುತ್ತಾರೆ. ಆದರೆ, ಕಳೆದ ಎರಡು ವರ್ಷಗಳಿಂದ ಕರೊನಾ ಹಿನ್ನೆಲೆಯಲ್ಲಿ ಮೊಹರಂ ಹಬ್ಬ ಮಂಕಾಗಿದೆ.
    ಹುಲಿ ವೇಷಧಾರಿಗಳು ಹೆಜ್ಜೆ ಹಾಕುವಾಗ ಚಿಕ್ಕ ಮಕ್ಕಳನ್ನು ಅವರ ಕೈಯಲ್ಲಿ ಕೊಡಬೇಕು. ಮಗುವನ್ನು ಎತ್ತಿಕೊಂಡು ಹುಲಿ ವೇಷಧಾರಿಗಳು ಹೆಜ್ಜೆ ಹಾಕಿದರೆ ಮಕ್ಕಳಲ್ಲಿನ ಹೆದರಿಕೆ ಹೋಗಿ ಧೈರ್ಯ ಬರುತ್ತದೆ. ಮಕ್ಕಳಿಗೆ ಯಾವುದೇ ತೊಡಕುಗಳು ಎದುರಾಗುವುದಿಲ್ಲ ಎಂಬ ನಂಬಿಕೆ ಗ್ರಾಮೀಣ ಭಾಗದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿ ಹುಲಿ ಹಾಗೂ ಅಳ್ಳೊಳ್ಳಿ ಬವ್ವಾ ವೇಷಧಾರಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಗ್ರಾಮೀಣ ಭಾಗದ ಅಲ್ಲಲ್ಲಿ ಇನ್ನೂ ಈ ಕಲೆ ಜೀವಂತವಾಗಿದೆ.
    ಸಂಜ್ಞೆ ಮೂಲಕ ಭವಿಷ್ಯ
    ಸಿದ್ದನಕೊಳ್ಳದ ಸಿದ್ದಪ್ಪಜ್ಜ ಹಾಗೂ ಇಳಕಲ್ಲ ದರ್ಗಾದ ಮುರ್ತಜಾ ಖಾದ್ರಿ ಅವರ ಉತ್ತಮ ಬಾಂಧವ್ಯದ ಪ್ರತೀಕವಾಗಿ ಹೋಬಳಿ ವ್ಯಾಪ್ತಿಯ ಮಾರನಬಸರಿ ಗ್ರಾಮದಲ್ಲಿ ಮೊಹರಂ ಆಚರಿಸಲಾಗುತ್ತದೆ. ಅಹೋರಾತ್ರಿ ಪ್ರಸಿದ್ಧ ಗಾಯಕರಿಂದ ಗೀಗೀ ಪದಗಳ ಗಾಯನ ನಡೆಯುತ್ತದೆ. ಮಳೆ, ಬೆಳೆ, ರಾಜಕೀಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಂಜ್ಞೆಯ ಮೂಲಕ ಮುನ್ಸೂಚನೆ ನೀಡುವುದೇ ಇಲ್ಲಿ ಪ್ರತಿಷ್ಠಾಪಿಸುವ ದೇವರುಗಳ (ಪಂಜಾ) ವಿಶೇಷ.
    ರೈತರಿಗೆ ಫಸಲಿನ ಮುನ್ಸೂಚನೆ : ಮೊಹರಂ ಕೊನೆಯ ದಿನದಂದು ಮಸೂತಿಯಿಂದ ಎದ್ದೇಳುವ ದೇವರುಗಳು ಭಾರಿ ಜನಸ್ತೋಮದ ನಡುವೆ ಕೆಲ ಅದೃಷ್ಟವಂತ ಭಕ್ತರಿಗೆ ಮಾತ್ರ ಉತ್ತತ್ತಿ, ಅಂಗಾರ ನೀಡಿ ಉಡಿ ತುಂಬುತ್ತವೆ. ಕತಲ್ ರಾತ್ರಿಯಂದು ದೊಡ್ಡ ಮಸೀದಿಯ ಮುಜಾವರರು ರಾತ್ರಿ 12 ಗಂಟೆಗೆ ದೂರದ ಹೊಲದ ಮಣ್ಣನ್ನು ತಂದು ಅದರಲ್ಲಿ ವಿವಿಧ ಬಿತ್ತನೆ ಬೀಜಗಳನ್ನು ಸೇರಿಸಿ, ತಂಬಿಗೆಯಲ್ಲಿ ಹಾಕುತ್ತಾರೆ. ಹೀಗೆ ಹಾಕಿದ 2 ಗಂಟೆಯಲ್ಲಿ ಕಾಳುಗಳು ಮೊಳಕೆ ಒಡೆಯುತ್ತವೆ. ಉತ್ತಮ ಫಸಲು ಬರುವ ಕಾಳುಗಳು ಮಾತ್ರ ಮೊಳಕೆಯೊಡೆಯುತ್ತವೆ ಎಂಬ ನಂಬಿಕೆ ಈ ಭಾಗದ ರೈತರದ್ದಾಗಿದೆ.
    ಮುಸ್ಲಿಂ ದೇವರ ಕೊರಳಲ್ಲಿ ಲಿಂಗದಕಾಯಿ: ಹಾಲಕೆರೆಯಲ್ಲಿ ಮೊಹರಂ ಅನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಹಾಲಕೆರೆಯ ಅನ್ನದಾನೀಶ್ವರ ಸಂಸ್ಥಾನಮಠದ ಲಿಂ. ಅನ್ನದಾನ ಸ್ವಾಮೀಜಿಗಳು ಅಲೈ ದೇವರಿಗೆ ಲಿಂಗ (ಲಿಂಗದಕಾಯಿ) ಹಾಕಿ ರಾಷ್ಟ್ರಧ್ವಜ ಕಟ್ಟಿದ್ದರು. ಹೀಗಾಗಿ ಇಲ್ಲಿನ ಮೊಹರಂ ಹಬ್ಬ ಭಾವೈಕ್ಯದ ಜತೆಗೆ ರಾಷ್ಟ್ರ ಪ್ರೇಮದ ಮೆರುಗು ಪಡೆದಿದೆ. ಅಂದಿನಿಂದ ಇಂದಿನವರೆಗೂ ಈ ಪದ್ಧತಿಯನ್ನು ಮುಂದುವರಿಸಿಕೊಂಡು ಬರಲಾಗಿದೆ. ಅಲೈ ದೇವರನ್ನು (ಪಂಜಾ) ಹೊರಲು ಗ್ರಾಮಸ್ಥರ ಮಧ್ಯೆ ಪೈಪೊಟಿ ಏರ್ಪಡುತ್ತದೆ. ಪ್ರತಿ ವರ್ಷವೂ ದೇವರನ್ನು ಹೊರಲು ಬಹಿರಂಗ ಸವಾಲು ಪದ್ಧತಿ ಜಾರಿಯಲ್ಲಿದ್ದು, ಸವಾಲಿನಲ್ಲಿ ಹೆಚ್ಚು ಹಣ ಕೂಗಿದವರು ದೇವರನ್ನು ಹೊರುತ್ತಾರೆ. ಕಳೆದ ವರ್ಷ (2019ರಲ್ಲಿ) 45 ಸಾವಿರಕ್ಕೆ ಸವಾಲ್ ನಡೆದಿತ್ತು. ಸವಾಲಿನಿಂದ ಬಂದ ಹಣವನ್ನು ದೇವರ ಕಾರ್ಯಗಳಿಗೆ ಉಪಯೋಗಿಸಲಾಗುತ್ತದೆ.

    ಮಾರನಬಸರಿಯ ಮೊಹರಂಗೆ ತನ್ನದೆ ಆದ ಇತಿಹಾಸವಿದೆ. ಇಲ್ಲಿನ ದೇವರ ಪವಾಡಗಳನ್ನು ನೋಡಲು ಸಾವಿರಾರು ಜನರು ಇಲ್ಲಿಗೆ ಬರುತ್ತಾರೆ. ಗ್ರಾಮದ ಎಲ್ಲ ಹಿಂದು-ಮುಸ್ಲಿಂ ಜನರು ಅನ್ಯೋನ್ಯವಾಗಿ ಮೊಹರಂ ಆಚರಿಸುತ್ತ ಬಂದಿದ್ದೇವೆ. ಕೋಮು ಸೌಹಾರ್ದತೆಗೆ ಮಾರನಬಸರಿ ಗ್ರಾಮ ಮಾದರಿಯಾಗಿದೆ.
    | ಡಾ. ಶಿವಕುಮಾರಸ್ವಾಮಿ ಕಂಬಾಳಿಹಿರೇಮಠ, ಧರ್ವಧಿಕಾರಿಗಳು ಶ್ರೀಕ್ಷೇತ್ರ ಸಿದ್ದನಕೊಳ್ಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts