More

    ಭಾರಿ ಸಂಪತ್ತಿನ ದಾಖಲೆ ಪತ್ತೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಅಕ್ರಮ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ಬೆಂಗಳೂರು ವಲಯ ಕಚೇರಿಯ ಸಹಾಯಕ ಕಾರ್ಯದರ್ಶಿ ಹುಚ್ಚಪ್ಪ ಅಲಿಯಾಸ್ ಹರೀಶ ಕಾಮಣ್ಣ ಹಳಪೇಟಿ ಅವರ ಬೆಂಗಳೂರು ಹಾಗೂ ಹುಬ್ಬಳ್ಳಿಯ ನಿವಾಸಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ತಂಡ ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿದೆ. ಕೋಟ್ಯಂತರ ರೂ. ಮೌಲ್ಯದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.

    ಎಸಿಬಿ ಬೆಳಗಾವಿ ಉತ್ತರ ವಲಯ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ನೇತೃತ್ವದ 10ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಯನ್ನೊಳಗೊಂಡ ತಂಡ ಬೆಳ್ಳಂಬೆಳಗ್ಗೆ ಇಲ್ಲಿನ ಹೆಗ್ಗೇರಿಯ ಕೋಟಿಲಿಂಗನಗರ ಶಂಭಾಗಿ ಲೇಔಟ್​ನ ಹರಿಲಕ್ಷ್ಮೀ ನಿಲಯದ ಮೇಲೆ ದಾಳಿ ನಡೆಸಿತು. ಮಧ್ಯಾಹ್ನದ ಊಟವನ್ನೂ ಹೊರಗಿನಿಂದಲೇ ತರಿಸಿಕೊಂಡ ತಂಡ ಸಂಜೆವರೆಗೆ ಶೋಧ ಕಾರ್ಯಾಚರಣೆ ನಡೆಸಿತು.

    ಎಸಿಬಿ ಧಾರವಾಡ ಕಚೇರಿ ಡಿವೈಎಸ್​ಪಿ ಮಂಜುನಾಥ ಗಂಗಲ್, ಇನ್ಸ್​ಪೆಕ್ಟರ್ ಬಿ.ಎ. ಜಾಧವ, ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಹರೀಶ ಹಳಪೇಟಿ ತನಿಖೆಗೆ ಸಹಕರಿಸುತ್ತಿರುವುದರಿಂದ ಎಸಿಬಿ ಅಧಿಕಾರಿಗಳು ಬಂಧಿಸಿಲ್ಲ. ಹಳಪೇಟಿಗೆ ಸದ್ಯ ಮಾಸಿಕ 82 ಸಾವಿರ ರೂ. ವೇತನ ಇದೆ. ಬರುವ ಫೆಬ್ರುವರಿಗೆ ನಿವೃತ್ತರಾಗಲಿದ್ದಾರೆ. ಈ ಹಿಂದೆ ಧಾರವಾಡ, ಬೆಳಗಾವಿಯಲ್ಲಿ ಸಹ ಕಾರ್ಯ ನಿರ್ವಹಿಸಿದ್ದರು.

    12 ಸೈಟು, 15 ಬ್ಯಾಂಕ್ ಅಕೌಂಟ್: ಎಸಿಬಿ ಅಧಿಕಾರಿಗಳು ಹರೀಶ ಹಳಪೇಟಿ ಅವರ ಮನೆಯಲ್ಲಿ 75,000 ರೂ. ನಗದು, 250 ಗ್ರಾಂ ಚಿನ್ನಾಭರಣ, ಅರ್ಧ ಕೆ.ಜಿ. ಬೆಳ್ಳಿ ವಶಪಡಿಸಿಕೊಂಡಿದ್ದಾರೆ. ಹುಬ್ಬಳ್ಳಿಯ ಶಂಭಾಗಿ ಲೇಔಟ್​ನ ಎರಡು ಕಟ್ಟಡಗಳಲ್ಲಿ ನಾಲ್ಕು ಮನೆಗಳನ್ನು ನಿರ್ವಿುಸಿದ್ದು, ಒಂದು ಮನೆಯಲ್ಲಿ ಹರೀಶ ಕುಟುಂಬ ವಾಸವಾಗಿದೆ. ಮೂರು ಮನೆಗಳನ್ನು ಬಾಡಿಗೆ ಕೊಡಲಾಗಿದೆ. ಹುಬ್ಬಳ್ಳಿ, ಬೆಂಗಳೂರು, ತುಮಕೂರು ಸೇರಿ 12 ನಿವೇಶನಗಳ ದಾಖಲೆಗಳು ಲಭ್ಯವಾಗಿವೆ. 15 ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದು, ಅವುಗಳಲ್ಲಿ ಎಷ್ಟೆಷ್ಟು ಹಣ ಇದೆ ಎಂಬ ಕುರಿತು ಎಸಿಬಿ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts