More

    ಭವಿಷ್ಯದ ಭದ್ರತೆಗೆ ಪರಿಸರವೇ ಬುನಾದಿ

    ಶಿಡ್ಲಘಟ್ಟ : ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದಲಾದರೂ ಪರಿಸರ ಉಳಿಸಿ, ಬೆಳೆಸಬೇಕಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

    ತಾತಹಳ್ಳಿಯಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಅರಣ್ಯ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಿಡ ನೆಡುವುದು, ಮಳೆನೀರು ಕೊಯ್ಲು, ಪ್ಲಾಸ್ಟಿಕ್ ನಿಷೇಧ, ಜಲಮೂಲಗಳ ಮರುಪೂರಣ ಮಾಡುವ ಮೂಲಕ ಪರಿಸರವನ್ನು ಮತ್ತಷ್ಟು ಉತ್ತಮಗೊಳಿಸಬೇಕು ಎಂದರು.

    ಶಿಡ್ಲಘಟ್ಟ ತಾಲೂಕು ವ್ಯಾಪ್ತಿಯ ನೂರಾರು ಎಕರೆ ಜಮೀನಿನಲ್ಲಿ ಅರಣ್ಯ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಯೋಜನೆ ಯಶಸ್ವಿಗೊಳಿಸಬೇಕು. ರೈತರು ನರೇಗಾ ಯೋಜನೆ ಸದುಪಯೋಗಪಡಿಸಿಕೊಳ್ಳುವುದರ ಜತೆಗೆ ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

    ಸ್ವಚ್ಛತೆ ಮತ್ತು ಪರಿಸರ ಕಾಳಜಿ ಕುರಿತು ಜಿಲ್ಲಾಧಿಕಾರಿ ಆರ್.ಲತಾ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲೆಯ ಜೀವವೈವಿಧ್ಯವನ್ನು ಬಿಂಬಿಸುವ ಅರಣ್ಯ ಯೋಜನೆಯ ಬಗ್ಗೆ ಮಾಹಿತಿ ನೀಡುವ ‘‘ನಮ್ಮ ಚಿಕ್ಕಬಳ್ಳಾಪುರ – ಹಸಿರು ಚಿಕ್ಕಬಳ್ಳಾಪುರ ಮಾಡೋಣ’ ಎಂಬ ವಿಡಿಯೋವನ್ನು ಸಚಿವರು ಬಿಡುಗಡೆ ಮಾಡಿದರು. ‘‘ಚಿಗುರು ಚಿಂತನೆ’ ಎಂಬ ಸ್ಪರ್ಧೆಯ ಭಿತ್ತಿಪತ್ರ ಅನಾವರಣ ಮಾಡಲಾಯಿತು.

    ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ೌಜೀಯಾ ತರನ್ನುಮ್, ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಅಪರ ಜಿಲ್ಲಾಧಿಕಾರಿ ಆರತಿ ಆನಂದ್, ಸದಸ್ಯರಾದ ಬಂಕ್ ಮುನಿಯಪ್ಪ, ತನುಜಾ ರಘು, ರಾಜಾಕಾಂತ್, ಮುನೇಗೌಡ, ನರಸಿಂಹಮೂರ್ತಿ, ತಾಪಂ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷೆ ಮುನಿನರಸಮ್ಮ, ಸದಸ್ಯ ಕೆ.ಎಂ.ಶ್ರೀನಿವಾಸ್, ಇಒ ಶಿವಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಎಸಿಎಫ್ ಶ್ರೀಧರ್, ಆರ್‌ಎಫ್‌ಒ ಎಚ್.ಎಸ್.ಶ್ರೀಲಕ್ಷ್ಮಿ ಇತರರಿದ್ದರು.

    ಪ್ರಶಸ್ತಿ ಪ್ರಮಾಣ ಪತ್ರ: ವಿಶೇಷ ಸಾಧನೆ ಮಾಡಿರುವ ಅರಣ್ಯ ವೀಕ್ಷಕರಾದ ನಂಜರೆಡ್ಡಿ, ಸುಬ್ಬಾರೆಡ್ಡಿ, ಶ್ರೀನಿವಾಸ್, ಕೃಷ್ಣಪ್ಪ, ಕೆ.ಶ್ರೀನಿವಾಸ್, ಶಿವಪ್ಪ, ನರಸಿಂಹರೆಡ್ಡಿ, ದೇವರಾಜ್, ಶ್ರೀರಾಮಪ್ಪ, ಖಾದರ್ ಪಾಷ, ತಿಮ್ಮರಾಯಪ್ಪ ಅವರಿಗೆ ಇಲಾಖೆಯಿಂದ ಹಾಗೂ ಅತ್ಯುತ್ತಮ ಅರಣ್ಯೀಕರಣ ಸೇವೆಗಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಆರ್‌ಎಫ್‌ಒ ಬಿ.ಜೆ.ಪೂರ್ಣಿಕರಾಣಿ, ಪಿಡಿಒ ಶ್ರೀನಿವಾಸ್, ನೈನಾ ನಿಖತ್ ಆರ, ನಾರಾಯಣಸ್ವಾಮಿ, ಅಬೂಬಕರ್ ಸಿಸ್ಸಿಕಿ, ಇಒ ಶಿವಕುಮಾರ್ ಅವರಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

    ಪರಿಹಾರ ಚೆಕ್ ವಿತರಣೆ: ಲಾಕ್‌ಡೌನ್‌ನಿಂದ ತೊಂದರೆಗೊಳಗಾದ ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 25 ಸಾವಿರ ರೂ.ಗಳಂತೆ ಪರಿಹಾರಧನದ ಚೆಕ್‌ನ್ನು ಸಾಂಕೇತಿಕವಾಗಿ ಕೆಲವರಿಗೆ ನೀಡಲಾಯಿತು. ಪರಿಹಾರಕ್ಕಾಗಿ ಜಿಲ್ಲೆಯಾದ್ಯಂತ ಒಟ್ಟು 6 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕ ರಮೇಶ್ ತಿಳಿಸಿದರು.

    ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ: ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುವುದು ದೊಡ್ಡ ವಿಚಾರವಲ್ಲ. ಕಾನೂನು, ನಿಯಮ, ನಿಬಂಧನೆಗಳನ್ನು ಜನಪ್ರತಿನಿಧಿಗಳು ಪಾಲಿಸಬೇಕು. ಯಾರೇ ಆಗಲಿ ರಾಜಕೀಯವಾಗಲಿ ಇನ್ನಾವುದೇ ಸಭೆಯೇ ಆಗಲಿ ಪರಸ್ಪರ ಅಂತರ ಕಾಯ್ದುಕೊಳ್ಳದೇ ಹೋದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಚಿವ ಡಾ.ಕೆ.ಸುಧಾಕರ್ ಸೂಚಿಸಿದರು.

    ಶಿಡ್ಲಘಟ್ಟ ಶಾಸಕ ಗೈರು: ಕಾರ್ಯಕ್ರಮಕ್ಕೆ ಬರುತ್ತಿದ್ದ ಶಾಸಕ ವಿ.ಮುನಿಯಪ್ಪ ಮಾರ್ಗ ಮಧ್ಯೆಯೇ ವಾಪಸಾದರು. ಶಿಷ್ಟಾಚಾರದಂತೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ವೇದಿಕೆ ಕಾರ್ಯಕ್ರಮ ನಡೆಯುವ ಸ್ಥಳದ ಬಗ್ಗೆ ಮಾಹಿತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಇತ್ತ ಸಚಿವರನ್ನು ಪ್ರಶ್ನಿಸಿದರೆ, ಶಿಷ್ಟಾಚಾರದಂತೆ ಶಾಸಕರಿಗೆ ಆಮಂತ್ರಣ ನೀಡಲಾಗಿದೆ. ನಾನೂ ಶಾಸಕನಾಗಿದ್ದಾಗ ಈ ರೀತಿಯ ಕಾರ್ಯಕ್ರಮಕ್ಕೆ ಯಾರೇ ಮಂತ್ರಿಯಾಗಿರಲಿ ಕಾರ್ಡ್ ಬಂದರೆ ಸಾಕು ಭಾಗವಹಿಸುತ್ತಿದ್ದೆ. ಕಾರ್ಯಕ್ರಮಕ್ಕೆ ಬರುವುದು ಬಿಡುವುದು ಅವರ ವಿವೇಚನೆಗೆ ಬಿಟ್ಟಿದ್ದು. ಬರದಿರುವುದು ನೆಪವಷ್ಟೇ ಎಂದು ಪ್ರತಿಕ್ರಿಯಿಸಿದರು. ಪಕ್ಷವನ್ನು ಪರಿಗಣನೆಗೆ ತೆಗೆದುಕೊಳ್ಳದೇ ಕಾರ್ಯಕ್ರಮವನ್ನು ರೂಪಿಸಿದ್ದೇವೆ. ಶಿಡ್ಲಘಟ್ಟ ತಾಲೂಕಿನಲ್ಲಿ ನೂರಾರು ಎಕರೆಯಲ್ಲಿರುವ ನೀಲಗಿರಿ ತೆಗೆದು ವನ ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಅವರು ಹಿರಿಯರು, ಇಂಥ ಕಾರ್ಯಕ್ರಮವನ್ನು ಅವರೇ ಖುದ್ದಾಗಿ ಮುಂದೆ ನಿಂತು ನಡೆಸಬೇಕಿತ್ತು’ ಎಂದು ಹೇಳಿದರು.

    ರೈತ ಮುಖಂಡರಿಂದ ಮನವಿ: ಎಚ್.ಎನ್.ವ್ಯಾಲಿ ಯೋಜನೆಯಡಿ ನೀರು ತುಂಬಿಸಲಿರುವ ತಾಲೂಕಿನ 9 ಕೆರೆಗಳ ರಾಜಕಾಲುವೆ ಒತ್ತುವರಿ ತೆರವುಗೊಳಿಸುವುದೂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ (ಪುಟ್ಟಣ್ಣಯ್ಯ ಬಣ) ಪದಾಧಿಕಾರಿಗಳು ಸಚಿವ ಡಾ ಕೆ.ಸುಧಾಕರ್‌ಗೆ ಮನವಿ ಸಲ್ಲಿಸಿದರು. ಕೆರೆಯಲ್ಲಿ ಬೆಳೆದಿರುವ ಜಾಲಿ ಮರಗಳನ್ನು ತೆರವುಗೊಳಿಸುವಲ್ಲಿ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದ್ದು ಅರ್ಧಂಬರ್ಧ ಕೆಲಸ ಮಾಡಿದೆ. ಹಾಗಾಗಿ ತಾವು ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಕೆರೆಯ ಸುತ್ತಲೂ ಹಣ್ಣು ಬಿಡುವ ಗಿಡ ಮರಗಳನ್ನು ಬೆಳೆಸಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts