More

    ಭವನಕ್ಕೆ 5 ಕೋಟಿ ರೂ. ಬಿಡುಗಡೆಗೆ ಆಗ್ರಹ -ಶಿಳ್ಳೇಕ್ಯಾತರ ಅಭಿವೃದ್ಧಿ ಸಂಘದ ಪ್ರತಿಭಟನೆ

    ದಾವಣಗೆರೆ: ದಾವಣಗೆರೆಯಲ್ಲಿ ಅಲೆಮಾರಿ ಶಿಳ್ಳೇಕ್ಯಾತರ ಸಮುದಾಯ ಭವನಕ್ಕೆ ಕನಿಷ್ಠ 5 ಕೋಟಿ ರೂ. ಬಿಡುಗಡೆ ಮಾಡಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಾವಣಗೆರೆ ಜಿಲ್ಲಾ ಶಿಳ್ಳೇಕ್ಯಾತರ ಅಭಿವೃದ್ಧಿ ಸಂಘದಡಿ ಸಮಾಜದವರು ಸೋಮವಾರ ಪ್ರತಿಭಟನೆ ನಡೆಸಿದರು.
    ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದ ಬಳಿಕ ಎಡಿಸಿ ಪಿ.ಎನ್.ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು.
    ಚನ್ನಗಿರಿ ತಾಲೂಕಿನ ಕ್ಯಾರೆಕಟ್ಟೆ ಗ್ರಾಮದಲ್ಲಿ ವಾಸವಿರುವ 55 ಕುಟುಂಬಗಳಿಗೆ 5 ಎಕರೆ ಜಮೀನಿನಲ್ಲಿ ನಿವೇಶನ ಕಲ್ಪಿಸಬೇಕು. ರಾಜ್ಯದಲ್ಲಿ ಎಸ್ಸಿ-ಎಸ್ಟಿ , ಒಬಿಸಿ ಅಲೆಮಾರಿಗಳಿಗೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಸಾಧಿಸಲು ಉಂಟಾಗಿರುವ ಜಾತಿ ಪ್ರಮಾಣಪತ್ರದ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.
    ಸಾಂಸ್ಕೃತಿಕ ಕಲಾಪರಂಪರೆ ಉಳಿಸಿಕೊಳ್ಳಲು ಶಾಶ್ವತ ಅಲೆಮಾರಿ ಆಯೋಗ ನಿರ್ಮಿಸಬೇಕು. ಅಲೆಮಾರಿಗಳಿಗೆ ವಸತಿ ನಿರ್ಮಿಸಿಕೊಳ್ಳಲು ನೀಡಲಾಗುತ್ತಿದ್ದ ಅನುದಾನ ರದ್ದುಗೊಳಿಸಿದ ಆದೇಶವನ್ನು ಸರ್ಕಾರ ಹಿಂಪಡೆದು, ಕನಿಷ್ಠ 5 ಲಕ್ಷ ರೂ.ವರೆಗೆ ಅನುದಾನ ಕಲ್ಪಿಸಬೇಕು. ಅಲೆಮಾರಿ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಅಲೆಮಾರಿ ನಿಗಮಕ್ಕೆ 1000 ಕೋಟಿ ರೂ. ಅನುದಾನ ನೀಡುವ ಬಗ್ಗೆ ಭರವಸೆ ನೀಡಿದ್ದು ಈ ಬಜೆಟ್‌ನಲ್ಲಿ ಅದನ್ನು ಕಾರ್ಯರೂಪಕ್ಕೆ ತಂದು ಮಂಜೂರು ಮಾಡಬೇಕು. ಹರಿಯಾಣ, ಮಧ್ಯಪ್ರದೇಶ ಇತ್ಯಾದಿ ಕಡೆಗಳಲ್ಲಿ ಜಾರಿ ಇರುವಂತೆ ಅಲೆಮಾರಿ ಸಮುದಾಯವರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಜಿ.ಎಚ್.ಮಂಜುನಾಥ್, ಸುಭಾಷ್ ವೈ. ಚವ್ಹಾಣ್, ಎಸ್. ಮಂಜುನಾಥ್, ಎಚ್. ಶಿವರಾಜ್, ರಾಮಣ್ಣ, ಲಕ್ಷ್ಮಿ ನರಸಿಂಹ, ಮೃತ್ಯುಂಜಯ, ಎ.ಮಂಜುನಾಥ್, ಹೇಮಣ್ಣ, ಕೆ. ಆರ್. ಶ್ರೀನಿವಾಸ್, ಎಚ್. ದುಗ್ಗೇಶ್, ಅನಸೂಯಮ್ಮ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts