More

    ಭದ್ರಾ ಮೇಲ್ದಂಡೆ ತ್ವರಿತಕ್ಕೆ ಆಗ್ರಹ


    ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಸಂಪನ್ಮೂಲದ ಕೊರತೆ ಇದ್ದರೆ ಕೃಷ್ಣ ಜಲಭಾಗ್ಯ ಮಾದರಿ ‘ಭದ್ರೆ’ ಬಾಂಡ್ ಬಿಡುಗಡೆ ಮಾಡಿ ಆ ಮೂಲಕ ಸಂಪನ್ಮೂಲ ಕ್ರೋಢೀಕರಿಸುವಂತೆ ರಾಜ್ಯ ಸರ್ಕಾರಕ್ಕೆ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಲಹೆ ನೀಡಿದೆ.
    ಈ ಸಂಬಂಧ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಶುಕ್ರವಾರ ಹೇಳಿಕೆ ನೀಡಿದ್ದು, ಬೇರೆಡೆ ಸಾಲ ಮಾಡಿದರೆ ಬಡ್ಡಿ ಕಟ್ಟಬೇಕಾಗುತ್ತದೆ. ಬಾಂಡ್ ಬಿಡುಗಡೆ ಮಾಡಿದರೆ ಬಯಲುಸೀಮೆ ಉದ್ಯಮಿಗಳು, ಜನರು ಅದನ್ನು ಖರೀದಿಸಿ ಯೋಜನೆ ಸಾಕಾರಕ್ಕೆ ಸಹಕರಿಸುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
    ಅಬ್ಬಿನಹೊಳಲು ಭೂ ಸ್ವಾದೀನ ಪ್ರಕ್ರಿಯೆಗೆ ಇದ್ದ ಅಡ್ಡಿ ಸರಿಯಾಗಿದ್ದು, ಇಷ್ಟಕ್ಕೆ ಸಮಸ್ಯೆ ಬಗೆಹರಿಸಿದ್ದೇವೆ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಹೆಮ್ಮೆ ಪಟ್ಟುಕೊಳ್ಳದೆ ಬಾಕಿ ಕಾಮಗಾರಿಗಳೆಡೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.
    ಮೊದಲ ಹಂತದಲ್ಲಿ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17.40 ಟಿಎಂಸಿ ಅಡಿ ನೀರು ಲಿಫ್ಟ್ ಮಾಡುವ ಪ್ಯಾಕೇಜ್ 1ರ ಕಾಮಗಾರಿ ಅನುದಾನ ಕೊರತೆಯಿಂದ ನಾಲ್ಕಾರು ವರ್ಷಗಳಿಂದ ಕುಂಟುತ್ತಾ ಸಾಗಿದೆ. ಪರಿಸರ ಮತ್ತು ಅರಣ್ಯ ಇಲಾಖೆ ಕ್ಲಿಯರೆನ್ಸ್ ಬಾಕಿಯೂ ಇದಕ್ಕೆ ಕಾರಣವಾಗಿದೆ ಎಂದಿದ್ದಾರೆ.
    ಯೋಜನೆಗೆ, ಅತಿ ಹೆಚ್ಚು ನೀರಿನ ಪಾಲು ತುಂಗಾದಿಂದ ಬರಬೇಕಿದ್ದು, ಭದ್ರಾ ಜಲಾಶಯದಿಂದ ಅಜ್ಜಂಪುರದ ಸುರಂಗದವರೆಗೆ ನೀರು ಲಿಫ್ಟ್ ಮಾಡುವ ಮತ್ತು ಅಜ್ಜಂಪುರದ ಸುರಂಗ ವಿವಿ ಸಾಗರಕ್ಕೆ ನೀರು ಹರಿಸಲಾಗಿದೆ ಎಂದು ಅಧಿಕಾರಿಗಳು ಭರವಸೆ ಮೂಡಿಸಿದ್ದಾರೆ. ಆದರೆ, ಭದ್ರಾ ಮೇಲ್ದಂಡೆ ಕಾಮಗಾರಿ ಇದೊಂದೇ ಉದ್ದೇಶ ಹೊಂದಿಲ್ಲವೆಂಬ ಸಂಗತಿಯನ್ನು ಸರ್ಕಾರ ಅರಿಯಬೇಕಿದೆ ಎಂದು ಹೇಳಿದ್ದಾರೆ.
    12 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಂಡಿರುವ 1682 ಕೋಟಿ ರೂ. ವೆಚ್ಚದ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಅರೆಬರೆಯಾಗಿವೆ. ತುಮಕೂರು ಶಾಖಾ ಕಾಲುವೆ ಐದು ಪ್ಯಾಕೇಜ್ ಕಾಮಗಾರಿಗಳ ಸರ್ವೇ ಬಾಕಿ ಇದೆ. ಜಗಳೂರು ತಾಲೂಕಿನ 13,200 ಹೆಕ್ಟೇರ್‌ಗೆ ಸೂಕ್ಷ್ಮ ನೀರಾವರಿ ಕಲ್ಪಿಸುವ ಹಾಗೂ 9 ಕೆರೆಗಳ ತುಂಬಿಸುವ 1568 ಕೋಟಿ ರೂ. ವೆಚ್ಚದ 2 ಪ್ಯಾಕೇಜ್‌ಗಳ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳ ಪರಿಸ್ಥಿತಿ ಕೂಡ ಹೆಚ್ಚು ಕಡಿಮೆ ಇದೆ ಆಗಿದೆ.
    ಭದ್ರಾ ಮೇಲ್ದಂಡೆಗೆ ಬೇಕಿರುವ 8,825 ಎಕರೆ ಭೂಮಿ ಪೈಕಿ ಈವರೆಗೆ 5786 ಎಕರೆ ಸ್ವಾಧೀನವಾಗಿದೆ. ಭೂ ಸ್ವಾಧೀನಕ್ಕೆ ಈವರೆಗೆ 914 ಕೋಟಿ ರೂ. ಬಿಡುಗಡೆಯಾಗಿದ್ದು, ಇನ್ನೂ 565 ಕೋಟಿ ರೂ. ಅಗತ್ಯವಿದೆ. ಭೂ ಸ್ವಾಧೀನಕ್ಕೆ ಹಣಕಾಸು ಮುಗ್ಗಟ್ಟು ತೋರಿಸುವ ಸರ್ಕಾರ ಧೋರಣೆಯಿಂದ ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆಗಳು ಕ್ಷೀಣಿಸಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
    ಯೋಜನೆಗೆ ಈವರೆಗೂ 9112 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಇನ್ನೂ 12,351 ಕೋಟಿ ರೂ. ಅಗತ್ಯವಿದೆ. ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತ ತನ್ನ ಜವಾಬ್ದಾರಿ ಮರೆತಿದೆ. ಕೇಂದ್ರ ಸರ್ಕಾರ 5300 ಕೋಟಿ ರೂ. ಕೊಟ್ಟರೂ 7 ಸಾವಿರ ಕೋಟಿ ರೂ. ಗಳನ್ನು ರಾಜ್ಯ ಸರ್ಕಾರ ಒದಗಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
    ತುಂಗಾ ನದಿ ಜಲಾವೃತ ಪ್ರದೇಶದಲ್ಲಿ 11 ಟವರ್‌ಗಳ ಎಚ್‌ಟಿ ಲೈನ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಕ್ಲಿಯರೆನ್ಸ್ ನೀಡಿಲ್ಲ. ಈ ಎಲ್ಲ ಸಮಸ್ಯೆಗಳಿದ್ದರೂ ರಾಜ್ಯ ಸರ್ಕಾರ ಯೋಜನೆಯನ್ನು ಹಗುರವಾಗಿ ತೆಗೆದುಕೊಂಡಿದೆ. ಇಲಾಖೆಗಳ ನಡುವೆ ಸಮನ್ವಯವಿಲ್ಲವಾಗಿದೆ. ಆದ್ದರಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥ ಪಡಿಸಬೇಕು. ಸರ್ಕಾರ ಎತ್ತಿನ ಹೊಳೆಗೆ ತೋರಿಸುವ ಆಸಕ್ತಿಯನ್ನೂ ಭದ್ರಾಕ್ಕೂ ಪ್ರದರ್ಶಿಸಬೇಕು ಎಂದು ಲಿಂಗಾರೆಡ್ಡಿ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts