More

    ಭದ್ರಾ ಕಾಮಗಾರಿಗಿದ್ದ ತೊಡಕು ನಿವಾರಣೆ

    ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಅಡ್ಡಿಯಾಗಿದ್ದ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಅಬ್ಬಿನಹೊಳಲು ಬಳಿ ಭೂಸ್ವಾಧೀನ ಪ್ರಕ್ರಿಯೆ ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲಿ ಗುರುವಾರ ಬೆಳಗ್ಗೆ ಆರಂಭವಾಯಿತು.
    ಭಾರೀ ಬಿಗಿ ಪೊಲೀಸ್ ಭದ್ರತೆ, ಆತ್ಮಾಹುತಿ ತಡೆ ದಳ ಸೇರಿ ಅಗತ್ಯ ಸಿದ್ಧತೆಗಳೊಂದಿಗೆ ಭೂಮಿ ಸ್ವಾಧೀನ ಪ್ರಕ್ರಿಯೆ ಹಾಗೂ ಕಾಲುವೆ ನಿರ್ಮಾಣದ ಕಾಮಗಾರಿ ಪ್ರಾರಂಭವಾಯಿತು. ಇದರಿಂದಾಗಿ ಯೋಜನೆ ಅನುಷ್ಠಾನಕ್ಕೆ ಎಂಟು ವರ್ಷಗಳಿಂದ ಅಡ್ಡಿಯಾಗಿದ್ದ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ದೊರೆಯಿತು.
    ಭೂ ಸ್ವಾಧೀನಕ್ಕೆ ಕೋರಿ ಜಲಸಂಪನ್ಮೂಲ ಇಲಾಖೆ ಜಿಲ್ಲಾಡಳಿತಕ್ಕೆ ಕೋರಿಕೆ ಸಲ್ಲಿಸಿತ್ತು. ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಕೆ.ಎಂ.ಶಿವಪ್ರಕಾಶ್ ನೇತೃತ್ವದಲ್ಲಿ ಭೂಮಿ ವಶ ಪಡೆಯವ ಕಾರ್ಯಾಚರಣೆ ಗುರುವಾರ ಪ್ರಾರಂಭವಾಯಿತು. ಅಡಿಷನಲ್ ಎಸ್‌ಪಿ ಕೃಷ್ಣಮೂರ್ತಿ, ಎಸಿ ಕಾಂತರಾಜ್ ಮತ್ತಿತರ ಅಧಿಕಾರಿಗಳು ಇದ್ದರು.
    ಭೂಮಿ ಪರಿಹಾರ ವ್ಯತ್ಯಾಸದ ಹಿನ್ನೆಲೆಯಲ್ಲಿ 33 ರೈತರು ಭೂಮಿ ಬಿಟ್ಟುಕೊಡಲು ನಿರಾಕರಿಸಿದ್ದರು. ಇದರಿಂದಾಗಿ 1.7 ಕಿ.ಮೀ. ಕಾಲುವೆ ಕಾಮಗಾರಿ ಸ್ಥಗಿತಗೊಂಡಿತ್ತು.
    ಈ ಹಿನ್ನೆಲೆಯಲ್ಲಿ ಮಾ.3ರಂದು ಸ್ಥಳಕ್ಕೆ ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರೈತರೊಂದಿಗೆ ಮಾತುಕತೆ ನಡೆಸಿದ್ದರು. ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ, ಕಾನೂನು ಚೌಕಟ್ಟಿನಲ್ಲಿಯೇ ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಜತೆಗೆ ಕಾಲುವೆ ನಿರ್ಮಾಣಕ್ಕೆ ಭೂಮಿ ಬಿಟ್ಟು ಕೊಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವೆಂಬ ಎಚ್ಚರಿಕೆ ಸಂದೇಶ ರವಾನಿಸಿದ್ದರು.

    *ಕೋಟ್
    ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾಲುವೆ ನಿರ್ಮಾಣ ಕಾಮಗಾರಿ ಗುರುವಾರ ಬೆಳಗ್ಗೆ ಪ್ರಾರಂಭಗೊಂಡಿದೆ. ಉಪಮುಖ್ಯಮಂತ್ರಿ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ, ಕಾಮಗಾರಿಗೆ ಮೊದಲು ಅವಕಾಶ ಮಾಡಿಕೊಡಿ ಎಂದು ರೈತರಲ್ಲಿ ಕೋರಿದ್ದರು. ಶೀಘ್ರದಲ್ಲೇ ಕಂದಾಯ ಅಧಿಕಾರಿಗಳು ಒಳಗೊಂಡಂತೆ ತಮ್ಮೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸುವುದಾಗಿ ಹೇಳಿದ್ದರು. ಆದ್ದರಿಂದ ಮೂರ‌್ನಾಲ್ಕು ದಿನದೊಳಗೆ ಡಿಸಿಎಂ ನೇತೃತ್ವದಲ್ಲಿ ಸಭೆ ನಡೆಸಬೇಕೆಂದು ರೈತರು ಬೇಡಿಕೆ ಮುಂದಿಟ್ಟಿದ್ದಾರೆ.
    ಕೆ.ಎಂ.ಶಿವಪ್ರಕಾಶ್, ಇಇ, ಭದ್ರಾ ಮೇಲ್ದಂಡೆ ಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts