More

    ಭಟ್ಕಳದಲ್ಲಿ ಹೆಲ್ತ್ ಎಮರ್ಜೆನ್ಸಿ

    ಕಾರವಾರ: ಭಟ್ಕಳದಲ್ಲಿ ಹೆಲ್ತ್ ಎಮರ್ಜೆನ್ಸಿ ಘೊಷಿಸಲಾಗಿದೆ. ಭಟ್ಕಳ ಶಹರ, ಜಾಲಿ ಪಪಂ ಶಿರಾಲಿ, ಹೆಬಳೆ, ಮಾವಿನಕುರ್ವೆ, ಮುಂಡಳ್ಳಿ, ಯಲ್ವಡಿಕವೂರ್ ಮತ್ತು ಮುಟ್ಟಳ್ಳಿ ಗ್ರಾಪಂ ವ್ಯಾಪ್ತಿಗೆ ಇದು ಅನ್ವಯಿಸಲಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಭಟ್ಕಳದಲ್ಲಿ ಹೊರ ದೇಶಗಳಿಂದ ಬಂದ ಸಾಕಷ್ಟು ಜನ ಇರುವುದರಿಂದ ಮತ್ತು ಕೆಲವರಲ್ಲಿ ರೋಗ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ , ರೋಗ ಸಾರ್ವಜನಿಕವಾಗಿ ಪಸರಿಸುವುದನ್ನು ತಡೆಯಲು ಈ ಕ್ರಮ ವಹಿಸಲಾಗಿದೆ. ಮೆಡಿಕಲ್ ಎಮರ್ಜೆನ್ಸಿ ಎಂದರೆ ಸಾಮಾನ್ಯ ಶಟ್​ಡೌನ್ಕ್ಕಿಂತ ಹೆಚ್ಚು ಬಿಗಿ ಕ್ರಮ ವಹಿಸಲಾಗುವುದು. ಮೆಡಿಕಲ್ ಎಮರ್ಜೆನ್ಸಿ ನಿಭಾಯಿಸುವ ಸಂಪೂರ್ಣ ಜವಾಬ್ದಾರಿಯನ್ನು ಭಟ್ಕಳ ಉಪವಿಭಾಗಾಧಿಕಾರಿ ಭರತ್ ಅವರಿಗೆ ನೀಡಲಾಗಿದೆ. ಅವರಿಗೆ ಸಹಾಯಕರಾಗಿ ಡಾ.ಶರದ್ ನಾಯಕ ಹಾಗೂ ಭಟ್ಕಳ ಡಿವೈಎಸ್​ಪಿ ಅವರನ್ನು ನಿಯೋಜಿಸಲಾಗಿದೆ ಎಂದರು.

    ಈ ಘೊಷಣೆಯಿಂದ ಅಲ್ಲಿನ ಉಪವಿಭಾಗಾಧಿಕಾರಿಗಳು ಯಾವುದೇ ತುರ್ತು ವೈದ್ಯಕೀಯ ಸಾಮಗ್ರಿ ಹಾಗೂ ವಸ್ತುಗಳನ್ನು ಖರೀದಿಸಲು ಹಣದ ಮಿತಿ ಇಲ್ಲ. ಟೆಂಡರ್ ಕರೆಯಬೇಕಿಲ್ಲ ಎಂದರು.

    ನೌಕಾ ಆಸ್ಪತ್ರೆಗೆ: ಕರೊನಾ ಖಚಿತವಾದ ಎಲ್ಲ ರೋಗಿಗಳನ್ನು ಕದಂಬ ನೌಕಾನೆಲೆಯ ಐಎನ್​ಎಸ್ ಪತಂಜಲಿ ಆಸ್ಪತೆಗೆ ಸ್ಥಳಾಂತರಿಸಲಾಗುವುದು. ಸದ್ಯ ಅಲ್ಲಿಗೆ ಮೂವರು ವೈದ್ಯರು ಹಾಗೂ 6 ವೈದ್ಯಕೀಯ ಸಿಬ್ಬಂದಿಯನ್ನು ಕಾಯಂ ಆಗಿ ನಿಯೋಜಿಸಬೇಕಿದೆ. ರಕ್ಷಣಾ ಇಲಾಖೆಯ ಕೇಂದ್ರ ಕಚೇರಿಯಿಂದ ಅನುಮತಿ ಬಂದ ತಕ್ಷಣ ಈ ಪ್ರಕ್ರಿಯೆ ನಡೆಸಲಾಗುವುದು. ಮುಂದಿನ ದಿನದಲ್ಲಿ ಎಲ್ಲ ಸೋಂಕಿತರನ್ನೂ ಅದೇ ಆಸ್ಪತ್ರೆಗೆ ರವಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್ ತಿಳಿಸಿದರು.

    ಸೋಂಕಿನ ಬಗ್ಗೆ ಅನುಮಾನವಿದ್ದು ಗಂಟಲು ದ್ರವದ ಮಾದರಿಯನ್ನು ಖಚಿತಪಡಿಸಿದ ಎಲ್ಲ ರೋಗಿಗಳನ್ನು ಮುರ್ಡೆಶ್ವರ ಆರ್​ಎನ್​ಎಸ್ ಆಸ್ಪತ್ರೆಗೆ ಸೇರಿಸಲಾಗುವುದು ಎಂದು ವಿವರಿಸಿದರು.

    ಕರ್ಫ್ಯೂ ನಿಯಮ ಮುರಿದರೆ ಗೃಹ ಬಂಧನ
    ಕರ್ಫ್ಯೂ ನಿಯಮಗಳನ್ನು ಮುರಿದವರ ಪಟ್ಟಿಯನ್ನು ಪೊಲೀಸ್ ಇಲಾಖೆ ಸಿದ್ಧಮಾಡಿದೆ. ಮತ್ತೆ ನಿಯಮ ಉಲ್ಲಂಘನೆ ಕಂಡುಬಂದರೆ ಅವರನ್ನು ಬಂಧಿಸಿ 21 ದಿನ ನೌಕಾನೆಲೆಯ ಗುಪ್ತ ಪ್ರದೇಶದಲ್ಲಿ ಗೃಹ ಬಂಧನದಲ್ಲಿ ಇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದರು.

    ತುರ್ತು ಇದ್ದರೆ ಕಫ್ಯೂ ಪಾಸ್ ಪಡೆಯಿರಿ
    ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದಲ್ಲಿ ಹಾಗೆ ಓಡಾಡುವವರಿಗೆ ಪೊಲೀಸ್ ಇಲಾಖೆಯಿಂದ ಕಾಲಮಿತಿಗೆ ಒಳಪಡಿಸಿ ಕರ್ಫ್ಯೂ ಪಾಸ್ ನೀಡಲಾಗುತ್ತಿದೆ. ಸಂಬಂಧಪಟ್ಟ ಪೊಲೀಸ್ ಠಾಣೆಗೆ ಭೇಟಿ ನೀಡಿ ಕರ್ಫ್ಯೂ ಪಾಸ್ ಪಡೆದುಕೊಳ್ಳಬೇಕು ಎಂದು ಎಸ್​ಪಿ ಶಿವ ಪ್ರಕಾಶ ದೇವರಾಜು ಕರೆ ನೀಡಿದರು.

    ಸ್ವಯಂ ಸೇವಕರ ಆರೋಗ್ಯ ತಪಾಸಣೆ ನಡೆಸಿ
    ಭಟ್ಕಳ:
    ಅಗತ್ಯ ವಸ್ತುಗಳ ಪೂರೈಕೆಗೆ ಸ್ವಯಂ ಸೇವಕರನ್ನು ನೇಮಕ ಮಾಡಿರುವ ಪ್ರಕ್ರಿಯೆ ಬಗ್ಗೆ ಜನರಿಂದ ಅಸಮಾಧಾನ ವ್ಯಕ್ತವಾಗಿದೆ. ಮೊದಲು ಅವರ ಆರೋಗ್ಯ ತಪಾಸಣೆ ನಡೆಸಿ ನಂತರ ಅವರಿಗೆ ಪಾಸ್ ನೀಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

    ಭಟ್ಕಳ ಲಾಕ್​ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ರಸ್ತೆಯಲ್ಲಿ ತಿರುಗಾಡಲು ನಿರ್ಬಂಧ ಹೇರಲಾಗಿದೆ. ದಿನನಿತ್ಯ ವಸ್ತುಗಳು, ಹಾಲು ಹಣ್ಣು, ತರಕಾರಿಗಳನ್ನು ಮನೆಮನೆಗೆ ತಲುಪಿಸಲು ತಾಲೂಕಾಡಳಿತ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಪತ್ರಿಕೆಯಲ್ಲಿ ಪ್ರಕಟಣೆ ನೀಡಿ ಸ್ವ ಇಚ್ಛೆಯಿಂದ ಕೆಲಸ ಮಾಡಲು ಆಸಕ್ತಿ ಇರುವ ಯುವಕರು ಸಂರ್ಪಸುವಂತೆ ಸಹಾಯವಾಣಿಯನ್ನು ಆರಂಭಿಸಿದ್ದರು. ಮನೆಯಲ್ಲಿ ಕುಳಿತು ಬೇಸತ್ತ ಕೆಲ ಯುವಕರು ತಾಲೂಕಾಡಳಿತದ ಪ್ರಕಟಣೆ ಕಂಡು ಕಾರ್ಡ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಪಾಸ್ ಪಡೆಯಲು ಬಂದವರ ತಪಾಸಣೆ ಮಾಡದೆ, ತಾಲೂಕಾಡಳಿತ ಪಾಸ್ ನೀಡುತ್ತಿರುವುದು ಭಟ್ಕಳದ ಜನತೆಯಲ್ಲಿ ಆತಂಕ ಮೂಡಿಸಿದೆ.

    ಸ್ಥಳೀಯ ಸಂಘಟನೆಯೊಂದರ ಶಿಫಾರಸ್ಸಿನಲ್ಲಿ ಪಾಸ್ ಪಡೆದ ವ್ಯಕ್ತಿಗಳು ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾರೆ. ಇಟಲಿಯಲ್ಲಿ ನೇಮಿಸಿದಂತೆ ವಾರ್ಡ್​ಗೊಂದರಂತೆ ಆಟೋ ನೇಮಿಸಿ, ಪೊಲೀಸ್ ಪರವಾನಗಿ ಪಡೆದು, ಸಮಯ ನಿಗದಿಪಡಿಸಿ ಮನೆಯಿಂದಲೇ ಓರ್ವ ಸದಸ್ಯನಿಗೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಿದರೆ ಉತ್ತಮ ಎಂಬ ಮಾತು ಕೇಳಿ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts