More

    ಭಕ್ತಿಗೆ ಒಲಿಯುವ ಮಂಗಳಕರ ಮಹಾದೇವ

    ಚಿತ್ರದುರ್ಗ: ಹರನಾಮ ಸ್ಮರಣೆಯೊಂದಿಗೆ ಕೋಟೆನಗರಿ ಸೇರಿ ಜಿಲ್ಲೆಯ ಹಲವು ಮಂದಿರ ಹಾಗೂ ಮನೆಗಳಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಭಕ್ತರು ಶುಕ್ರವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

    ನಗರದ ಅನೇಕ ಶಿವ ದೇಗುಲಗಳು ಸೇರಿ ಇತರೆಡೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಸೇವೆಗಳು ಮುಂಜಾನೆಯಿಂದಲೇ ನೆರವೇರಿದವು.

    ಮನೆಗಳಲ್ಲಿನ ಒಳಾಂಗಣ, ದೇವರ ಕೋಣೆಯನ್ನು ಶುಚಿಗೊಳಿಸಿ ಪೂಜೆಗಾಗಿ ಅನೇಕರು ಸಿದ್ಧತೆ ಮಾಡಿಕೊಂಡಿದ್ದರು. ಮುಂಭಾಗವನ್ನು ತಳಿರು, ತೋರಣಗಳಿಂದ ಸಿಂಗರಿಸಿದ್ದರು. ಮಹಿಳೆಯರು ವಿವಿಧ ವರ್ಣದ ರಂಗೋಲಿಗಳನ್ನು ಬಿಡಿಸಿದ್ದರು. ದೇವತಾ ಮೂರ್ತಿಗಳಿಗೆ ಅಭಿಷೇಕ ನೆರವೇರಿಸಿ ದೇಗುಲಗಳತ್ತ ತೆರಳಿದರು.

    ಕೆಲವೆಡೆ ಸಂಜೆಯ ನಂತರ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ರಾತ್ರಿ 12ರವರೆಗೂ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಪುನೀತರಾದರು. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿಕೊಂಡರು.

    ತಡರಾತ್ರಿ ಕೋಟೆಯನ್ನೇರಿದ ಸಾವಿರಾರು ಮಂದಿ ಅಲ್ಲಿನ ಪ್ರಮುಖ ದೇಗುಲಗಳಾದ ಹಿಂಡಬೇಶ್ವರ, ಸಂಪಿಗೆ ಸಿದ್ದೇಶ್ವರ, ಏಕನಾಥೇಶ್ವರಿ, ಬೆಟ್ಟದ ಗಣಪತಿ ದರ್ಶನ ಪಡೆದರು.

    ಆನೆಬಾಗಿಲು ಸಮೀಪದ ಪಾತಾಳ ಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಕೇದಾರನಾಥೇಶ್ವರ ಸ್ವಾಮಿ ದೇಗುಲ ಮಾದರಿ ಭಕ್ತರ ಗಮನ ಸೆಳೆಯಿತು. ವಾಸವಿ ಮಹಲ್‌ನ ಕನ್ಯಾಕಪರಮೇಶ್ವರಿ ದೇಗುಲದಲ್ಲಿನ ನಗರೇಶ್ವರ, ಜೋಗಿಮಟ್ಟಿ ರಸ್ತೆಯ ಕೂಡಲೀ ಶೃಂಗೇರಿ ಮಹಾಸಂಸ್ಥಾನ ಶಾಖಾಮಠದಲ್ಲಿನ ಚಂದ್ರಮೌಳೇಶ್ವರ ಸ್ವಾಮಿಗೆ ನಾಲ್ಕು ಯಾಮಗಳಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.

    ದೊಡ್ಡಪೇಟೆ ಕಂಬಳಿ ಬೀದಿಯ ಬೀರಗಲ್ಲೇಶ್ವರ ಸ್ವಾಮಿ ದೇಗುಲದಲ್ಲಿ ರಾತ್ರಿ ಇಡೀ ಭಜನೆ ನಡೆಯಿತು. ಶಿವ, ಮಹಾರುದ್ರ, ನೀಲಕಂಠ, ಮಂಜುನಾಥ, ಹರ ಹರ ಮಹಾದೇವ್ ಎಂದು ಭಕ್ತರು ಜಯಘೋಷ ಮೊಳಗಿಸಿದರು.

    ಜಟ್‌ಪಟ್ ನಗರ ಸಮೀಪದ ಮುಕ್ತಿನಾಥೇಶ್ವರಸ್ವಾಮಿ ದೇಗುಲದ ಮೇಲೆ ನಿರ್ಮಿಸಿರುವ 31 ಅಡಿ ಎತ್ತರದ ಧ್ಯಾನಮಗ್ನ ಶಿವನ ಪ್ರತಿಮೆ ಶಿವರಾತ್ರಿಯಂದು ಲೋಕಾರ್ಪಣೆಗೊಂಡಿತು. ಗರ್ಭಗುಡಿಯಲ್ಲಿನ ಮೂರ್ತಿಗೂ ವಿಶೇಷಾಲಂಕಾರ ಸೇವೆ ಜರುಗಿತು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಿಂದ ನಗರದ ಪ್ರಮುಖ ಮಾರ್ಗಗಳಲ್ಲಿ ದ್ವಾದಶ ಜ್ಯೋತಿರ್ಲಿಂಗ ಮೆರವಣಿಗೆ ಗಮನ ಸೆಳೆಯಿತು. ಮಧ್ಯಾಹ್ನದಿಂದ ಸಂಜೆವರೆಗೂ ಹಲವೆಡೆ ಸಂಚರಿಸಿತು.

    ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಬೆಳಗ್ಗೆ 11.30ರವರೆಗೂ ಸಾಮೂಹಿಕ ರುದ್ರಾಭಿಷೇಕ ಜರುಗಿತು. ಅನೇಕರು ಪಾಲ್ಗೊಂಡು ಮೂರ್ತಿಗೆ ಅಭಿಷೇಕ ನೆರವೇರಿಸಿದರು. ನಂತರ ವಿವಿಧ ಪುಷ್ಪಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ಅರ್ಚಕರು ವಿಶೇಷವಾಗಿ ಅಲಂಕರಿಸಿದ್ದರು.

    ಕೋಟೆ ರಸ್ತೆಯ ಗಾರೆಬಾಗಿಲು ಈಶ್ವರ, ಕರಿವರ್ತಿ ಈಶ್ವರ, ಮೈಲಾರ ಲಿಂಗೇಶ್ವರ, ಕೆಳಗೋಟೆಯ ಬೇಡರ ಕಣ್ಣಪ್ಪ, ಗಾರೆಹಟ್ಟಿಯ ಮಹಾಬಲೇಶ್ವರ, ಚಿಕ್ಕಪೇಟೆಯ ಮಲ್ಲಿಕಾರ್ಜುನಸ್ವಾಮಿ, ಉಜ್ಜಿನಮಠದ ರಸ್ತೆಯ ಉಮಾ ಮಹೇಶ್ವರ, ಕಾಶಿ ವಿಶ್ವೇಶ್ವರ, ಭೈರವೇಶ್ವರ, ವೀರಭದ್ರೇಶ್ವರ ಸೇರಿ ಹಲವು ದೇಗುಲಗಳಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.

    ನಗರದೇವತೆ ಬರಗೇರಮ್ಮ ದೇವಿಗೆ ಸೋಮನಾಥೇಶ್ವರ ಸ್ವಾಮಿ ಮಾದರಿಯಲ್ಲಿ ಅಲಂಕಾರ ನೆರವೇರಿತು. ಮಹಾರುದ್ರನ ದೇಗುಲಗಳು ಹೊರತುಪಡಿಸಿ ಉಚ್ಚಂಗಿಯಲ್ಲಮ್ಮ, ಕಣಿವೆಮಾರಮ್ಮ, ಕಾಳಿಕಮಠೇಶ್ವರಿ, ಗೌರಸಂದ್ರ ಮಾರಮ್ಮ ದೇಗುಲಗಳಲ್ಲೂ ಪೂಜೆಗಳು ನಡೆದವು. ಅನೇಕ ಸನ್ನಿಧಾನಗಳಿಗೆ ಸಾವಿರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts