More

    ಬ್ಯಾಂಕ್ ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆ

    ನರಗುಂದ: ರೈತರು ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಿರುವ ಕಡಲೆಯ ಹಣವನ್ನು ಪಟ್ಟಣದ ವಿವಿಧ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ನೀಡಲು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಹಿರೇಕೊಪ್ಪ ಗ್ರಾಮದ ರೈತರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಶುಕ್ರವಾರ ಕೆಲಕಾಲ ಆಕ್ರೋಶ ವ್ಯಕ್ತಪಡಿಸಿ, ತಹಸೀಲ್ದಾರ್ ಎ.ಎಚ್. ಮಹೇಂದ್ರ ಅವರಿಗೆ ಮನವಿ ಸಲ್ಲಿಸಿದರು.

    ಕಳಸಾ-ಬಂಡೂರಿ ಕೇಂದ್ರ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ತಾಲೂಕಿನ ರೈತರೆಲ್ಲರೂ ಕರೊನಾ ಸಂಕಷ್ಟದಲ್ಲಿದ್ದಾರೆ. ಈ ವೇಳೆ ತಾಲೂಕಿನ ಹಿರೇಕೊಪ್ಪ ಗ್ರಾಮದ ರೈತ ಮಹಿಳೆ ಸುವರ್ಣ ಫಕೀರಪ್ಪ ಭಾವಿ ಅವರು, ಈ ಹಿಂದೆ ಸರ್ಕಾರಕ್ಕೆ ಬೆಂಬಲಬೆಲೆ ಯೋಜನೆಯಡಿ ಮಾರಾಟ ಮಾಡಿರುವ ಕಡಲೆಗೆ ಬರಬೇಕಾಗಿದ್ದ 50 ಸಾವಿರ ರೂ.ಗಳನ್ನು ಪಟ್ಟಣದ ಕೆನರಾ ಬ್ಯಾಂಕ್ ಖಾತೆಗೆ ಜೂ. 4 ರಂದು ಜಮಾ ಮಾಡಲಾಗಿದೆ. ಆದರೆ, ಕೃಷಿ ಸಾಲದ ನೆಪವೊಡ್ಡಿ ರೈತರಿಗೆ ಈ ಹಣ ನೀಡಲು ಬ್ಯಾಂಕ್ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಈ ರೈತರಿಗೆ ಕೂಡಲೆ, ಹಣ ಪಾವತಿಸಬೇಕೆಂದು ಬ್ಯಾಂಕ್ ಅಧಿಕಾರಿಗಳನ್ನು ಆಗ್ರಹಿಸಿದರು.

    ಕೆನರಾ ಬ್ಯಾಂಕ್ ಮ್ಯಾನೇಜರ್ ಹರೀಶ ರಾವ್ ಪ್ರತಿಕ್ರಿಯಿಸಿ, ಸುವರ್ಣ ಭಾವಿ ಎಂಬುವರು ನಮ್ಮ ಬ್ಯಾಂಕ್​ನಲ್ಲಿ 1 ಲಕ್ಷ 81 ಸಾವಿರ ರೂ. ಕೃಷಿ ಸಾಲ ಪಡೆದು ಮೂರು ವರ್ಷ ಗತಿಸಿದರೂ ಸಾಲ ಮರುಪಾವತಿಸಿಲ್ಲ. ಹೀಗಾಗಿ, ಇವರಿಗೆ ಈ ಹಣ ನೀಡುವುದಿಲ್ಲ. ಬದಲಿಗೆ ನಮ್ಮ ಬ್ಯಾಂಕ್​ನಲ್ಲಿರುವ ಕಟ್ ಬಾಕಿ ಸಾಲಕ್ಕೆ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.

    ಇದರಿಂದ ಆಕ್ರೋಶಗೊಂಡ ರೈತರು ಪಟ್ಟಣದ ಕೆನರಾ ಬ್ಯಾಂಕ್ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿ ಬಳಿಕ ತಹಸೀಲ್ದಾರ್ ಎ.ಎಚ್. ಮಹೇಂದ್ರ ಅವರಿಗೆ ಮನವಿ ಸಲ್ಲಿಸಿದರು.

    ವೆಂಕನಗೌಡ ಹನುಮಂತಗೌಡ್ರ, ಮಲ್ಲಪ್ಪ ಪೂಜಾರ, ಶಿದ್ದಪ್ಪ ಭಾವಿ, ಅಡಿಯಪ್ಪ ಖಾನಾಪೂರ, ವೆಂಕನಗೌಡ ಭನಪ್ಪಗೌಡ್ರ, ಅಣ್ಣಪ್ಪಗೌಡ ಪಾಟೀಲ, ಹನುಮರಡ್ಡಿ ಲಿಂಗದಾಳ, ಮಲ್ಲಪ್ಪ ಗೋನಾಳ, ಎಂ.ಎ. ಮೇಟಿ, ಲಕ್ಷ್ಮಣ ಮೊರಬದ, ಹನುಮಂತ ಮಜ್ಜಿಗುಡ್ಡ, ಶಿವಪ್ಪ ಭಾವಿ, ತಿಮ್ಮರಡ್ಡಿ ಸೋಮಾಪೂರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts