More

    ಬೇಂದ್ರೆ ಭಾವಚಿತ್ರಕ್ಕೆ ನಿತ್ಯ ನಮಿಸುವ ಕೋತಿ

    ಧಾರವಾಡ: ಬಾರೋ ಸಾಧನಕೇರಿಗೆ ಎಂದು ಕರೆದಿದ್ದ ಕವಿವರ್ಯ ದ.ರಾ. ಬೇಂದ್ರೆಯವರ ನಿವಾಸಕ್ಕೆ ಹಲವರು ಬಂದು ಹೋಗುತ್ತರೆ. ಹಾಗೆಯೇ ತಮ್ಮ ಕುಟುಂಬ ಸದಸ್ಯರೊಂದಿಗೆ ಬಂದ ಅತಿಥಿಯೊಬ್ಬರು, ಸದ್ಯ ಬೇಂದ್ರೆ ಭವನದ ಶಾಶ್ವತ ಸದಸ್ಯರಾಗಿದ್ದಾರೆ. ನಿತ್ಯವೂ ಭವನದಲ್ಲಿ ಲವಲವಿಕೆಯಿಂದ ಓಡಾಡುತ್ತ, ಬೇಂದ್ರೆಯಜ್ಜನ ಭಾವಚಿತ್ರಕ್ಕೆ ಜಿಗಿ ಜಿಗಿದು ನಮಸ್ಕರಿಸುವ ಈ ಅತಿಥಿಗೆ ಹೆಸರೂ ಇಲ್ಲ.

    ಈ ಅತಿಥಿ ಒಂದು ಕೆಂಪು ಕೋತಿ. ಹೌದು, ಏನಿದು ಕೋತಿಗೆ ಬೇಂದ್ರೆಯಜ್ಜನ ಮೇಲೆ ಅಷ್ಟೊಂದು ಪ್ರೀತಿ, ಗೌರವ ಎಂದು ಅಚ್ಚರಿಯಾಗುತ್ತದೆಯೆ? ಒಮ್ಮೆ ಬೇಂದ್ರೆ ಭವನಕ್ಕೆ ಭೇಟಿ ನೀಡಿ ವೀಕ್ಷಿಸಿ.

    ಭವನಕ್ಕೆ ಬರುವ ಜನರನ್ನು ತನ್ನ ತುಂಟಾಟದ ಮೂಲಕವೇ ಸೆಳೆಯುವ ಈ ಕೋತಿ, ಯಾರಿಗೂ ಕಾಟ ಕೊಡುವುದಿಲ್ಲ. ವೀಕ್ಷಣೆಗೆ ಬಂದವರು ಒಂದಿಷ್ಟು ಸಲುಗೆ ತೋರಿಸಿದರಂತೂ ಸ್ನೇಹಿತನಾಗಿಬಿಡುತ್ತದೆ.

    ಎರಡು ವರ್ಷ ಹಿಂದೆ ಕೆಂಪು ಕೋತಿಗಳ ಗುಂಪೊಂದು ಸಾಧನಕೆರೆ ಭಾಗದಲ್ಲಿ ಓಡಾಡುತ್ತಿತ್ತು. ಆಗ ಬೇಂದ್ರೆ ಭವನ ಆವರಣದಲ್ಲಿನ ಮರಗಳಲ್ಲಿ ಕೆಲ ದಿನ ವಾಸವಾಗಿದ್ದ ಈ ಗುಂಪು ಆ ಬಳಿಕ ಬೇರೆ ಕಡೆ ಹೋಗಿತ್ತು. ಆದರೆ ಆ ಗುಂಪಿನಿಂದ ತಪ್ಪಿಸಿಕೊಂಡ ಈ ಕೋತಿ ಇಲ್ಲಿಯೇ ಉಳಿದಿದೆ. ಆರಂಭದಲ್ಲಿ ಭವನದ ಆವರಣದಲ್ಲಿಯ ಮರಗಳ ಮೇಲೆ ಓಡಾಡುತ್ತಿದ್ದ ಕೋತಿ, ಕ್ರಮೇಣ ಅಲ್ಲಿಯ ನೌಕರರೊಂದಿಗೆ ಸಲುಗೆ ಬೆಳೆಸಿಕೊಂಡಿತು. ಈಗ ಬೇಂದ್ರೆ ಭವನದ ಓರ್ವ ಸದಸ್ಯನೇ ಆಗಿಬಿಟ್ಟಿದೆ!

    ಯಾವುದೇ ಅಂಜಿಕೆ ಇಲ್ಲದೇ ಭವನದ ತುಂಬಾ ಓಡಾಡುತ್ತದೆ. ಕೆಲವೊಮ್ಮೆ ತಾನೇ ಎಲ್ಲವನ್ನೂ ತೋರಿಸುವವನಂತೆ ವೀಕ್ಷಕರ ಮುಂಭಾಗದಲ್ಲಿ ಜಿಗಿಯುತ್ತ ಎರಡನೇ ಮಹಡಿಗೆ ಹೋಗಿ ವಸ್ತುಸಂಗ್ರಹಾಲಯದ ಬಾಗಿಲಲ್ಲಿ ನಿಲ್ಲುತ್ತದೆ.

    ಭಾವಚಿತ್ರಕ್ಕೆ ನಮನ: ಭವನದ ಎರಡನೇ ಮಹಡಿಯಲ್ಲಿರುವ ಅಂಬಿಕಾತನಯದತ್ತ ದರ್ಶನ-ಪ್ರದರ್ಶನ ವಸ್ತುಸಂಗ್ರಹಾಲಯ ಪ್ರವೇಶಿಸುತ್ತಿದ್ದಂತೆಯೇ ಎದುರಾಗುವ ಬೇಂದ್ರೆಯವರ ಬೃಹತ್ ಭಾವಚಿತ್ರ ಇದಕ್ಕೆ ಅಚ್ಚುಮೆಚ್ಚು. ಓಡೋಡಿ ಬಂದು ಜಿಗಿದು ಭಾವಚಿತ್ರದ ಕೆಳಭಾಗದಲ್ಲಿ ಕುಳಿತುಕೊಂಡು ಬೇಂದ್ರೆಯಜ್ಜನ ಗಲ್ಲವನ್ನು ಮುಟ್ಟಿ ಮುಟ್ಟಿ ಕೆಳಗೆ ಜಿಗಿಯುತ್ತದೆ. ಒಂದೊಂದು ಸಲ ಯಾರೂ ಇಲ್ಲದಾಗ ಆ ಭಾವಚಿತ್ರದ ಕೆಳಭಾಗದ ಕಟೌಟ್ ಮೇಲೆಯೇ ಕುಳಿತುಕೊಂಡಿರುತ್ತದೆ. ವೀಕ್ಷಣೆಗೆ ಜನ ಬಂದರೆ ಬದಿಗೆ ಸರಿಯುತ್ತದೆ. ನಿತ್ಯವೂ ಹತಾರು ಸಲ ಮ್ಯೂಸಿಯಂನ ಕಾವಲುಗಾರನಂತೆ ಒಳಗಡೆ ಸುತ್ತು ಹೊಡೆಯುತ್ತದೆ.

    ಇನ್ನು ಭವನದಲ್ಲಿ ಯಾವುದಾದರೂ ಕಾರ್ಯಕ್ರಮಗಳಿದ್ದಾಗ, ಹತ್ತಿಪ್ಪತ್ತು ಜನ ಕಂಡುಬಂದರೆ ಈ ಕೋತಿ ಮರದಿಂದ ಕೆಳಗೆ ಇಳಿದು ಬರುವುದೇ ಇಲ್ಲ. ಕಡಿಮೆ ಜನರಿದ್ದರೆ ಭವನದಲ್ಲಿ ಕೋತಿಯದೇ ಸಾಮ್ರಾಜ್ಯ. ಕಾರ್ಯಕ್ರಮಗಳು ಇಲ್ಲದೇ ಇದ್ದರೂ ನಿತ್ಯ ಭವನಕ್ಕೆ ಜನ ಹೋಗುವುದು ಬರುವುದು ಇದ್ದೇ ಇರುತ್ತದೆ. ಆ ಸಮಯದಲ್ಲಿ ಬಂದವರಿಗೆ ಮಾತ್ರವೇ ಈ ಕೋತಿಯ ಆಟ ಕಾಣಸಿಗುತ್ತದೆ.

    ಒಟ್ಟಾರೆಯಾಗಿ ಅಂಬಿಕಾತನಯದತ್ತನ ಮನೆಯಂಗಳದಲ್ಲಿ ಈ ಕೆಂಪು ಕೋತಿ ತನ್ನ ತುಂಟಾಟದ ಮೂಲಕ ಗಮನ ಸೆಳೆಯುತ್ತಿದ್ದು, ಬೇಂದ್ರೆಯಜ್ಜನೆಡೆಗಿನ ಅದರ ಪ್ರೀತಿಯಂತೂ ಅಪರೂಪದ್ದೇ ಸರಿ.-

    ಬೇಂದ್ರೆ ಮತ್ತು ಕೋತಿ: ಬೆಂದ್ರೆಯವರ ಜೀವಿತಾವಧಿಯಲ್ಲಿ ಮನೆಯ ಸುತ್ತಲೂ ಕೋತಿಗಳ ಗುಂಪೇ ಇರುತ್ತಿತ್ತು. ಅಜ್ಜ ಏನಾದರೂ ತಿನಿಸಿ ಹಿಡಿದುಕೊಂಡು ಕರೆದರೆ ಗುಂಪಾಗಿ ಬಂದು ಕೈಯಿಂದ ತೆಗೆದುಕೊಂಡು ಹೋಗುತ್ತಿದ್ದವು. ಈ ಸನ್ನಿವೇಶ ಅವರ ಕುರಿತಾದ ಸಾಕ್ಷ್ಯತ್ರದ ಕೊನೆ ಭಾಗದಲ್ಲಿದೆ. ಆ ಸಾಕ್ಷ್ಯತ್ರದ ಶೂಟಿಂಗ್ ಸಮಯದಲ್ಲಿ ಬೇಂದ್ರೆಯವರು ಶೇಂಗಾ ಕಾಳು ಹಿಡಿದುಕೊಂಡು ಮಂಗನನ್ನು ಕರೆದಾಗ ಅದು ಮರದಿಂದ ಕೆಳಗಿಳಿದು ಬಂದು ತೆಗೆದುಕೊಂಡು ಹೋಗಿತ್ತು. ಆದರೆ ಆ ಸನ್ನಿವೇಶ ಸರಿಯಾಗಿ ಸೆರೆಯಾಗಿಲ್ಲ ಇನ್ನೊಮ್ಮೆ ಕರೆಯಿರಿ ಚಿತ್ರೀಕರಣ ಮಾಡುವ ತಂಡದವರು ಕೇಳಿದ್ದರಂತೆ. ಆಗ ಬೇಂದ್ರೆಯಜ್ಜ ‘ಮತ್ ಕರದ್ರ ಬರಾಕ ಅದು ಬೇಂದ್ರೆ ಅಲ್ಲ. ಬಂದರ ಐತಿ’ ಅಂತಾ ಹೇಳಿದ್ದರಂತೆ. ಹೀಗೆ ಬೇಂದ್ರೆಯರಿಗೆ ಕೋತಿಗಳ ಬಗ್ಗೆ ಪ್ರೀತಿಯಿತ್ತು. ಅದಕ್ಕೆ ಕೃತಜ್ಞತೆ ಎಂಬಂತೆ ಅವರ ಭವನದ ಮೇಲೆ ಈ ಕೋತಿ ಪ್ರೀತಿ ತೋರುತ್ತಿದೆ, ಅಲ್ಲಿಯ ಸಿಬ್ಬಂದಿ ಮತ್ತು ವೀಕ್ಷಕರಿಂದ ಅಷ್ಟೇ ಪ್ರೀತಿಯನ್ನು ಪಡೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts