More

    ಬೆಳೆ ಸಮೀಕ್ಷೆ ನಿಖರವಾಗಿರಲಿ

    ಗದಗ: ಜಿಲ್ಲೆಯ ರೈತರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ರೇಷ್ಮೆ, ತೋಟಗಾರಿಕೆ, ಕೃಷಿ, ಕಂದಾಯ ಹಾಗೂ ನೀರಾವರಿ ಇಲಾಖೆಗಳ ಅಧಿಕಾರಿಗಳು ಸಮನ್ವಯದೊಂದಿಗೆ ಬೆಳೆ ಸಮೀಕ್ಷೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ಹೇಳಿದರು.

    ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಬೆಳೆ ಸಮೀಕ್ಷೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬೆಳೆ ಹಾನಿ ಕುರಿತು ನಿಗದಿತ ಅವಧಿಯೊಳಗೆ ನಿಖರವಾಗಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು. ಇದಕ್ಕೆ ಅಗತ್ಯವಿರುವ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು.

    ಸರ್ಕಾರದ ಬೆಳೆ ಸಮೀಕ್ಷೆ ಮಾರ್ಗಸೂಚಿಗಳನ್ವಯ ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿ ಸಭೆಯನ್ನು ಕಾಲ ಕಾಲಕ್ಕೆ ಜರುಗಿಸಬೇಕು. ರೈತರಿಗೆ ಬೆಳೆ ಸಮೀಕ್ಷೆಯ ಬಗ್ಗೆ ಹೆಚ್ಚೆಚ್ಚು ಜಾಗೃತಿ ಮೂಡಿಸಬೇಕಲ್ಲದೆ, ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರಪತ್ರಗಳನ್ನು ಹಂಚಬೇಕು. ಬೆಳೆ ಸಮೀಕ್ಷೆಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಗತ್ಯವಿರುವ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಬೆಳೆ ಸಮೀಕ್ಷೆ ಮಾಡುವವರಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸೂಚಿಸಿದರು.

    ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಮಾತನಾಡಿ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಬೆಳೆ ಸಮೀಕ್ಷೆಗಾಗಿ ಸರ್ಕಾರವು ಸಮಿತಿ ರಚಿಸಲು ಸೂಚಿಸಿದೆ. ಅದರಂತೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಸಮಿತಿಯ ಅಧ್ಯಕ್ಷರಾಗಿದ್ದು ಜಿಲ್ಲಾ ಪಂಚಾಯಿತಿ ಸಿಇಒ ಉಪಾಧ್ಯಕ್ಷರಾಗಿದ್ದಾರೆ. ಅಪರ ಜಿಲ್ಲಾಧಿಕಾರಿ ನೋಡಲ್ ಅಧಿಕಾರಿಗಳಾಗಿದ್ದು, ಜಂಟಿ ಕೃಷಿ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ತೋಟಗಾರಿಕೆ, ರೇಷ್ಮೆ, ನೀರಾವರಿ ಹಾಗೂ ಜಿಲ್ಲಾ ಸಾಂಖ್ಯಿಕ ಇಲಾಖಾಧಿಕಾರಿಗಳು ಸಮಿತಿ ಸದಸ್ಯರಾಗಿದ್ದಾರೆ. ಅದರಂತೆ ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ ಅವರು ಬೆಳೆ ಸಮೀಕ್ಷೆ ಸಮಿತಿಯ ಅಧ್ಯಕ್ಷರಾಗಿದ್ದು, ಸಹಾಯಕ ಕೃಷಿ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ ಎಂದರು.

    ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಡಿಎಸ್​ಒ ಎ.ಎ. ಕಂಬಾಳಿಮಠ, ಕೃಷಿ ವಿಜ್ಞಾನ ಕೇಂದ್ರದ ಫಾರಂ ಮ್ಯಾನೇಜರ್ ಎಸ್.ಎಲ್. ಹಳೇಮನಿ ಹಾಗೂ ರೇಷ್ಮೆ ಇಲಾಖೆಯ ಉಪನಿರ್ದೇಶಕರು ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

    ಖಾಸಗಿ ವ್ಯಕ್ತಿಗಳಿಗೆ ಗೌರವಧನ: ಗ್ರಾಮದಲ್ಲಿ ಸರ್ವೆ ನಂಬರ್​ಗಳ ಬಗ್ಗೆ ಮಾಹಿತಿ ಇರುವ ಹಾಗೂ ಆಪ್​ಗಳ ಬಳಕೆ ಗೊತ್ತಿರುವವರನ್ನು ಸಮೀಕ್ಷೆ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಬೆಳೆ ಸಮೀಕ್ಷೆ ಆಪ್​ನಲ್ಲಿ ಅಪ್​ಲೋಡ್ ಮಾಡಿದ ಛಾಯಾಚಿತ್ರ ಮತ್ತು ಬೆಳೆ ವಿವರಗಳ ಮೊದಲ ಬೆಳೆಗೆ 10 ರೂ.ಗಳನ್ನು, ಪ್ರತಿ ಹೆಚ್ಚುವರಿ ಬೆಳೆಗಳ ಛಾಯಾಚಿತ್ರಗಳನ್ನು ಅಪ್​ಲೋಡ್ ಮಾಡಲು 5 ರೂ.ನಂತೆ ಗರಿಷ್ಠ 20 ರೂ.ಗಳ ಮಿತಿಯಲ್ಲಿ ಸಮೀಕ್ಷೆ ಕಾರ್ಯಕ್ಕೆ ಬಳಸಿಕೊಂಡ ವ್ಯಕ್ತಿಗಳಿಗೆ ಗೌರವಧನ ನಿಡಲಾಗುವುದು. ಅವರಿಗೆ ನೀಡುವ ಎಲ್ಲ ಪಾವತಿಗಳನ್ನು ಆಧಾರ್ ಆಧಾರಿತ ಬ್ಯಾಂಕ್ ಖಾತೆಗೆ ಗೌರವಧನ ಜಮಾ ಮಾಡಲಾಗುವುದು ಎಂದು ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಸಭೆಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts