More

    ಬೆಳೆ ಸಮೀಕ್ಷೆ ಆಪ್​ಗೆ ಅಡಚಣೆ

    ಹಾವೇರಿ: ಕೃಷಿ ಸಚಿವರ ಬಹು ಮಹತ್ವಾಕಾಂಕ್ಷೆಯ ರೈತರೇ ಬೆಳೆ ಸಮೀಕ್ಷೆ ಕೈಗೊಳ್ಳುವ ಬೆಳೆ ಸಮೀಕ್ಷೆ ಆಪ್ ಯೋಜನೆಗೆ ಕೃಷಿ ಸಚಿವರ ತವರು ಜಿಲ್ಲೆಯಲ್ಲಿಯೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಜಿಲ್ಲೆಯಲ್ಲಿ ಒಟ್ಟು 4,92,739 ಖಾತೆಗಳಿದ್ದು, ಅದರಲ್ಲಿ ಈವರೆಗೆ (ಆ. 24) 1,06,424 ಖಾತೆಗಳ ಸಮೀಕ್ಷೆ ಮಾತ್ರ (ಶೇ. 21.6ರಷ್ಟು ) ಅಪ್​ಲೋಡ್ ಆಗಿದೆ. ಶೇ. 78.4ರಷ್ಟು ರೈತರ ಖಾತೆಗಳ ಬೆಳೆ ಸಮೀಕ್ಷೆ ಬಾಕಿ ಇದೆ.

    ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆಯನ್ನು ರೈತರೇ ಕೈಗೊಳ್ಳಲು ಕೃಷಿ ಇಲಾಖೆ ಆಪ್ ಬಿಡುಗಡೆ ಮಾಡಿ, ಬೆಳೆ ಸಮೀಕ್ಷೆಯ ಹೊಣೆಯನ್ನು ರೈತರಿಗೇ ನೀಡಿದೆ. ಆದರೆ, ಬಹುಪಾಲು ರೈತರಿಗೆ ಆಪ್ ಮೂಲಕ ಸಮೀಕ್ಷೆಗೆ ಸೂಕ್ತ ಮಾಹಿತಿ, ಮಾರ್ಗದರ್ಶನ ವಿಲ್ಲದ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆಯಾಗಿಲ್ಲ.

    ಸಮಸ್ಯೆ ಏನು ?: ಬೆಳೆ ಸಮೀಕ್ಷೆ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್​ನಲ್ಲಿ ಡೌನ್​ಲೋಡ್ ಮಾಡಿಕೊಂಡ ನಂತರ ರೈತರ ಹೆಸರು, ಮೊಬೈಲ್ ಸಂಖ್ಯೆ, ಒಟಿಪಿ ಸಂಖ್ಯೆಯನ್ನು ನಮೂದಿಸಬೇಕು. ಆ ನಂತರ ಮೊಬೈಲ್​ನಲ್ಲಿ ಡೌನ್​ಲೋಡ್ ಮಾಸ್ಟರ್ ವಿವರ, ಡೌನ್​ಲೋಡ್ ಪಹಣಿ ಮತ್ತು ಮಾಲೀಕರ ವಿವರ ಕೇಳಲಾಗುತ್ತದೆ. ಅವುಗಳಲ್ಲಿ ಮಾಹಿತಿ ನೀಡಲು ಮೊಬೈಲ್​ನಲ್ಲಿ ಕಡ್ಡಾಯವಾಗಿ ಇಂಟರ್​ನೆಟ್ ಸೌಲಭ್ಯ ಅವಶ್ಯವಾಗಿದೆ. ಆದರೆ ಬಹುತೇಕ ಗ್ರಾಮೀಣ ಭಾಗದಲ್ಲಿ ಇಂಟರ್​ನೆಟ್ ಸೌಲಭ್ಯವಿಲ್ಲ. ಇದ್ದರೂ ನೆಟ್​ವರ್ಕ್ ಸಮಸ್ಯೆ ಇರುವುದರಿಂದ ರೈತರ ಬೆಳೆ ಸಮೀಕ್ಷೆಗೆ ಅಡಚಣೆಯಾಗುತ್ತಿದೆ. ಇನ್ನು ಬಹುತೇಕ ರೈತರಲ್ಲಿ ಅಂಡ್ರಾಯ್್ಡ ಮೊಬೈಲ್​ಗಳಿಲ್ಲ. ಮೊಬೈಲ್​ಗಳಿದ್ದರೂ ಕೆಲವರಿಗೆ ಸೂಕ್ತ ಮಾಹಿತಿ ಇಲ್ಲದೇ ಬೆಳೆ ಸಮೀಕ್ಷೆ ಮಾಡಲು ಪರದಾಡುವಂತಾಗಿದೆ ಎಂದು ಜಿಲ್ಲೆಯ ರೈತರು ದೂರುತ್ತಾರೆ.

    ಪಿಆರ್​ಗಳ ಸಹಾಯ: ಈ ಹಿಂದೆ ಕೃಷಿ ಇಲಾಖೆ ಪಿಆರ್​ಗಳ ಮೂಲಕ ಬೆಳೆ ಸಮೀಕ್ಷೆ ನಡೆಸುತ್ತಿತ್ತು. ಅವರಿಗೆ ಸರ್ಕಾರದಿಂದಲೇ ಒಂದು ಸರ್ವೆ ನಂಬರ್​ನ ಸಮೀಕ್ಷೆಯನ್ನು ಅಪ್​ಲೋಡ್ ಮಾಡಿದರೆ 10 ರೂ. ಗೌರವ ಧನ ನೀಡಲಾಗುತ್ತಿತ್ತು. ಈ ಬಾರಿ ಪಿಆರ್​ಗಳಿಗೆ ಗೌರವಧನವನ್ನು ಸರ್ಕಾರ ನಿಗದಿಗೊಳಿಸಿಲ್ಲ. ಹೀಗಾಗಿ ಅನೇಕ ರೈತರು ಪಿಆರ್​ಗಳ ಮೊರೆ ಹೋಗುತ್ತಿದ್ದಾರೆ. ಇವರು ರೈತರಿಂದಲೇ ಒಂದು ಸಮೀಕ್ಷೆಗೆ ಇಂತಿಷ್ಟೆಂದು ಹಣ ಕೇಳುತ್ತಿದ್ದಾರೆ. ರೈತರ ಬದಲು ಸರ್ಕಾರವೇ ಪಿಆರ್​ಗಳಿಗೆ ಹಿಂದಿನಂತೆ ಹಣ ನೀಡಿದರೆ ಅವರ ಸಹಾಯದೊಂದಿಗೆ ಸಮೀಕ್ಷೆ ಮಾಡಲು ಅನುಕೂಲವಾಗುತ್ತಿತ್ತು ಎಂಬುದು ರೈತರ ಬೇಡಿಕೆಯಾಗಿದೆ.

    ಬೆಳೆ ಸಮೀಕ್ಷೆಗೆ ರೈತರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಆ. 24ಕ್ಕೆ ರಾಜ್ಯದಲ್ಲಿ 22 ಲಕ್ಷ ರೈತರು ತಾವೇ ಮಾಹಿತಿ ಅಪ್​ಲೋಡ್ ಮಾಡಿದ್ದಾರೆ. ನಮ್ಮ ನಿರೀಕ್ಷೆಗೂ ಮೀರಿ ರೈತರು ಜನಾಂದೋಲನದ ಮಾದರಿಯಲ್ಲಿ ಖುಷಿಯಿಂದ ಸಮೀಕ್ಷೆ ಮಾಡುತ್ತಿದ್ದಾರೆ. ಆ. 24ರ ಅಂತಿಮ ದಿನವನ್ನು ಸೆ. 24ರವರೆಗೆ ವಿಸ್ತರಿಸಲಾಗಿದೆ. ಅಷ್ಟರೊಳಗೆ ಎಲ್ಲ ರೈತರು ಮಾಹಿತಿ ಅಪ್​ಲೋಡ್ ಮಾಡುವ ವಿಶ್ವಾಸವಿದೆ. ಒಂದೊಮ್ಮೆ ಆಗದೇ ಇದ್ದರೇ ಪಿಆರ್​ಗಳ ಮೂಲಕ ಸಮೀಕ್ಷೆ ಮಾಡಿಸಲಾಗುವುದು.
    | ಬಿ.ಸಿ. ಪಾಟೀಲ ಕೃಷಿ ಸಚಿವ

    ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ರೈತರಿಂದಲೇ ಬೆಳೆ ಸಮೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಹಳ್ಳಿ ಹಳ್ಳಿಗಳಿಗೆ ತೆರಳಿ ನೂತನ ಆಪ್ ಬಗ್ಗೆ ರೈತರಿಗೆ ತರಬೇತಿ ನೀಡಲಾಗುತ್ತಿದೆ. ರೈತರೇ ಸಮೀಕ್ಷೆ ಮಾಡುವುದರಿಂದ ಸ್ವಲ್ಪ ವಿಳಂಬವಾಗುತ್ತಿದೆ. ರಾಜ್ಯದಲ್ಲಿಯೇ ಹಾವೇರಿ ಜಿಲ್ಲೆ ಬೆಳೆ ಸಮೀಕ್ಷೆಯಲ್ಲಿ 6ನೇ ಸ್ಥಾನದಲ್ಲಿದೆ.
    | ಬಿ. ಮಂಜುನಾಥ ಜಂಟಿ ಕೃಷಿ ನಿರ್ದೇಶಕ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts