More

    ಬೆಳೆ ಕಿತ್ತೆಸೆಯುತ್ತಿರುವ ರೈತರು

    ಕಲಘಟಗಿ: ಮೂರ್ನಾಲ್ಕು ತಿಂಗಳ ಹಿಂದೆ ಬಲು ಬೇಡಿಕೆಯಿಂದ ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದ ಮೆಣಸಿನಕಾಯಿ ಮತ್ತು ಬದನೆಕಾಯಿಯನ್ನು ಲಾಕ್​ಡೌನ್ ಕಾರಣದಿಂದಾಗಿ ಕೇಳುವವರಿಲ್ಲದೆ, ಸರಿಯಾದ ಬೆಲೆಯೂ ಇಲ್ಲದ ಸ್ಥಿತಿಯಿದೆ.

    ತಾಲೂಕಿನಾದ್ಯಂತ ಸುಮಾರು 400 ಹೆಕ್ಟೇರ್​ಗಿಂತಲೂ ಅಧಿಕ ಜಮೀನಿನಲ್ಲಿ ಅನೇಕ ರೈತರು ತೋಟಗಾರಿಕೆ ಬೆಳೆಗಳಾದ ಮೆಣಸಿನಕಾಯಿ, ಬದನೆ ಮುಂತಾದ ಬೆಳೆ ಬೆಳೆದಿದ್ದಾರೆ. ತಾಲೂಕಿನ ದುಮ್ಮವಾಡ, ಗುಡಿಹಾಳ, ಶೀಗಟ್ಟಿ, ಗಂಭ್ಯಾಪೂರ, ಕಳಸನಕೊಪ್ಪ, ಜಿ.ಬಸವನಕೊಪ್ಪ, ದಾಸ್ತಿಕೊಪ್ಪ, ತುಮ್ರಿಕೊಪ್ಪ ಸೇರಿ ಇತರ ಗ್ರಾಮಗಳಲ್ಲಿ ನೂರಾರು ರೈತರು ಮೆಣಸಿನಕಾಯಿ, ಬದನೆ, ಇತರ ತರಕಾರಿ ಬೆಳೆದಿದ್ದಾರೆ. ನಿರೀಕ್ಷೆಯಂತೆ ಬೆಳೆ ಉತ್ತಮವಾಗಿದ್ದರೂ, ಕರೊನಾ ಮಹಾಮರಿಯಿಂದ ಮಾರುಕಟ್ಟೆಯಲ್ಲಿ ಬೆಳೆಗೆ ಬೆಲೆ, ಬೇಡಿಕೆ ಇಲ್ಲದಿರುವುದರಿಂದ ರೈತರು ಬೆಳೆ ಕಿತ್ತು ಹಾಕುತ್ತಿದ್ದಾರೆ.

    ತಾಲೂಕಿನ ತುಮರಿಕೊಪ್ಪ ಗ್ರಾಮದ ರೈತ ಶಿವಯ್ಯ ಗೊಡಿಮನಿ ಅವರು ಒಂದೂವರೆ ಎಕರೆಯಲ್ಲಿ ಮೆಣಸಿನಕಾಯಿ ಮತ್ತು ಒಂದು ಎಕರೆಯಲ್ಲಿ ಬದನೆ ಬೆಳೆದಿದ್ದಾರೆ. ಮೆಣಸಿನ ಸಸಿಗಳನ್ನು 1 ರೂ.ನಂತೆ ಖರೀದಿಸಿ 12 ಸಾವಿರ ಸಸಿ ಹಾಗೂ 50 ಪೈಸೆಯಂತೆ 1500 ಬದನೆಕಾಯಿ ಸಸಿಗಳನ್ನು ತಂದು ಜನವರಿ ಕೊನೆಯ ವಾರದಲ್ಲಿ ನಾಟಿ ಮಾಡಿದ್ದರು. ಅಲ್ಲದೆ, ಬೆಳೆಗಾಗಿ ಗೊಬ್ಬರ, ಕ್ರಿಮಿನಾಶಕ, ಟಾನಿಕ್ ಕಳೆ ತೆಗೆಯ ಕೂಲಿ ಸೇರಿ ಇಲ್ಲಿಯವರೆಗೂ 40 ರಿಂದ 50 ಸಾವಿರ ರೂ. ಖರ್ಚು ಮಾಡಿದ್ದರು. ಈಗ ಉತ್ತಮ ಬೆಳೆ ಬಂದಿದ್ದು, ಮಾರಾಟ ಮಾಡಲಾಗದೆ ಪರಿತಪಿಸುವಂತಾಗಿದೆ. ಇದರಿಂದ ಕಂಗಾಲಾಗಿರುವ ರೈತ ಶಿವಯ್ಯ, ಬೆಳೆದು ಫಸಲು ಬಂದ ಗಿಡಗಳನ್ನು ಕಿತ್ತು ಹಾಕುತ್ತಿದ್ದಾರೆ.

    ಕಳೆದ ವರ್ಷ ಮೆಣಸಿನಕಾಯಿ ಬೆಳೆ ಉತ್ತಮವಾಗಿ ಬಂದಿತ್ತು. ಆದರೆ, ಅತಿವೃಷ್ಟಿಯಿಂದಾಗಿ ಫಸಲೆಲ್ಲವೂ ಮಳೆಯಲ್ಲಿ ಕೊಚ್ಚಿ ಹೋಗಿ ನಮ್ಮನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿತ್ತು. ಮತ್ತೆ ಈ ವರ್ಷವೂ ಕರೊನಾ ಲಾಕ್​ಡೌನ್​ದಿಂದಾಗಿ ನಮ್ಮ ಜೀವನವನ್ನೆ ಬಲಿಕೊಡುವಂತಾಗಿದೆ. ಸರ್ಕಾರವು ಬೆಳೆ ಹಾನಿಗೆ ಪರಿಹಾರ ಸಮರ್ಪಕವಾಗಿ ನೀಡಿದರೆ ಸಹಾಯವಾಗುತ್ತದೆ ಎಂದು ತರಕಾರಿ ಬೆಳೆಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.

    ಎರಡು ತಿಂಗಳ ಹಿಂದೆ ಮೆಣಸಿನಕಾಯಿ ಪ್ರತಿ ಕೆಜಿಗೆ 30 ರಿಂದ 40 ರೂ.ಗೆ ಮಾರಿದ್ದೇನೆ. ಆದರೆ, ಲಾಕ್​ಡೌನ್ ಆದಾಗಿನಿಂದ ಒಂದು ಚೀಲಕ್ಕೆ ಕೇವಲ 150 ರಿಂದ 200 ರೂ.ಗೆ ದಲಾಲಿಗಳು ಕೇಳುತ್ತಿದ್ದಾರೆ. ಇದರಿಂದ ಮಾರುಕಟ್ಟೆಯವರೆಗೂ ಗಾಡಿ ಬಾಡಿಗೆ, ಕೂಲಿಗಳಿಗೆ ಕೊಟ್ಟ ಪಗಾರ, ಒಟ್ಟಾರೆ ಖರ್ಚು ಮಾಡಿದ ಹಣವು ನಮಗೆ ಮರಳಿ ಸಿಗುತ್ತಿಲ್ಲ. ಇದರಿಂದ ನಮ್ಮ ಕೈಯಿಂದ ಸಾಲ ಮಾಡಿ ಖರ್ಚು ಭರಿಸುವಂತಾಗಿದೆ.

    | ಶಿವಯ್ಯ ಗೊಡಿಮನಿ ತುಮರಿಕೊಪ್ಪ ಗ್ರಾಮದ ರೈತ

    ಬೆಳೆ ಹಾನಿಗೊಳಗಾದ ಕುರಿತು ಅರ್ಜಿ ನೀಡುವಂತೆ ರೈತರಿಗೆ ತಿಳಿಸಲಾಗಿದೆ. ಅಲ್ಲದೆ, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ತಮ್ಮ ಭಾಗದಲ್ಲಿ ಬೆಳೆ ಬೆಳೆದು ಸಂಕಷ್ಟಕ್ಕೀಡಾಗಿರುವವರ ಯಾದಿ ನೀಡಲು ಕ್ರಮ ಜರುಗಿಸಲಾಗಿದೆ. ಪರಿಹಾರದ ದೃಷ್ಟಿಯಿಂದ ತಾಲೂಕು ಜಂಟಿ ಸಮಿತಿಯಿಂದ ಅರ್ಜಿದಾರರ ಬೆಳೆ ಪರಿಶೀಲನೆ ಮಾಡಿ ತೊಂದರೆಗೊಳಪಟ್ಟ ಎಲ್ಲ ರೈತರಿಗೂ ಸರ್ಕಾರದ ಸಹಾಯಧನ ಮುಟ್ಟಿಸಲಾಗುವುದು.

    | ಎಚ್.ವೈ. ಆಸಂಗಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts