More

    ಬೆಳೆದ ಮರಗಳ ಸುರಕ್ಷಿತ ಸ್ಥಳಾಂತರ

    ಬಸವರಾಜ ಇದ್ಲಿ ಹುಬ್ಬಳ್ಳಿ

    ರಸ್ತೆ ಅಗಲೀಕರಣದಂಥ ಕಾಮಗಾರಿ ಶುರುವಾದರೆ ಸಾಕು ನೂರಾರು, ಸಾವಿರಾರು ಗಿಡ- ಮರಗಳನ್ನು ಅನಾಯಾಸವಾಗಿ ನೆಲಕ್ಕುರುಳಿಸಿ ಪರಿಸರದ ಮೇಲೆ ವಿಕೃತಿ ಮೆರೆಯಲಾಗುತ್ತದೆ. ಸಹಜವಾಗಿ ಪರಿಸರವಾದಿಗಳು ಮಮ್ಮಲ ಮರುಗುತ್ತ ಪರಿಸರ ಉಳಿಸಿ ಎಂದು ಗೋಗರೆಯುತ್ತಾರೆ.

    ಆದರೆ, ಪರಿಸರಕ್ಕೆ ಯಾವುದೇ ಧಕ್ಕೆ ಮಾಡದೇ ಅಭಿವೃದ್ಧಿ ಕಾರ್ಯಗಳನ್ನೂ ಕೈ ಬಿಡದೆ ಇಲ್ಲಿಯ ಎಪಿಎಂಸಿ ಆವರಣದಲ್ಲಿ ಹಸಿರು ಪರಿಸರ ಹಾಗೂ ಗಿಡ -ಮರಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಅಭಿವೃದ್ಧಿಯನ್ನೂ ಮಾಡುತ್ತಿರುವುದು ಇಲ್ಲಿಯ ಎಪಿಎಂಸಿಯಲ್ಲಿ ಕಂಡುಬಂದಿದೆ.

    ಜಾನುವಾರು ಮಾರುಕಟ್ಟೆ: ಹುಬ್ಬಳ್ಳಿ ಎಪಿಎಂಸಿ ಆವರಣದ ತಾತ್ಕಾಲಿಕ ಜಾನುವಾರು ಮಾರುಕಟ್ಟೆಯಲ್ಲಿ ಹತ್ತಾರು ವರ್ಷಗಳ ಹಿಂದೆ ನೆಟ್ಟಿದ್ದ ಗಿಡಗಳು ಈಗ ದೊಡ್ಡದಾಗಿವೆ. ಕೆಲ ದಿನಗಳ ಹಿಂದೆ ಎಪಿಎಂಸಿ ಆವರಣದ ಬೇರೆ ಜಾಗದಲ್ಲಿ ಶಾಶ್ವತ ಜಾನುವಾರು ಮಾರುಕಟ್ಟೆ ಅಭಿವೃದ್ಧಿ ಪಡಿಸಿದ್ದು, ಹಾಲಿ ಮಾರುಕಟ್ಟೆ ಅಲ್ಲಿಗೆ ಸ್ಥಳಾಂತರವಾಗುತ್ತಿದೆ.

    ಹಾಗಾಗಿ ಈ ಮೊದಲಿದ್ದ ತಾತ್ಕಾಲಿಕ ಜಾನುವಾರು ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಿ ವ್ಯಾಪಾರ- ವಹಿವಾಟು ನಡೆಸುವವರಿಗೆ ಹಂಚಿಕೆ ಮಾಡುವ ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ರಸ್ತೆ ಮಧ್ಯೆ ಇರುವ ಕೆಲವು ಮರಗಳನ್ನು ತೆರವುಗೊಳಿಸುವ ಅನಿವಾರ್ಯತೆ ಎದುರಾಗಿದೆ.

    ಆಗ ಎಪಿಎಂಸಿ ಸದಸ್ಯ ಹಾಗೂ ಗ್ರೀನ್ ಕರ್ನಾಟಕ ಅಸೋಸಿಯೇಶನ್ ಅಧ್ಯಕ್ಷ ಚನ್ನು ಹೊಸಮನಿ, ಜೀವನ ವಸ್ತ್ರದ ಹಾಗೂ ಇತರರು ಮರಗಳನ್ನು ಕಡಿಯದೇ ಯಥಾವತ್ತಾಗಿ ಬೇರೆ ಕಡೆ ಸ್ಥಳಾಂತರಿಸುವ ಯೋಜನೆ ರೂಪಿಸಿದರು.

    ಬೇರು ಸಮೇತ ಸ್ಥಳಾಂತರ: ಅದರಂತೆ ನಾಲ್ಕಾರು ಮರಗಳ ಸುತ್ತಲೂ ಮಣ್ಣು ಬಿಡಿಸಿ, ಅಕ್ಕಪಕ್ಕದ ಬೇರು ಕತ್ತರಿಸಿ ಮುಖ್ಯ ಬೇರು ಸಮೇತ ಕ್ರೇನ್ ಮೂಲಕ ಎತ್ತಿಕೊಂಡು ಬೇರೆಡೆ ಸ್ಥಳಾಂತರ ಮಾಡುತ್ತಿದ್ದಾರೆ. ನೂತನವಾಗಿ ಅಭಿವೃದ್ಧಿ ಪಡಿಸಿರುವ ಜಾನುವಾರು ಮಾರುಕಟ್ಟೆಯಲ್ಲಿ ಗುಂಡಿ ತೋಡಿಸಲಾಗುತ್ತಿದ್ದು, ಅಲ್ಲೇ ಅವುಗಳನ್ನು ನೆಡಲು ಮುಂದಾಗಿದ್ದಾರೆ.

    ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದೆ. ಅದನ್ನು ಹೇಗಾದರೂ ಮಾಡಿ ಹೊಂದಿಸಿಕೊಂಡು ಕಠಿಣವಾದರೂ ಮಾದರಿ ಕಾರ್ಯ ಕೈಗೆತ್ತಿಕೊಂಡಿದ್ದಾರೆ ಹಸಿರು ಪರಿಸರ ಪ್ರೇಮಿಗಳು. ಎಪಿಎಂಸಿ ಅಧ್ಯಕ್ಷರು, ಅಧಿಕಾರಿ ವರ್ಗದವರು ಕೈ ಜೋಡಿಸಿದ್ದಾರೆ. ಅಗತ್ಯ ಯಂತ್ರೋಪಕರಣಗಳ ಸಹಾಯ ಮಾಡುತ್ತಿದ್ದಾರೆ.

    ಅಭಿವೃದ್ಧಿ ಆಗಬೇಕು. ಅದರ ಜೊತೆ ಪರಿಸರವೂ ಉಳಿಯಬೇಕು ಎನ್ನುವುದು ನಮ್ಮ ವಾದ. ಇದೇ ಕಾರಣಕ್ಕೆ ಎಪಿಎಂಸಿ ಆವರಣವನ್ನು ಹಸಿರಾಗಿಯೇ ಉಳಿಸಲು ಮರ ಕಡಿಯುವ ಪ್ರಸಂಗ ಬಂದರೂ ಎಷ್ಟೇ ಖರ್ಚಾದರೂ ಚಿಂತೆ ಇಲ್ಲ ಎಂದು ಸ್ಥಳಾಂತರಕ್ಕೆ ವ್ಯವಸ್ಥೆ ಮಾಡುತ್ತಿದ್ದೇವೆ. ಇದಕ್ಕೆ ಎಪಿಎಂಸಿ ಪದಾಧಿಕಾರಿಗಳು, ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. |ಚನ್ನು ಹೊಸಮನಿ ಎಪಿಎಂಸಿ ಸದಸ್ಯ ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts