More

    ಬೆಳೆಗಾರರಿಗೆ ಕಾಡುತ್ತಿದೆ ತೆಂಗಿನಕಾಯಿ ಬೆಲೆ ಕುಸಿತದ ಭೀತಿ

    ಕಾರವಾರ: ಕೃಷಿ ಉತ್ಪನ್ನ ವಹಿವಾಟಿಗೆ ಅವಕಾಶ ನೀಡಬೇಕು ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದರೂ ಜಿಲ್ಲೆಯಲ್ಲಿ ತೆಂಗಿನಕಾಯಿ ಖರೀದಿ, ಸಂಸ್ಕರಣೆಗೆ ಇದುವರೆಗೂ ಅನುಮತಿ ಸಿಕ್ಕಿಲ್ಲ. ಇದರಿಂದ ಬೆಳೆಗಾರದಲ್ಲಿ ಬೆಲೆ ಕುಸಿಯುವ ಆತಂಕ ಶುರುವಾಗಿದೆ.

    ಜಿಲ್ಲೆಯ ಕುಮಟಾ ಎಪಿಎಂಸಿಯಿಂದ ಕತಗಾಲಿನಲ್ಲಿ ಕಾಯಿ ಹರಾಜು ನಡೆಯುತ್ತದೆ. ಮಾರ್ಚ್ ಅಂತ್ಯಕ್ಕೆ ಬಂದಾದ ಕಾಯಿ ಹರಾಜು ಮತ್ತೆ ಪ್ರಾರಂಭವಾಗಿಲ್ಲ. ಇನ್ನು, ಕೊಬ್ಬರಿ ಗಿರಣಿಗಳನ್ನು ಪ್ರಾರಂಭಿಸಲು ಮಾಲೀಕರು ಕೇಳಿಕೊಂಡರೂ ಕುಮಟಾ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳು ಇದುವರೆಗೂ ಅನುಮತಿ ನೀಡಿಲ್ಲ.

    ಜಿಲ್ಲೆಯಲ್ಲಿ ಪ್ರತಿ ವರ್ಷ ಸರಾಸರಿ 14 ಕೋಟಿ ಕಾಯಿ ಉತ್ಪಾದನೆಯಾಗುತ್ತದೆ. ಮುಖ್ಯವಾಗಿ ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಬೆಳೆಯುವ ಕಾಯಿಗೆ ವಿಶೇಷ ಬೇಡಿಕೆ ಇದೆ. ಜಿಲ್ಲೆಯ ಕರಾವಳಿಯ ತಾಲೂಕುಗಳಲ್ಲಿ 50ಕ್ಕಿಂತ ಹೆಚ್ಚು ಕೊಬ್ಬರಿ ಎಣ್ಣೆ ತೆಗೆಯುವ ಸಣ್ಣ ಗಿರಣಿಗಳು ಕಾರ್ಯನಿರ್ವಹಿಸುತ್ತಿವೆ. ಇಬ್ಬರು- ಮೂವರು ಕಾರ್ವಿುಕರನ್ನಿಟ್ಟುಕೊಂಡು ಕಾರ್ಯನಿರ್ವಹಿಸುವ ಈ ಗಾಣಗಳು ಲಾಕ್ ಡೌನ್​ನಿಂದ ಸಂಪೂರ್ಣ ಬಂದ್ ಆಗಿವೆ.

    ಅಲ್ಲದೆ, ಕಾಯಿ ತುರಿಯನ್ನು ಪ್ಯಾಕೆಟ್ ಮಾಡಿ ಮಾರಾಟ ಮಾಡುವ ಯುನಿಟ್​ಗಳೂ ಸಾಕಷ್ಟಿದ್ದು, ಅವೂ ಕಾರ್ಯ ಸ್ಥಗಿತ ಮಾಡಿವೆ.

    ಸೀಜನ್: ಕಾಯಿಗಳನ್ನು ಒಣಗಿಸಿ ಎಣ್ಣೆ ಮಾಡಿಸಲು ಬೇಸಿಗೆ ಉತ್ತಮ ಅವಧಿ. ಭಾರಿ ಬಿಸಿಲಿಗೆ ಕಾಯಿ ಬಹು ಬೇಗ ಒಣಗಿ ಕೊಬ್ಬರಿಯಾಗುತ್ತದೆ. ಇದರಿಂದ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ರೈತರು ಕಾಯಿಗಳನ್ನು ಸುಲಿದು, ಒಡೆದು, ಒಣಗಿಸಿ ಕೊಬ್ಬರಿ ಎಣ್ಣೆ ಮಾಡಿಸಲು ಸಿದ್ಧತೆ ಮಾಡಿದ್ದಾರೆ. ಆದರೆ, ಗಿರಣಿಗಳು ಬಂದಾಗಿದ್ದರಿಂದ ರೈತರಲ್ಲಿ ಆತಂಕ ಉಂಟಾಗಿದೆ. ಎರಡು ತಿಂಗಳ ಹಾಗೆಯೇ ಇಟ್ಟರೆ ಒಡೆದು ಒಣಗಿಸಿಟ್ಟ ಕೊಬ್ಬರಿ ಹಾಳಾಗುತ್ತದೆ.

    ಬೆಲೆ ಕುಸಿಯುವ ಆತಂಕ: ಕತಗಾಲ ಎಪಿಎಂಸಿ ಪ್ರಾಂಗಣದಲ್ಲಿ ಕಳೆದ ಫೆಬ್ರವರಿಯಲ್ಲಿ 80,950 ಕಾಯಿಗಳು, ಮಾರ್ಚ್​ನಲ್ಲಿ 1235 ಕಾಯಿಗಳು ಮಾರಾಟವಾಗಿವೆ. ಪ್ರತಿ 100 ಕಾಯಿಗೆ ಗಾತ್ರದ ಆಧಾರದ ಮೇಲೆ 666 ರಿಂದ 2500 ರೂ.ವರೆಗೂ ಬೆಲೆ ಸಿಕ್ಕಿದೆ.

    ಲಾಕ್ ಡೌನ್ ಅವಧಿಯಲ್ಲಿ ಎಳನೀರು ಮಾರಾಟ ಸಂಪೂರ್ಣ ಸ್ಥಗಿತವಾಗಿದೆ. ಕುಮಟಾ ಹೊನ್ನಾವರ ತಾಲೂಕುಗಳಲ್ಲಿ ಎಳನೀರಿಗಾಗಿ ಸಾಕಷ್ಟು ಕಾಯಿ ಕೊಯ್ಯಲಾಗುತ್ತಿತ್ತು. ಅದು ಹಾಗೇ ಉಳಿದುಕೊಂಡಿದ್ದು, ಈಗ 16 ದಿನಗಳಲ್ಲಿ ಬೆಳೆದ ಕಾಯಿಯಾಗಿಬಿಟ್ಟಿದೆ.

    ಕೊಬ್ಬರಿ, ಕಾಯಿ ಎಲ್ಲ ಸೇರಿ ಸಾಕಷ್ಟು ಕಾಯಿ ಸಂಗ್ರಹವಾಗಿದ್ದು, ಲಾಕ್​ಡೌನ್ ಮುಗಿದ ನಂತರ ಒಮ್ಮೆಲೇ ಮಾರುಕಟ್ಟೆಗೆ ಬಂದರೆ ಬೆಲೆ ಕುಸಿಯುವ ಆತಂಕ ಬೆಳೆಗಾರರಲ್ಲಿ ಉಂಟಾಗಿದೆ.

    ಎಣ್ಣೆಗೆ ಭಾರಿ ಬೇಡಿಕೆ: ಉತ್ತರ ಕನ್ನಡದ ಕರಾವಳಿಯ ನೈಸರ್ಗಿಕ ಎಣ್ಣೆಗೆ ಭಾರಿ ಬೇಡಿಕೆ ಇದೆ. ಇಲ್ಲಿ ತಯಾರಾದ ಕೊಬ್ಬರಿ ಎಣ್ಣೆ ಹಲವು ಬ್ರಾಂಡೆಂಡ್ ಕಂಪನಿಗಳ ಹೆಸರಿನಲ್ಲಿ ಮಾರಾಟವಾಗುತ್ತದೆ. ಕಾಯಿ ತುರಿ ವಿದೇಶಕ್ಕೂ ರಫ್ತಾಗುತ್ತದೆ.

    ಕೊಬ್ಬರಿ ಎಣ್ಣೆ ತಯಾರಿಕೆಗೆ ಇದು ಸೀಜನ್. ಇನ್ನು ಕೆಲವು ದಿನ ಇಟ್ಟರೂ ಅದು ಹಾಳಾಗಿಬಿಡುತ್ತದೆ. ಎಣ್ಣೆ ಗಿರಣಿಗಳು ಆಹಾರ ಸಂಸ್ಕರಣಾ ಘಟಕವಾಗಿದ್ದರಿಂದ ಸರ್ಕಾರದ ನಿಯಮದಂತೆ ಅದನ್ನು ನಡೆಸಬಹುದು. ಇಲ್ಲಿ ಹೆಚ್ಚು ಕಾರ್ವಿುಕರು ಇರುವುದಿಲ್ಲ. ಇದರಿಂದ ತೆರೆಯಲು ಅವಕಾಶ ನೀಡಬೇಕು ಎಂದು ಸ್ಥಳೀಯ ತಹಸೀಲ್ದಾರ್, ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರಕಿಲ್ಲ. – ಲಕ್ಷ್ಮೀನಾರಾಯಣ ತಿಮ್ಮಣ್ಣ ಹೆಗಡೆ ಬಂಡಿವಾಳ ಕೊಬ್ಬರಿ ಗಿರಣಿ ಮಾಲೀಕ

    ಕೊಬ್ಬರಿ ಗಿರಣಿಗಳು ಆಹಾರ ಸಂಸ್ಕರಣಾ ಘಟಕದ ವ್ಯಾಪ್ತಿಯಲ್ಲಿ ಬರುವುದರಿಂದ ಅದನ್ನು ತೆರೆಯಬಹುದು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ನಾಗರಾಜ ಸಿಂಗ್ರೇರ್, ಅಪರ ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts